ನೀರಿನ ಸಮಸ್ಯೆಯಿಂದ ಜನರು ತತ್ತರಿಸುತ್ತಿದ್ದಾರೆ. ಹಾಗಾಗಿ ನೀರು ಪೂರೈಕೆಯ ಕಾಮಗಾರಿಗಳು ಸಮರ್ಪಕವಾಗಿ ಸಾಗಬೇಕಾಗಿದೆ ಎಂದು ರಾಜ್ಯ ಕಾರ್ಮಿಕ ಸಚಿವ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ತಿಳಿಸಿದರು.
ಬೆಂಗಳೂರಿನ ವಿಧಾನಸೌಧದ ಕಚೇರಿಯಲ್ಲಿ ನಡೆದ ಧಾರವಾಡ ಜಿಲ್ಲೆಯ ಪ್ರಗತಿ ಪರಿಸೀಲನಾ ಸಭೆಯಲ್ಲಿ ಮಾತನಾಡಿದರು.
“ಧಾರವಾಡ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಮಲಪ್ರಭಾ ನದಿಯ ನೀರು ಸಮರ್ಪಕವಾಗಿ ಗ್ರಾಮಗಳಿಗೆ ಸರಬರಾಜು (ಪೂರೈಕೆ) ಕಾಮಗಾರಿ ವ್ಯವಸ್ಥೆ ಮತ್ತು ಹೆದ್ದಾರಿ ರಸ್ತೆ ಅಗಲೀಕರಣ ಮಾಡುವ ಕಾರ್ಯಗಳು ಸಮರ್ಪಕವಾಗಿ ವೇಗಗತಿಯಲ್ಲಿ ನಡೆಯಬೇಕು” ಎಂದು ತಿಳಿಸಿದರು.
“ಜಿಲ್ಲೆಯ ಗ್ರಾಮೀಣರ ಬಹುದಿನಗಳ ಬೇಡಿಕೆಯಾದ ಮಲಪ್ರಭಾ ನದಿಯಿಂದ ಕುಡಿಯುವ ನೀರು ಪೂರೈಕೆ ಯೋಜನೆ ಕಾಮಗಾರಿ ನಿಧಾನವಾಗಿ ಸಾಗುತ್ತಿದೆ. ಕಾಮಗಾರಿಯನ್ನು ಚುರುಕುಗೊಳಿಸಿ, ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಕಾಮಗಾರಿ ಕಳಪೆ ಆಗದೇ ಉತ್ತಮ ಗುಣಮಟ್ಟದಿಂದ ಕೂಡಿರಬೇಕು. ಇದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ನಿರಂತರ ನಿಗಾ ವಹಿಸಬೇಕು” ಎಂದು ಸೂಚನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಗದಗ | ಉದ್ಯಾನಗಳಲ್ಲಿ ಉದಯರಾಗ, ಸಂಧ್ಯಾರಾಗ ಕಾರ್ಯಕ್ರಮ ಪುನರಾರಂಭ
“ಜಿಲ್ಲೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸುವುದು ನಮ್ಮ ಜವಾಬ್ದಾರಿಯಾರುವ ಕಾರಣ ಸರಿಯಾದ ನಿಟ್ಟಿನಲ್ಲಿ ಕಾಮಗಾರಿಗಳು ನಡೆಯಬೇಕು” ಎಂದು ಹೇಳಿದರು.
ಕರ್ನಾಟಕ ಕಾರ್ಮಿಕ ಮಂಡಳಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಧಾರವಾಡ ಜಿಲ್ಲಾಧಿಕಾರಿ, ಜಿಲ್ಲೆಯ ಇತರೆ ಅಧಿಕಾರಿಗಳು, ಜಿಲ್ಲಾ ಶಾಸಕರುಗಳು ಇದ್ದರು.