ಎರಡು ಬೈಕ್‌ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಊರಿನ ನಾಲ್ವರು ಯುವಕರು ಮೃತಪಟ್ಟಿರುವ ದಾರುಣ ಘಟನೆ ಸೇಡಂ ತಾಲ್ಲೂಕಿನ ತೆಲ್ಕೂರ್-ಹಾಬಾಳ ರಸ್ತೆ ಮಾರ್ಗದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಸೇಡಂ ತಾಲ್ಲೂಕಿನ ಹಾಬಾಳ(ಟಿ) ಗ್ರಾಮದ ಸಿದ್ದು ಕಿಶನ್ (25), ಸುರೇಶ್ ಪುಂಡರೆಡ್ಡಿ (20), ಮಲ್ಲಿಕಾರ್ಜುನ ರೇವಣಪ್ಪ (20) ಹಾಗೂ ಪ್ರಕಾಶ್ ತಿಪ್ಪಣ್ಣ ಪೂಜಾರಿ (19) ಮೃತ ಯುವಕರು ಎಂದು ತಿಳಿದು ಬಂದಿದೆ.
ಹಾಬಾಳ ಗ್ರಾಮದಿಂದ ಬರುತ್ತಿದ್ದ ಬೈಕ್‌ಗೆ ಸೇಡಂ ಕಡೆಯಿಂದ ಹೊರಟಿದ್ದ ಬೈಕ್ ಅಪ್ಪಳಿಸಿದೆ. ಅಪಘಾತದ ತೀವ್ರತೆಗೆ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಗಾಯಗೊಂಡ ಇಬ್ಬರನ್ನು ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳಿದಿದ್ದಾರೆ.
ಅಪಘಾತದ ರಭಸಕ್ಕೆ ಬೈಕ್‌ಗಳು ನುಜ್ಜುಗುಜ್ಜಾಗಿದ್ದು, ರಸ್ತೆಯಿಂದ ದೂರದಲ್ಲಿ ಬಿದ್ದಿವೆ. ಸ್ಥಳಕ್ಕೆ ಸೇಡಂ ಠಾಣೆಯ ಪಿಎಸ್‌ಐ ಮಂಜುನಾಥ ರೆಡ್ಡಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.