ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಖಾಸಗಿ ಶಾಲೆಯ ಅಟೆಂಡರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಶಾಲೆಯ ಅಧ್ಯಕ್ಷ, ಪ್ರಾಚಾರ್ಯ ಹಾಗೂ ಗುಮಾಸ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪಟ್ಟಣದ ಎಸ್.ಕೆ ಪಬ್ಲಿಕ್ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಟೆಂಡರ್ ವಿನಾಯಕ ಮಹಾಂತೇಶ ಪಾಟೀಲ ಅವರು ನೀಡಿದ ದೂರಿನ ಮೇರೆಗೆ, ಶಾಲೆಯ ಅಧ್ಯಕ್ಷ ಚನ್ನಬಸಪ್ಪ (ಪಿಂಟು) ರವೀಂದ್ರ ಶೆಟ್ಟಿ, ಪ್ರಾಚಾರ್ಯ ರಾಘವೇಂದ್ರ ಕುಲಕರ್ಣಿ ಹಾಗೂ ಕ್ಲರ್ಕ್ ಶಂಕರ ಅಲಗರಾವುತ ವಿರುದ್ಧ ದೂರು ದಾಖಲಿಸಲಾಗಿದೆ.
ಮಾರ್ಚ್ 6ರಂದು, ಶಾಲೆಯ ಆಡಳಿತ ಮಂಡಳಿ ಕೊಠಡಿಯಲ್ಲಿ ಈ ಮೂವರು ಸೇರಿ ಅಟೆಂಡರ್ ಪಾಟೀಲ ಅವರನ್ನು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ದೈಹಿಕ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹಲ್ಲೆಯಿಂದ ತೀವ್ರ ಅಸ್ವಸ್ಥರಾದ ಪಾಟೀಲ ಅವರನ್ನು ತಕ್ಷಣವೇ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಈ ಪ್ರಕರಣದ ಸಂಬಂಧ ಭಾರತೀಯ ದಂಡ ಸಂಹಿತೆ 2023ರ ಸೆಕ್ಷನ್ 126(2), 115(2), 352, 351, 3(5) ಅಡಿಯಲ್ಲಿ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸ್ಥಳೀಯರು ಈ ಘಟನೆಯನ್ನು ಖಂಡಿಸಿ, ಪೊಲೀಸರಿಂದ ನ್ಯಾಯೋಚಿತ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.