ಕಳೆದ ಮೂರು ವರ್ಷಗಳಿಂದ ಶುದ್ಧ ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಾಪೂರ ತಾಂಡಾ ನಿವಾಸಿಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತಿದ್ದಾರೆ. 2019ರಲ್ಲಿ ಸ್ಥಾಪಿತವಾದ ನೀರು ಶುದ್ಧೀಕರಣ ಘಟಕ ಇನ್ನೂ ಕಾರ್ಯಾರಂಭವಾಗದೆ, ಗ್ರಾಮಸ್ಥರು ಸಮಸ್ಯೆಗೆ ಸಿಲುಕಿದ್ದಾರೆ. ಜೊತೆಗೆ, ಅಂಗನವಾಡಿ ಕೇಂದ್ರಕ್ಕೆ ಗೇಟ್ ಇಲ್ಲದ ಕಾರಣ ಮಕ್ಕಳ ಭದ್ರತೆ ಗಂಭೀರ ಸಮಸ್ಯೆಯಾಗಿದೆ.

ಶುದ್ದ ನೀರಿಲ್ಲ, ಸ್ಪಂದನೆಯಿಲ್ಲ – ಅಧಿಕಾರಿಗಳ ಮೇಲೆ ಜನರ ಆಕ್ರೋಶ
“ಶುದ್ದ ನೀರು ಇಲ್ಲದೇ ಪರದಾಡುತ್ತಿದ್ದರೂ, ನಮ್ಮ ದೂರುಗಳಿಗೆ ಪ್ರತಿಕ್ರಿಯೆಯೇ ಇಲ್ಲ,” ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗ್ರಾಮ ಪಂಚಾಯಿತಿ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಗಮನಕ್ಕೆ ಈ ಸಮಸ್ಯೆಯನ್ನು ಅನೇಕ ಬಾರಿ ತರಲಾದರೂ, ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪ.

ಅಂಗನವಾಡಿ ಮಕ್ಕಳ ಸುರಕ್ಷತೆ ಅಪಾಯದಲ್ಲಿ
ಸಾಲಾಪೂರ ತಾಂಡಾದ ಅಂಗನವಾಡಿ ಕೇಂದ್ರಕ್ಕೆ ಗೇಟ್ ಇಲ್ಲ. “ಆವರಣದಲ್ಲಿ ಇಂಗು ಗುಂಡಿ ಇರುವುದರಿಂದ ಹಲವು ಮಕ್ಕಳು ಬಿದ್ದು ಗಾಯಗೊಂಡಿದ್ದಾರೆ. ಈ ಬಗ್ಗೆ ಅನೇಕ ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ,” ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಸೌಲಭ್ಯಗಳ ಕೊರತೆ – ಜನಜೀವನ ಸಂಕಷ್ಟ
ಸ್ಥಳೀಯ ನಿವಾಸಿ ಪಾಂಡುರಂಗ ಲಮಾಣಿ ಈ ದಿನ ಡಾಟ್ ಕಾಮ್ ಜತೆ ಮಾತನಾಡಿ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಾ, “ನಮ್ಮ ತಾಂಡಾದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಮೂರು ವರ್ಷಗಳಿಂದ ನಿಷ್ಕ್ರಿಯವಾಗಿದೆ. ಸಮುದಾಯ ಭವನವಿಲ್ಲ, ಅಂಗನವಾಡಿಗೆ ಗೇಟ್ ಇಲ್ಲ. ಈ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರೂ, ಯಾವುದೇ ಪ್ರಯೋಜನವಾಗಿಲ್ಲ, ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸುತ್ತಿಲ್ಲ” ಎಂದು ಹೇಳಿದರು.
ಅಧಿಕಾರಿಗಳ ಸ್ಪಂದನೆ – ಭರವಸೆ ಪಾಲನೆಯಾಗುವುದಾ?
ಈ ದಿನ ಡಾಟ್ ಕಾಮ್ ರಾಮದುರ್ಗ ತಾಲೂಕು ಪಂಚಾಯಿತಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ತಕ್ಷಣ ಸ್ಪಂದಿಸಿದರು. “ಅಂಗನವಾಡಿ ಕೇಂದ್ರಕ್ಕೆ ಗೇಟ್ ಅಳವಡಿಸಲು ಹಾಗೂ ಇಂಗು ಗುಂಡಿಯನ್ನು ಮುಚ್ಚುವಂತೆ ಸಂಬಂಧಿತ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ. ಮೂರು ದಿನಗಳೊಳಗೆ ಸಮಸ್ಯೆ ಬಗೆಹರಿಸಲಾಗುವುದು,” ಎಂದು ಭರವಸೆ ನೀಡಿದ್ದಾರೆ.
ಅಧಿಕಾರಿಗಳ ಈ ಭರವಸೆ ಈಡೇರುತ್ತದೆಯಾ? ಗ್ರಾಮಸ್ಥರ ತೊಂದರೆಗಳಿಗೆ ಇತ್ಯರ್ಥ ಸಿಗುತ್ತದೆಯಾ? ಇದನ್ನು ಕಾದು ನೋಡಬೇಕಿದೆ.