ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ರೈತ ಸೇನಾ ರಾಜ್ಯಾಧ್ಯಕ್ಷ ವಿರೇಶ ಸೊಬರದಮಠ ಮಹದಾಯಿ ನೀರಿನ ಪರ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿಯ ವಿರುದ್ಧ ರೈತರು ಗಟ್ಟಿಯಾಗಿ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಲೋಕಸಭಾ ಚುನಾವಣೆಗೂ ಮುನ್ನ ಮಹದಾಯಿ ಯೋಜನೆಗೆ ಮೂರು ತಿಂಗಳಲ್ಲಿ ಅನುಮತಿ ತರುತ್ತೇವೆ ಎಂದು ಭರವಸೆ ನೀಡಿದ್ದ ಪ್ರಹ್ಲಾದ ಜೋಶಿ, ಇದೀಗ ಜನತೆಗೂ ರೈತ ಸಮುದಾಯಕ್ಕೂ ದ್ರೋಹ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.
‘ಭರವಸೆ ಮುರಿದ ಕೇಂದ್ರ, ಹೋರಾಟ ಅನಿವಾರ್ಯ’
ಶಾಸಕರು ಮತ್ತು ಸಂಸದರು ಮಹದಾಯಿ ವಿಷಯದಲ್ಲಿ ರಾಜಕೀಯ ಲಾಭ ಪಡೆಯುತ್ತಿದ್ದಾರೆ. ಆದರೆ ಧಾರವಾಡ-ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕದ ಜನತೆಗೆ ನೀರಿನ ಅಗತ್ಯ ಅತ್ಯಂತ ಗಂಭೀರವಾಗಿದೆ. ಮಲಪ್ರಭಾ ನದಿಯಿಂದ ತುಂಬು ಪ್ರಮಾಣದಲ್ಲಿ ನೀರು ಒದಗಿಸುವಂತಾಗದೆ, ಮುಂದಿನ ಎರಡು ತಿಂಗಳಲ್ಲಿ ಅಣೆಕಟ್ಟು ಸಂಪೂರ್ಣ ಖಾಲಿಯಾಗುವ ಭೀತಿ ಎದುರಾಗಿದೆ ಎಂದು ವಿರೇಶ ಸೊಬರದಮಠ ಎಚ್ಚರಿಸಿದರು.
ಹೋಳಿಯ ಬಳಿಕ ಭಾರಿ ಹೋರಾಟ
ಮಹದಾಯಿ ನೀರಿಗಾಗಿ ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದ್ದು, ಹೋಳಿ ಹಬ್ಬದ ನಂತರ ರೈತರು ಒಗ್ಗೂಡಿ ಧರಣಿಗೆ ಮುಂದಾಗಲಿದ್ದಾರೆ. ಪ್ರಹ್ಲಾದ ಜೋಶಿಯ ಮನೆ ಮುಂದೆ ಪ್ರತಿಭಟನೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದ್ದು, ಮಹದಾಯಿಗೆ ಶಾಶ್ವತ ಪರಿಹಾರ ಒದಗಿಸಲು ಕೇಂದ್ರ ಒತ್ತಡ ಹೇರುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಲಾಗಿದೆ.
‘ಗೋವಾ ಸರ್ಕಾರದ ಅಡ್ಡಿ – ಕೇಂದ್ರದ ನಿರ್ಲಕ್ಷ್ಯ’
ಮಹದಾಯಿ ಯೋಜನೆಯ ಅಡಿಯಲ್ಲಿ 36 ಗ್ರಾಮಗಳ ಸ್ಥಳಾಂತರ, 300 ಕಿಲೋಮೀಟರ್ ಕಾಲುವೆ ನಿರ್ಮಾಣ ಮತ್ತು 2.25 ಲಕ್ಷ ಹೆಕ್ಟೇರ್ ಭೂಮಿ ನೀರಾವರಿ ಘೋಷಿಸಲಾಗಿದೆ. ಆದರೆ ಗೋವಾ ಸರ್ಕಾರ ಈ ಕುರಿತು ಸರಿಯಾದ ಮಾಹಿತಿ ಪಡೆಯದೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ರಾಜ್ಯ ಸರ್ಕಾರ ಕೇಂದ್ರಕ್ಕೆ ಸೂಕ್ತ ವಿವರಗಳನ್ನು ನೀಡಿದರೂ, ಈ ವಿಚಾರದಲ್ಲಿ ಮುಂದುವರಿದ ಪ್ರಗತಿ ಕಂಡುಬಂದಿಲ್ಲ.
ನೀರಿಗಾಗಿ ಹೋರಾಟ ದುರದೃಷ್ಟಕರವಾಗಿದ್ದು, ಶಾಶ್ವತ ಪರಿಹಾರಕ್ಕಾಗಿ ಮಹದಾಯಿ ಹೋರಾಟವು ಜನಾಂದೋಲನ ರೂಪ ಪಡೆಯಬೇಕಾಗಿದೆ ಎಂದು ರೈತ ಸೇನಾ ಮುಖಂಡರು ಆಗ್ರಹಿಸಿದ್ದಾರೆ.