ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರ ಪ್ರಾತಿನಿಧ್ಯ ಏಕೆ ಕಡಿಮೆ ಗೊತ್ತೇ? "ಅವಳಿಗೇ ಸಾಮರ್ಥ್ಯ ಇಲ್ಲ. ಅವಳೇ ಉತ್ಸಾಹ ತೋರಿಸುವುದಿಲ್ಲ. ನಾಯಕತ್ವ ವಹಿಸಿಕೊಳ್ಳುವ ಆತ್ಮವಿಶ್ವಾಸ ಇಲ್ಲ..." ಮುಂತಾದ ಗಾಳಿಮಾತುಗಳನ್ನು ಆಗಾಗ್ಗೆ ತೇಲಿಬಿಡುವವರು ಯಾರು ಗೊತ್ತೇ?
ಪುರುಷಪ್ರಧಾನತೆಯ ಯಥಾಸ್ಥಿತಿ ಕಾಪಿಟ್ಟುಕೊಳ್ಳಲು, ಕುಟುಂಬದಿಂದ ಹಿಡಿದು ಶಿಕ್ಷಣ, ಆರೋಗ್ಯ, ಮಾಧ್ಯಮ, ರಾಜಕೀಯ, ಧರ್ಮ, ಉದ್ಯೋಗ, ಸಾರ್ವಜನಿಕ… ಹೀಗೆ ಸಮಾಜದ ಪ್ರತಿಯೊಂದು ವಲಯದಲ್ಲೂ ಮಹಿಳೆಯರ ಮೇಲಿನ ನಿಯಂತ್ರಣದ ಎಳೆಗಳು ನೇರವಾಗಿ ಮತ್ತು ಪರೋಕ್ಷವಾಗಿ ಕಂಡುಬರುತ್ತವೆ. ಈ ಎಲ್ಲ ವಲಯಗಳಲ್ಲೂ ಚಲನಶೀಲತೆ, ಪ್ರಜನನ ಅನುಭವ, ದೇಹ, ಭಾಷೆ, ವಿರಾಮ, ಮನರಂಜನೆ ಇತ್ಯಾದಿ ಅಂಶಗಳ ಮೇಲೆ ವಿವಿಧ ಸ್ವರೂಪಗಳಲ್ಲಿ ಕಡಿವಾಣ ಹಾಕಿರುವುದನ್ನು ಗಮನಿಸಬಹುದು. ಅದರಲ್ಲೂ ನೇರ ಜುಟ್ಟು ಹಿಡಿದು ನಿಲ್ಲಿಸಬೇಕೆಂದರೆ ಕೆಲವು ಅಂಶಗಳ ಮೇಲೆ ನಿಯಂತ್ರಣ ಅತ್ಯಂತ ನಿರ್ಣಾಯಕವಾಗುತ್ತದೆ. ಅದಕ್ಕಾಗಿಯೇ ಆರ್ಥಿಕತೆ, ಪ್ರಾತಿನಿಧ್ಯ, ನಿರ್ಧಾರ ತೆಗೆದುಕೊಳ್ಳುವ ಅವಕಾಶ, ಪ್ರಶ್ನೆ ಕೇಳುವ ಅವಕಾಶ… ಮುಂತಾದುವುಗಳ ಮೇಲೆ ವಿಶೇಷವಾಗಿ ಕಡಿವಾಣ ಹಾಕಲಾಗುತ್ತದೆ!
