ಹಿಮ ಕರಗುವಿಕೆಯಿಂದ ಸಮುದ್ರದ ನೀರಿನ ಮಟ್ಟದಲ್ಲಿ ಏರಿಕೆ, ಸಮುದ್ರ ತೀರದಲ್ಲಿರುವ ನಗರಗಳ ಮುಳುಗುವಿಕೆಯ ಆತಂಕ, ಭೀಕರ ಹಿಮಪಾತ, ಹಿಮನದಿಗಳಲ್ಲಿ ಹರಿಯುವ ನೀರಿನ ಪ್ರಮಾಣದಲ್ಲಿ ಕುಸಿತ ಮುಂತಾದವು ಜಗತ್ತಿನಾದ್ಯಂತ ಬಹುದೊಡ್ಡ ಭೀತಿ ಸೃಷ್ಟಿಸಿದೆ. ಈ ಹಿನ್ನಲೆಯಲ್ಲಿ ಪ್ರಸಕ್ತ ವರ್ಷವನ್ನು ವಿಶ್ವಸಂಸ್ಥೆಯು ಅಂತರರಾಷ್ಟ್ರೀಯ ಹಿಮನದಿಗಳ ಸಂರಕ್ಷಣಾ ವರ್ಷ ಎಂದು ಘೋಷಿಸಿದೆ.
ಹಿಮ ಕರಗುವಿಕೆಗೆ ಸಂಬಂಧಿಸಿದಂತೆ, ಕಳೆದ ಎರಡು ವಾರಗಳಲ್ಲಿ ಮೂರು ಪ್ರಮುಖ ಬೆಳವಣಿಗೆಗಳು ನಮ್ಮ ದೇಶದಲ್ಲಿ ನಡೆದಿವೆ. ಈ ಮೂರೂ ಬೆಳವಣಿಗೆಗಳು ಕೂಡ ತಾಪಮಾನ ಏರಿಕೆ ಹೇಗೆ ನಮ್ಮ ಬದುಕಿನ ಮೇಲೆ ದುಷ್ಪರಿಣಾಮ ಬೀರಬಹುದು ಎನ್ನುವುದಕ್ಕೆ ಎಚ್ಚರಿಕೆಯ ಕರೆಗಂಟೆಯಂತಿದೆ.
ಈ ಬಾರಿ ವಿಶ್ವದೆಲ್ಲೆಡೆ ಸುದ್ದಿ ಮಾಡಿದ್ದು ಪ್ರಯಾಗರಾಜ್ ನ ಮಹಾ ಕುಂಭಮೇಳ. ಆದರೆ ಲಡಾಕ್ ಮೂಲದ, ಹವಾಮಾನ ಬದಲಾವಣೆ ಕುರಿತ ಹೋರಾಟದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ʻನಮ್ಮ ಹಿಮನದಿಗಳನ್ನು ಸಂರಕ್ಷಿಸಲು ನಾವು ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ, ವರ್ಷಪೂರ್ತಿ ಹರಿಯುವ ಹಿಮನದಿಗಳು ಒಣಗಿ, 144 ವರ್ಷಗಳ ನಂತರ ನಡೆಯಲಿರುವ ಮುಂದಿನ ಮಹಾ ಕುಂಭಮೇಳವು ಮರಳಿನ ಮೇಲೆ ನಡೆಯಬಹುದುʼ ಎಂದು ಎಚ್ಚರಿಸಿದ್ದಾರೆ.
