ಗಡಿಭಾಗದ ಈ ಪ್ರದೇಶದಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳಸಲು ನಾವೆಲ್ಲರೂ ಶ್ರಮಿಸಬೇಕಿದೆ. ಹಾಗೆಯೇ ಪ್ರತಿಯೊಬ್ಬರೂ ಪುಸ್ತಕವನ್ನು ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಅಮಾನಿ ಬೈರಸಾಗರ ಕೆರೆಯನ್ನು ಅಂತಾರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಬೇಕು ಎಂದು 6ನೇ ಸಮ್ಮೇಳನಾಧ್ಯಕ್ಷ ಸ ನ ನಾಗೇಂದ್ರ ಅವರು ಒತ್ತಾಯಿಸಿದರು.
ಕನ್ನಡ ಭವನ ನಿರ್ಮಾಣಕ್ಕಾಗಿ ಒತ್ತಾಯಿಸಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ ಮಂಜುನಾಥ್ ಅವರು ಶಾಸಕರಿಗೆ ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಕೋಡಿ ರಂಗಪ್ಪ, 6 ತಾಲೂಕುಗಳ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರು ತಾಲೂಕಿನ ಅಧಿಕಾರ ವರ್ಗ ಚುನಾಯಿತ ಪ್ರತಿನಿಧಿಗಳು ಹಾಜರಿದ್ದರು.
ಜಿಲ್ಲಾಧ್ಯಕ್ಷ ಕೋಡಿರಂಗಪ್ಪ ಮಾತನಾಡಿ, “ಮಾನವ ಕುಲವೊಂದೇ ವನಂ ಎಂಬ ಪಂಪನ ನಾಣ್ಣುಡಿಯಂತೆ ಕನ್ನಡಿಗರಲ್ಲಿ ಅರಿವು ಮೂಡಬೇಕು. ಸಾಹಿತ್ಯ ಬೆಳೆಯಲು ಶಿಕ್ಷಣ ಅತಿಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಶಿಕ್ಷಕ ವರ್ಗ ಮುಂದಾಗಬೇಕೆಂದು ನಿವೃತ್ತ ಉಪನ್ಯಾಸಕ ಬಿ ಅಮಿರ್ ಜಾನ್ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ನೇಮಿಸಿರುವುದು ಶ್ಲಾಘನೀಯ” ಎಂದರು.
ಕಾರ್ಯಕ್ರಮಕ್ಕೂ ಮುನ್ನ ಭಾರತರತ್ನ ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಆದಿರೆಡ್ಡಿ, ಸಿಪಿಎಂ ಕಾರ್ಯದರ್ಶಿ, ಬಿಜೆಪಿ ಅಧ್ಯಕ್ಷ ಗಂಗಿರೆಡ್ಡಿ ಸೇರಿದಂತೆ ಹಲವರು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ವರ್ಷಗಳಾದರೂ ಪೂರ್ಣಗೊಳ್ಳದ ಕಾಮಗಾರಿ; ಲಕ್ಷಾಂತರ ಹಣ ಗುಳುಂ
ನಗರದ ಮುಖ್ಯ ರಸ್ತೆಯಲ್ಲಿ ಬಂಗಾರಲೇಪಿತ ರಥದ ಮೆರವಣಿಗೆಯ ಮೂಲಕ ಕಲಾತಂಡಗಳೊಂದಿಗೆ ಸಮ್ಮೇಳನ ಅಧ್ಯಕ್ಷರನ್ನು ವೇದಿಕೆಗೆ ಕರೆತರಲಾಯಿತು. 6ನೇ ಸಮ್ಮೇಳನ ಅಧ್ಯಕ್ಷ ಸ ನ ನಾಗೇಂದ್ರ ಅವರು 7ನೇ ಸಮ್ಮೇಳನಾಧ್ಯಕ್ಷ ಬಿ ಅಮೀರ್ ಜಾನ್ ಅವರಿಗೆ ಕನ್ನಡ ಧ್ವಜವನ್ನು ಹಸ್ತಾಂತರ ಮಾಡಿದರು.