ಎಲ್ಲ ವಲಯಗಳಲ್ಲೂ ಗಮನಿಸಿ ನೋಡಿದರೆ, ಹಣಕಾಸಿನ ವ್ಯವಹಾರಗಳಲ್ಲಿ ಮಹಿಳೆಯರ ಪಾತ್ರ ಬಹಳ ಕಡಿಮೆ. ಕುಟುಂಬದ ನೆಲೆಯಲ್ಲಿ ನೋಡಿದರೆ ಮಹಿಳೆಯರ ದುಡಿಮೆಗೆ ಮಾನ್ಯತೆಯೇ ಇಲ್ಲ. ಸಂಪಾದನೆ ಮಾಡುವ ಹೆಣ್ಣುಮಕ್ಕಳ ಎಟಿಎಮ್ ಕಾರ್ಡ್ ಅವರ ಕೈಯಲ್ಲಿ ಇಲ್ಲದಿರುವ ಉದಾಹರಣೆಗಳೂ ಬೇಕಾದಷ್ಟು ಇವೆ. ರಾಜಕೀಯ ವಲಯದಲ್ಲಿ ನೋಡಿದರೆ, ಸ್ವಂತವಾಗಿ ಹಣ ಚೆಲ್ಲುವುದಕ್ಕೆ ಸಾಧ್ಯವಾಗದಿರುವುದೇ ಚುನಾವಣಾ ರಾಜಕೀಯದಲ್ಲಿ ಅವರ ಭಾಗವಹಿಸುವಿಕೆಗೆ ಅಡ್ಡಿಯಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚು ಸಂಪಾದನೆ ಮಾಡುವ ಹುದ್ದೆಗಳಲ್ಲಿ ಮಹಿಳೆಯರು ಇರುವುದು ಬಹಳ ಕಡಿಮೆ. ಇನ್ನೂ ತಮಾಷೆಯ ವಿಷಯವೆಂದರೆ, ತನ್ನ ಸಂಪಾದನೆಯ ಮೇಲೆ ಅವಳು ತಾನೇ ತಾನಾಗಿ ಏನಾದರೂ ನಿರ್ಧಾರ ತೆಗೆದುಕೊಳ್ಳುತ್ತಾಳೆಂದರೆ, “ಅಬ್ಬಾ, ಅವಳ ಸೊಕ್ಕೇ…” ಎಂಬ ಮಾತು ಬರುತ್ತದೆ. “ದುಡಿದು ತಂದು ಹಾಕುವವನು ನಾನು,” ಅಂತ ಪದೇಪದೆ ಪುರುಷರು ಹೇಳುವ ಮಾತು ಆ ಹೊತ್ತಿನಲ್ಲಿ ನೆನಪಿಗೇ ಬರುವುದಿಲ್ಲ.
ಈ ಆಡಿಯೊ ಕೇಳಿದ್ದೀರಾ?: ಕಾಲದಾರಿ | ‘ಹೆಣ್ಣುಮಕ್ಕಳ ಜಾಲಿ ಟ್ರಿಪ್’ ಎಂದು ಸಸಾರ ಮಾತಾಡುವವರು ಗಮನಿಸಬೇಕು…
‘ನಿರ್ಧಾರ ತೆಗೆದುಕೊಳ್ಳುವ ಅವಕಾಶ’ ಕೊಡದೆ ಇರುವುದು ಇನ್ನೊಂದು ಅತಿ ಪ್ರಮುಖ ನಿಯಂತ್ರಣ. ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನೇ ದಮನ ಮಾಡುವುದು ಅಥವಾ ನಿರ್ಧಾರ ತೆಗೆದುಕೊಳ್ಳುವಲ್ಲಿ ಮಹಿಳೆಯರು ಪಾಲ್ಗೊಳ್ಳದಿರುವಂತೆ ನೋಡಿಕೊಳ್ಳುವ ಮೂಲಕ ಅವರ ಬಾಯಿ ಮುಚ್ಚಿಸುವುದು ಪುರುಷಪ್ರಧಾನತೆಯ ವಿನ್ಯಾಸದ ಮಹಾಸೂತ್ರ. ಅದಕ್ಕಾಗಿ ನಮಗೆ ಸಾಧಾರಣವಾಗಿ ನಾಯಕತ್ವ ಸ್ಥಾನದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಾಣುವುದಿಲ್ಲ. ಮಹಿಳೆಯರು ನಾಯಕತ್ವದ ಸ್ಥಾನಗಳಲ್ಲಿ ಇರುವಾಗ ಅವರ ಎದುರು ಸವಾಲುಗಳು ಬೆಟ್ಟದಂತೆ ನಿಲ್ಲುತ್ತವೆ. ಮಹಿಳೆಯರ ಸಾಮರ್ಥ್ಯದ ಬಗ್ಗೆ ನಿರಂತರವಾಗಿ ಬೆನ್ನಟ್ಟುವ ಅನುಮಾನವಂತೂ ಆತ್ಮವಿಶ್ವಾಸಕ್ಕೆ ಹೊಡೆತ ನೀಡುತ್ತಲೇ ಇರುತ್ತವೆ. ಇದರ ಜೊತೆಜೊತೆಗೇ ಪ್ರಶ್ನೆ ಕೇಳುವ ಸಾಧ್ಯತೆಯೇ ಬೆಳೆಯದ ಹಾಗೆ ನೋಡಿಕೊಳ್ಳುತ್ತದೆ ಈ ವ್ಯವಸ್ಥೆ. ಚಿಕ್ಕಂದಿನಿಂದಲೇ ಹಂತಹಂತವಾಗಿ ಪ್ರಶ್ನೆ ಕೇಳುವಾಗೆಲ್ಲ ಬಾಯಿ ಮುಚ್ಚಿಸಿ, ಮುಂದಕ್ಕೆ ಪ್ರಶ್ನೆಗಳೇ ಹುಟ್ಟದ ಹಾಗೆ ನೋಡಿಕೊಳ್ಳುತ್ತದೆ ಈ ವ್ಯವಸ್ಥೆ. ಪ್ರಶ್ನೆ ಕೇಳುವ ಮನಸ್ಸು ವೈಚಾರಿಕವಾಗಿ ಚಿಂತನೆ ಮಾಡತೊಡಗುತ್ತದೆ, ಹೇಳಿದ್ದನ್ನೆಲ್ಲ ಹೇಳಿದ ಹಾಗೆ ಒಪ್ಪಿಕೊಳ್ಳುವುದಿಲ್ಲ. ಅಂತಹ ಮನಸ್ಸು ಪುರುಷಪ್ರಧಾನ ವ್ಯವಸ್ಥೆಗೆ ಬೇಕಾಗಿಲ್ಲ. ಅಧೀನತೆಯನ್ನು ಒಪ್ಪಿಕೊಳ್ಳುವ ಮನಸ್ಸುಗಳನ್ನು ಅದ್ಭುತವಾಗಿ ರೂಪಿಸುತ್ತದೆ ಈ ವ್ಯವಸ್ಥೆ.