ಎರಡನೆಯದು ಉತ್ತರಾಖಂಡ್ ರಾಜ್ಯದ ಚಮೋಲಿ ಜಿಲ್ಲೆಯ ಬದರಿನಾಥ್ ಮತ್ತು ಮಾಣಾ ನಡುವೆ ಸಂಭವಿಸಿದ ಹಿಮಪಾತಕ್ಕೆ ಸಿಲುಕಿ ಗಡಿ ರಸ್ತೆಗಳ ಸಂಸ್ಥೆಯ (ಬಿಆರ್‌ಒ) ಕಾರ್ಮಿಕರು ಹಿಮದ ಅಡಿಯಲ್ಲಿ ಹೂತುಹೋದದ್ದು. ಮೂರನೆಯದು ಹಿಮಾಚಲ ಪ್ರದೇಶದ ಹಲವೆಡೆ, ಫೆಬ್ರವರಿ-ಮಾರ್ಚ್ ತಿಂಗಳಲ್ಲಿ 1979ರ ಬಳಿಕ ಅತಿ ದೊಡ್ಡ ಪ್ರಮಾಣದ ಹಿಮಪಾತವಾಗಿ, ಪ್ರವಾಸಿಗರನ್ನು ರಕ್ಷಿಸಲು ಸೇನಾ ಹೆಲಿಕ್ಯಾಪ್ಟರ್‌ಗಳನ್ನು ಬಳಸಬೇಕಾದ ಪರಿಸ್ಥಿತಿ ಉದ್ಭವಿಸಿದ್ದು. ತಜ್ಞರ ಪ್ರಕಾರ ಭೂಮಿಯ ತಾಪಮಾನವು ಹೆಚ್ಚಾಗುತ್ತಿರುವುದರಿಂದ ಹಿಮಾಲಯದಲ್ಲಿನ ಹಿಮ ಸುರಿತ ಮತ್ತು ಮಳೆಯ ಮಾದರಿಗಳಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗುತ್ತಿದೆ. ಇವು, ಈ ರೀತಿಯ ಅಪಾಯಕಾರಿ ಸನ್ನಿವೇಶಗಳನ್ನು ಸೃಷ್ಟಿಸುತ್ತಿವೆ.
ಹಿಮಾಲಯದಲ್ಲಿ ಹುಟ್ಟುವ ನದಿಗಳಾದ ಗಂಗಾ, ಬ್ರಹ್ಮಪುತ್ರಾ ಮತ್ತು ಅವುಗಳ ಉಪನದಿಗಳಿಗೆ ಹಿಮನದಿಗಳೇ (ಗ್ಲೇಷಿಯರ್ಸ್) ಆಧಾರ. ವರ್ಷಪೂರ್ತಿ ಹಿಮಾಲಯದ ಹಿಮಕರಗಿ ಇವುಗಳಲ್ಲಿ ನೀರು ಹರಿಯುವುದರಿಂದ ಅವು ʻಪೆರಿನಿಯಲ್ʼ ಅಥವಾ ವರ್ಷಪೂರ್ತಿ ಹರಿಯುವ ನದಿಗಳು ಎಂದು ಕರೆಯಿಸಿಕೊಳ್ಳುತ್ತವೆ. ಆದರೆ ಭೂಗ್ರಹದಲ್ಲಿ ಏರುತ್ತಿರುವ ತಾಪಮಾನದಿಂದಾಗಿ ಹಿಮಾಲಯದಲ್ಲಿ ವೇಗವಾಗಿ ಕರಗುತ್ತಿರುವ ಹಿಮನದಿಗಳ ಪ್ರಮಾಣ ಇದೇ ರೀತಿ ಮುಂದುವರೆದರೆ ʻಪೆರಿನಿಯಲ್ʼ ಎಂದು ಕರೆಯಿಸಿಕೊಳ್ಳುವ ನಮ್ಮ ಉತ್ತರ ಭಾರತದ ನದಿಗಳು ಮಳೆಗಾಲದಲ್ಲಿ ಮಾತ್ರ ಹರಿಯುವ ನದಿಗಳಾಗಬಹುದು ಎಂದು ವಾಂಗ್ಚುಕ್ ಕಳವಳ ವ್ಯಕ್ತಪಡಿಸುತ್ತಾರೆ.
ಹಿಮಾಲಯದ ತುದಿ ಎಂದರೆ ಹಿಮಾದ್ರಿಯ ಭಾಗವಾದ ಮೌಂಟ್ ಎವರೆಸ್ಟ್, ಕಾಂಚನಜುