ಗುಟ್ಕಾ ಬ್ರ್ಯಾಂಡ್ ಒಂದಕ್ಕೆ ಸಂಬಂಧಿಸಿದಂತೆ ಜನರನ್ನು ತಪ್ಪುದಾರಿಗೆಳೆಯುವ ಜಾಹೀರಾತು ನೀಡಿದ ಆರೋಪದ ಮೇಲೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಅವರಿಗೆ ಜೈಪುರದ ಜಿಲ್ಲಾ ಗ್ರಾಹಕ ಆಯೋಗ ಸಮನ್ಸ್ ಜಾರಿಗೊಳಿಸಿದೆ.
ಐಐಎಫ್‌ಎ ಅವಾರ್ಡ್‌ನ ಬೆಳ್ಳಿ ಮಹೋತ್ಸವ ಆಚರಣೆಗಾಗಿ ಶಾರುಖ್ ಖಾನ್ ಜೈಪುರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನೋಟಿಸ್ ನೀಡಲಾಗಿದೆ. ಕೇಸರಿ ಮಿಶ್ರಿತ ಗುಟ್ಕಾವನ್ನು ಪ್ರಚಾರ ಮಾಡುವ ಜಾಹೀರಾತಿನಲ್ಲಿ ಜನರನ್ನು ತಪ್ಪುದಾರಿಗೆಳೆದಿರುವ ಕುರಿತು ಮಾರ್ಚ್ 19ರೊಳಗೆ ಪ್ರತಿಕ್ರಿಯಿಸುವಂತೆ ಸೂಚಿಸಲಾಗಿದೆ.
ಇದನ್ನು ಓದಿದ್ದೀರಾ? ಬೀದರ್ | ₹3 ಲಕ್ಷ ಮೌಲ್ಯದ ಗುಟ್ಕಾ ಜಪ್ತಿ : ನಾಲ್ವರ ವಿರುದ್ದ ಪ್ರಕರಣ ದಾಖಲು
ಅಜಯ್ ದೇವಗನ್, ಟೈಗರ್ ಶ್ರಾಫ್ ಮತ್ತು ಗುಟ್ಕಾ ಉತ್ಪಾದನಾ ಕಂಪನಿಯ ಅಧ್ಯಕ್ಷರಿಗೂ ಇದೇ ರೀತಿಯ ನೋಟಿಸ್‌ಗಳನ್ನು ಕಳುಹಿಸಲಾಗಿದೆ. ಗ್ರಾಹಕ ಹಕ್ಕುಗಳ ಕಾರ್ಯಕರ್ತ ಯೋಗೇಂದ್ರ ಸಿಂಗ್ ಬಡಿಯಾಲ್ ಸಲ್ಲಿಸಿದ ದೂರಿನ ನಂತರ ಆಯೋಗದ ಅಧ್ಯಕ್ಷೆ ಗ್ಯಾರ್ಸಿಲಾಲ್ ಮೀನಾ ಮತ್ತು ಸದಸ್ಯೆ ಹೇಮ್ಲತಾ ಅಗರ್ವಾಲ್ ಅವರು ಈ ಆದೇಶವನ್ನು ಹೊರಡಿಸಿದ್ದಾರೆ.