ಹಕ್ಕಾಗಿ ಪಡೆಯುವುದು ಮತ್ತು ದಾನವಾಗಿ ಕೊಡುವುದು ಎಂಬ ಎರಡು ಅಂಶಗಳನ್ನು ಗಮನಿಸುವುದು ಈ ಸಂದರ್ಭದಲ್ಲಿ ಮುಖ್ಯವಾಗಿದೆ. ‘ತವರುಮನೆಯ ಆಸ್ತಿಗಿಂತ ತವರು ಮನೆಯಿಂದ ಸಿಗುವ ಪ್ರೀತಿ ದೊಡ್ಡದು’ – ಅನ್ನುವ ಒಂದು ವಿಚಾರವನ್ನು ತರಬೇತಿಗಳಲ್ಲಿ ಚರ್ಚೆಗೆ ನೀಡುತ್ತೇವೆ. ಈ ಮಾತಿಗೆ ಅತಿ ಹೆಚ್ಚು ಪ್ರಮಾಣದಲ್ಲಿ ಸಮ್ಮತಿ ಸಿಗುತ್ತದೆ. ಬಹಳ ಭಾವುಕತೆಯಿಂದ ತವರುಮನೆಯ ಪ್ರೀತಿ ಎಷ್ಟು ಮುಖ್ಯ, ಈ ಆಸ್ತಿ-ಅಂತಸ್ತು ಅನ್ನುವ ಕಿತ್ತಾಟ ಅನಗತ್ಯ ಎಂದು ಹೇಳುತ್ತಾರೆ. ಇಲ್ಲಿ ಒಂದು ಸಣ್ಣ ಅನುಮಾನ. ಪ್ರೀತಿ ಇದ್ದರೆ ಆಸ್ತಿ ಕೊಡುವುದಕ್ಕೆ ಏನು ತೊಂದರೆ? ಆಸ್ತಿ ಆ ಮನೆಯ ಮಗಳಂದಿರ ಹಕ್ಕು. ಏನು ಇದೆಯೋ ಅದನ್ನು ಹಕ್ಕಾಗಿ ಒದಗಿಸಿದರೆ ಆಯಿತು. ಅದನ್ನು ಮನೆಮಗಳು ಕೇಳುವುದು ಜಗಳ, ಮನಸ್ತಾಪಗಳಿಗೆ ಯಾಕೆ ಕಾರಣ ಆಗಬೇಕು? ಅದರಿಂದಾಗಿ ಪ್ರೀತಿಗೆ ಯಾಕೆ ಧಕ್ಕೆ ಬರಬೇಕು? ಪರಿಸ್ಥಿತಿ ಅಷ್ಟೊಂದು ಅನುಕೂಲಕರ ಆಗಿಲ್ಲದಿದ್ದರೆ, ತನ್ನ ಹಕ್ಕನ್ನು ಅವಳು ಬಿಟ್ಟುಕೊಡಬಹುದು. ಆದರೆ, ಅವಳು ಕೇಳುವುದನ್ನೇ ಸಣ್ಣತನ ಎಂಬಂತೆ ಯಾಕೆ ನೋಡಬೇಕು? ಪ್ರೀತಿಯ ಹೆಸರಿನಲ್ಲಿ ತವರುಮನೆಯವರು ಆಸ್ತಿ ಹಂಚಿಕೊಳ್ಳದೆ ಇರುವುದು ಕೂಡ ಸಣ್ಣತನವೇ ತಾನೇ? ಇಲ್ಲಿ ಸ್ಪಷ್ಟವಾಗಿ ಭಾವನಾತ್ಮಕವಾಗಿ ಹೆಣ್ಣುಮಕ್ಕಳನ್ನು ಕಟ್ಟಿಹಾಕಿರುವುದು ಕಾಣುತ್ತದೆ. ಈ ಭಾವನೆಗಳನ್ನು ಮೀರಿ ಕೇಳಿದವರು ಕೆಟ್ಟವರು ಅನ್ನಿಸಿಕೊಳ್ಳುತ್ತಾರೆ (ಈ ಎಲ್ಲ ಸಂದರ್ಭಗಳಲ್ಲಿ ಕಾನೂನು, ಹಕ್ಕು ಅನ್ನುವುದರ ಜೊತೆಗೆ ಮಾನವೀಯತೆ ಎಂಬ ಅಂಶವನ್ನು ಎಲ್ಲರೂ ನೆನಪಿಟ್ಟು ವ್ಯವಹರಿಸುವುದು ಮುಖ್ಯವಾಗುತ್ತದೆ ಎಂಬುದೂ ಸತ್ಯ).

