ಯಾದಗಿರಿ ನಗರದ ಲುಂಬಿನಿ ಉದ್ಯಾನದಲ್ಲಿ ಗೌತಮ ಬುದ್ದ ಮೂರ್ತಿ ಸ್ಥಾಪಿಸಬೇಕೆಂದು ಆಗ್ರಹಿಸಿ ಅಂಬೇಡ್ಕರ್ ಸೇವಾ ಸಮಿತಿ ಪದಾಧಿಕಾರಿಗಳು ಯಾದಗಿರಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ʼಕಳೆದ ಒಂದು ದಶಕದಿಂದ ಉದ್ಯಾನವನ ನಿರ್ಮಿಸಿ ಹೆಸರಿಗಷ್ಟೇ ಲುಂಬಿನಿ ವನ ಎಂದು ಹೆಸರಿಟ್ಟಿದ್ದಾರೆ. ಆದರೆ ಇಲ್ಲಿಯವರೆಗೆ ಗೌತಮ ಬುದ್ದರ ಮೂರ್ತಿ ಪ್ರತಿಷ್ಠಾಪಿಸಿಲ್ಲ. ಉದ್ಯಾನದಲ್ಲಿ ಸ್ವಚ್ಛತೆ ನಿರ್ವಹಣೆ ಇಲ್ಲ. ಚರಂಡಿ ನೀರು ಉದ್ಯಾನದಲ್ಲಿ ಸಂಗ್ರಹವಾದ ಪರಿಣಾಮ ಮೀನುಗಳು ಸಾಯುತ್ತಿವೆ. ಇದರಿಂದ ಸುತ್ತಲೂ ದುರ್ವಾಸನೆ ಬೀರುತ್ತಿದೆʼ ಎಂದು ದೂರಿದರು.
ʼಕೂಡಲೇ ಲುಂಬಿನಿ ಉದ್ಯಾನವನ ಸ್ವಚ್ಛಗೊಳಿಸಬೇಕು. ಮಕ್ಕಳಿಗೆ ಆಟವಾಡಲು ಆಟಿಕೆಗಳು ಇರಿಸಬೇಕು. ಉದ್ಯಾನದಲ್ಲಿ ಶೀಘ್ರದಲ್ಲೇ ಗೌತಮ ಬುದ್ದರ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕುʼ ಎಂದು ಒತ್ತಾಯಿಸಿದರು.
ಅಂಬೇಡ್ಕರ್ ಸೇವಾ ಸಮಿತಿಯ ಪ್ರಮುಖರಾದ ಆಂಜನೇಯ ಭಂಡಾರಿ, ಸೈದಪ್ಪ ಕೂಲೂರ್, ಮೌನೇಶ್ ಗಿರಿಪ್ಪನೋರ್, ರಾಮು ಗಣಪುರ, ರಾಧಾಕೃಷ್ಣ ಕೌಳೂರ್, ಬಾಲು ಹಳ್ಳಿ ಹಾಜರಿದ್ದರು.