ಗುಟ್ಕಾ ತಯಾರಕರಾದ ಜೆಬಿ ಇಂಡಸ್ಟ್ರೀಸ್ ತನ್ನ ಜಾಹೀರಾತುಗಳಲ್ಲಿ ‘ಕಣ ಕಣದಲ್ಲೂ ಕೇಸರಿಯಿದೆ’ ಎಂದು ಹೇಳುವ ಮೂಲಕ ದಾರಿತಪ್ಪಿಸುವ, ಸುಳ್ಳು ಪ್ರಚಾರವನ್ನು ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕೇಸರಿ ಒಂದು ಕಿಲೋಗ್ರಾಂಗೆ ಸುಮಾರು 4 ಲಕ್ಷ ರೂ.ಗಳಷ್ಟು ಬೆಲೆ ಬಾಳುತ್ತದೆ. ಆದರೆ ಈ ಗುಟ್ಕಾ ಪ್ಯಾಕೆಟ್‌ಗೆ ಕೇವಲ 5 ರೂಪಾಯಿಯಂತೆ ಮಾರಾಟವಾಗುತ್ತದೆ. ಹಾಗಾಗಿ ಕಣ ಕಣದಲ್ಲಿ ಕೇಸರಿಯಿದೆ ಎಂದು ಹೇಳುವುದು ಸುಳ್ಳು, ಅವಾಸ್ತವಿಕ ಎಂದು ಅರ್ಜಿದಾರರು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಗುಟ್ಕಾ ಜಾಹೀರಾತು ಪ್ರಕರಣ: ಬಾಲಿವುಡ್ ನಟರಾದ ಶಾರೂಖ್, ಅಕ್ಷಯ್, ಅಜಯ್ ದೇವಗನ್‌ಗೆ ನೋಟಿಸ್
ಅದಕ್ಕೂ ಮುಖ್ಯವಾಗಿ ಉತ್ಪನ್ನವು ಕೇಸರಿಯನ್ನು ಹೊಂದಿಲ್ಲ ಅಥವಾ ಅದರ ಪರಿಮಳವನ್ನೂ ಹೊಂದಿಲ್ಲ ಎಂದು ದೂರಿನಲ್ಲಿ ಪ್ರತಿಪಾದಿಸಲಾಗಿದೆ. ಆದರೂ ಕೂಡಾ ಸೆಲೆಬ್ರೆಟಿಗಳು ಈ ಸುಳ್ಳು ಜಾಹೀರಾತು ನೀಡುತ್ತಿದ್ದಾರೆ. ಇದು ಗ್ರಾಹಕರ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದಿದ್ದಾರೆ.
ಇಂತಹ ಮೋಸಗೊಳಿಸುವ ಜಾಹೀರಾತುಗಳು ಗುಟ್ಕಾ ಸೇವನೆಯನ್ನು ಪ್ರೋತ್ಸಾಹಿಸುವುದಲ್ಲದೆ ಆರೋಗ್ಯದ ಅಪಾಯಗಳನ್ನು ಸಹ ಉಂಟುಮಾಡುತ್ತವೆ ಎಂದು ದೂರುದಾರರು ವಾದಿಸಿದ್ದಾರೆ. ಹಾಗೆಯೇ ಜನರ ಆರೋಗ್ಯದ ಮೇಲೆ ಗುಟ್ಕಾ ಪರಿಣಾಮವನ್ನು ಉಲ್ಲೇಖಿಸಿ, ಇಂತಹ ದಾರಿತಪ್ಪಿಸುವ ಪ್ರಚಾರ ನಿಷೇಧಿಸುವಂತೆ ಅರ್ಜಿದಾರರು ಒತ್ತಾಯಿಸಿದ್ದಾರೆ.
ಇನ್ನು ಪಾನ್ ಮಸಾಲಾ ಉತ್ಪನ್ನಗಳ ಪ್ರಚಾರ ಮಾಡಿ ಕಾನೂನು ಅಡಿ ಈ ಮೂವರು ನಟರುಗಳು ಸಿಲುಕಿರುವುದು ಇದೇ ಮೊದಲಲ್ಲ. ಫೆಬ್ರವರಿಯಲ್ಲಿ, ಶಾರುಖ್ ಖಾನ್, ಅಜಯ್ ದೇವಗನ್, ಟೈಗರ್ ಶ್ರಾಫ್ ಮತ್ತು ವಿಮಲ್ ಪಾನ್ ಮಸಾಲಾ ತಯಾರಕರಿಗೆ ಇದೇ ರೀತಿಯ ಪ್ರಕರಣದಲ್ಲಿ ಕೋಟಾ ಗ್ರಾಹಕ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿತು.
ಕೋಟಾದ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಪಾನ್ ಮಸಾಲಾ ಜಾಹೀರಾತುಗಳನ್ನು ನಿಷೇಧಿಸುವಂತೆ ಕೋಟಾದ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗಕ್ಕೆ ಅರ್ಜಿ ಸಲ್ಲಿಸಿದರು. ಈ ಪ್ರಕರಣದಲ್ಲೂ ನೋಟಿಸ್ ಜಾರಿ ಮಾಡಲಾಗಿತ್ತು. ಮುಂದಿನ ವಿಚಾರಣೆಯನ್ನು ಏಪ್ರಿಲ್ 21ಕ್ಕೆ ನಿಗದಿಪಡಿಸಲಾಗಿದೆ.