ಉಡುಗೊರೆ ಕೊಡುವುದು, ದಾನ ಕೊಡುವುದು ಬೇರೆ ವಿಷಯ. ನಮ್ಮ ಮಂದಿ ದಾನ ಕೊಡುವುದಕ್ಕೆ ಸಿದ್ಧರಾಗಿರುತ್ತಾರೆ. ದಾನ ಮಾಡುವುದು ಹೆಗ್ಗಳಿಕೆ ನೀಡುತ್ತದೆ. ಪುಣ್ಯ ಸಿಗುತ್ತದೆ ಎಂಬ ನಂಬಿಕೆ ಕೂಡ ಇದೆ. ಆದರೆ, ಅವರಿಗೆ ಅದು ಹಕ್ಕಾಗಿ ಸಿಗಬೇಕಾಗಿರುವುದು ಎಂಬ ಅಂಶವನ್ನು ಒಪ್ಪಿಕೊಳ್ಳಲು ಒಳಗೊಳಗಿಂದಲೇ ಚಡಪಡಿಸುತ್ತಾರೆ. ಹಕ್ಕು ಪಡೆಯಲು ಸಹಕರಿಸುವುದು ಎಂದರೆ ಪವರ್ ಕೊಟ್ಟ ಹಾಗೆ; ದಾನ, ಉಡುಗೊರೆಗಳು ಅವಲಂಬನೆ ಬೆಳೆಸಿದ ಹಾಗೆ. ಅಷ್ಟೇ ಅಲ್ಲ, ದಾನ ಎಂಬುದು ಕೊಡುವವರಿಗೆ ಮನಸ್ಸಿದ್ದರೆ ಮಾತ್ರ ಸಾಧ್ಯವಾಗುತ್ತದೆ. ಅದು ಕೊಡುವವರ ಮರ್ಜಿಯ ಮೇಲೆ ನಿಂತಿದೆ. ದಾನದ ಜೊತೆಗೆ ಋಣದ ಹೊರೆ ಇರುತ್ತದೆ, ಅವಲಂಬನೆ ಇರುತ್ತದೆ. ಆದರೆ ಹಕ್ಕು ಹಾಗಲ್ಲ. ಹಕ್ಕಾಗಿ ಪಡೆದರೆ, ಪಡೆದವರ ಮೇಲೆ ನಿಯಂತ್ರಣ ಮಾಡುವುದಕ್ಕೆ ಆಗುವುದಿಲ್ಲ. ಸಿಗಬೇಕಾಗಿರುವುದು ಸಿಕ್ಕಿದೆ ಅಂತ ಆಗುತ್ತದೆ ಅಷ್ಟೆ. ವಿಷಯ ಇಷ್ಟೆ; ಆಸ್ತಿಯ ಹಕ್ಕು ತಾನಾಗಿ ಸಿಗುವ ಬಗ್ಗೆ ಕಸಿವಿಸಿ ಪಡಬೇಕಾಗಿಲ್ಲ ಮತ್ತು ಆ ಕಾರಣಕ್ಕಾಗಿ ಪ್ರೀತಿ, ಬಾಂಧವ್ಯಗಳಿಗೆ ಧಕ್ಕೆ ಬರಬೇಕಾಗಿಲ್ಲ ಅಂತ ಯೋಚಿಸುವ ಮನಸ್ಥಿತಿ ಬರಬೇಕಾಗಿದೆ.
ಇವೆಲ್ಲವನ್ನೂ ಆಳವಾಗಿ ಗಮನಿಸಿದರೆ ಒಂದು ಸರಳ ಸಮೀಕರಣವನ್ನು ಕಾಣಬಹುದು. ಒಬ್ಬ ವ್ಯಕ್ತಿಗೆ ಯಾವುದೆಲ್ಲ ಶಕ್ತಿ ಕೊಡಬಹುದೋ ಅವೆಲ್ಲವನ್ನೂ ನಿಯಂತ್ರಣದಲ್ಲಿ ಇರಿಸಿದರೆ, ಅಂದರೆ ರೆಕ್ಕೆ ಬಲಿಯುವುದಕ್ಕೇ ಬಿಡದೆಹೋದರೆ, ಎದುರು ನಿಲ್ಲುವ, ಎತ್ತರಕ್ಕೆ ಹಾರುವ ಪ್ರಶ್ನೆಯೇ ಇಲ್ಲವಲ್ಲ! ಇಷ್ಟಾದ ಮೇಲೆ, “ಅವಳಿಗೇ ಸಾಮರ್ಥ್ಯ ಇಲ್ಲ. ಅವಳೇ ಉತ್ಸಾಹ ತೋರಿಸುವುದಿಲ್ಲ. ನಾಯಕತ್ವ ವಹಿಸಿಕೊಳ್ಳುವ ಆತ್ಮವಿಶ್ವಾಸ ಇಲ್ಲ. ನಾವು ಮನೆ ಕೆಲಸ ಮಾಡುವುದಕ್ಕೆ ಅವರೇ ಬಿಡುವುದಿಲ್ಲ,” ಅಂತ ಹೇಳುವುದು ಎಂತಹ ವಿಪರ್ಯಾಸ. ಬದುಕಿನ ಎಲ್ಲ ಹಂತಗಳಲ್ಲಿ ನಿಯಂತ್ರಣಕ್ಕೆ ಒಳಗಾಗುತ್ತ, ತನ್ನನ್ನು ತಾನು ಮರೆಯುವುದು, ತನ್ನನ್ನು ತಾನು ಈ ವಿಚಾರಗಳಿಗೆ ಒಪ್ಪಿಸಿಕೊಳ್ಳುವುದು, ಅದಕ್ಕೂ ಹೆಚ್ಚಾಗಿ ಪುರುಷಪ್ರಧಾನ ಚಿಂತನೆಗಳನ್ನೇ ತಾನೂ ಪ್ರತಿಪಾದಿಸುತ್ತ ಹೋಗುವುದು ಬಹಳ ಸಹಜ ಅನಿಸಿಬಿಡುತ್ತದೆ!
ಈ ಆಡಿಯೊ ಕೇಳಿದ್ದೀರಾ?: ನಮ್ ಜನ | ಅನ್ನ ಕೊಟ್ಟ ಅಂಬೇಡ್ಕರ್ ನಮ್ಮನೆ ದೇವ್ರು ಎನ್ನುವ ಡೇರ್ ಡ್ರೈವರ್ ಪ್ರೇಮಾ
ಸಮಾಜದ ಎಲ್ಲ ವಲಯಗಳಲ್ಲಿ ನಡೆಯುತ್ತಿರುವ ಈ ನಿಯಂತ್ರಣಗಳ ಜಾಲವನ್ನು ಮೀರಿ ಹೋಗುವವರು, ‘ಕೆಟ್ಟ ಮಹಿಳೆಯರು’ ಅನ್ನಿಸಿಕೊಂಡುಬಿಡುತ್ತಾರೆ. ‘ಒಳ್ಳೆಯ ಮಹಿಳೆ’ ಅನಿಸಿಕೊಳ್ಳುವುದೇ ಜೀವನದ ಪರಮ ಉದ್ದೇಶವಾಗಿ ಕಲಿಸಿಕೊಟ್ಟಿರುವುದರಿಂದ ಆ ಪ್ರತೀಕದಿಂದ ಹೊರಗೆ ದಾರಿ ಕಾಣಿಸುವುದಿಲ್ಲ. ಈ ‘ಒಳ್ಳೆ ಹುಡುಗಿ’ ಎಂಬ ಪೊಳ್ಳು ಪಟ್ಟಕ್ಕೆ ಸವಾಲು ಒಡ್ಡುವ ಹಾಗೆ ಒಂದು ಮಾತು ಇದೆ: ‘ಒಳ್ಳೆ ಹುಡುಗಿಯರು ಸ್ವರ್ಗಕ್ಕೆ ಹೋಗುತ್ತಾರೆ; ಹಾಗಾದರೆ ಕೆಟ್ಟವರು?
ಕೆಟ್ಟವರು ತಮಗೆ ಇಷ್ಟ ಬಂದೆಡೆ ಹೋಗುತ್ತಾರೆ…’ ನಿಜ… ಪುರುಷಪ್ರಧಾನ ವ್ಯವಸ್ಥೆಯ ಕಡಿವಾಣಗಳನ್ನು ಕಳಚಬೇಕಾದರೆ, ಮಹಿಳೆಯರು ಈ ‘ಒಳ್ಳೆ ಹುಡುಗಿ’ ಆಗುವ ಗುಂಗಿನಿಂದ ಹೊರಬಂದು, ‘ಕೆಟ್ಟ ಹುಡುಗಿ’ಯರಾಗುವ ದಿಟ್ಟತನ ತೋರಬೇಕಾಗುತ್ತದೆ.
ಬರಹಗಳನ್ನು ಆಲಿಸಲು ಇಲ್ಲಿ ಕ್ಲಿಕ್ ಮಾಡಿ: ಈದಿನ.ಕಾಮ್ ಕೇಳುದಾಣ
ಮುಖ್ಯ ಚಿತ್ರ ಕೃಪೆ: ಡ್ಯಾನ್ ರೊಮಿಯೊ
ತುಂಬಾ ಚೆನ್ನಾಗಿ ಬರೆದಿದ್ದೀರಿ.
ಪ್ರತಿಕ್ರಿಯೆಗಾಗಿ ಧನ್ಯವಾದ ಮೇಡಂ. ಈದಿನ.ಕಾಮ್ ಜಾಲತಾಣಕ್ಕೆ ಭೇಟಿ ನೀಡಿದ್ದಕ್ಕೆ ನನ್ನಿ. ನಿಮ್ಮಿಂದ ಇನ್ನಷ್ಟು ಪ್ರತಿಕ್ರಿಯೆ ನಿರೀಕ್ಷಿಸುತ್ತೇವೆ.
ತುಂಬಾ ಚನ್ನಾಗಿದೆ …
ಪ್ರತಿಯೊಬ್ಬ ಮಹಿಳೆಯೂ ಇದನ್ನು ಅರ್ಥೈಸಿಕೊಳ್ಳಬೇಕು.
ನಾನು ಮಾತ್ರ ಕೆಟ್ಟ ಹುಡುಗಿನೇ ..😁
ಥ್ಯಾಂಕ್ಯೂ ಮೇಡಂ. ಈದಿನ.ಕಾಮ್ ಜಾಲತಾಣಕ್ಕೆ ಭೇಟಿ ನೀಡಿದ್ದಕ್ಕೆ ನನ್ನಿ. ನಿಮ್ಮಿಂದ ಇನ್ನಷ್ಟು ಪ್ರತಿಕ್ರಿಯೆ ನಿರೀಕ್ಷಿಸುತ್ತೇವೆ.
ಬಹಳ ಅತ್ಯುತ್ತಮವಾಗಿ ಬರುತ್ತಿದ್ದೀರಿ ಮೇಡಂ ಸಮಾಜದಲ್ಲಿ ಮಹಿಳೆಯಗೆ ಸೂಕ್ತ ಪಾತ್ರ ನೀಡುವುದು ನಮ್ಮೆಲ್ಲರ ಕರ್ತವ್ಯ ಅದನ್ನು ನಿಮ್ಮಂತಹ ವ್ಯಕ್ತಿಗಳಿಂದ ನಿಮ್ಮ ಬರಹಗಳಿಂದ ಸೂಕ್ತ ಸ್ಥಾನಮಾನ ನೀಡೋಣ
ಪ್ರತಿಕ್ರಿಯೆಗಾಗಿ ಧನ್ಯವಾದ. ನಿಮ್ಮ ಮಾತನ್ನು ಲೇಖಕರಿಗೆ ತಲುಪಿಸಲಾಗಿದೆ. ಈದಿನ.ಕಾಮ್ ಜಾಲತಾಣಕ್ಕೆ ಭೇಟಿ ನೀಡಿದ್ದಕ್ಕೆ ನನ್ನಿ. ನಿಮ್ಮಿಂದ ಇನ್ನಷ್ಟು ಪ್ರತಿಕ್ರಿಯೆ ನಿರೀಕ್ಷಿಸುತ್ತೇವೆ.
ಸರಿ .😊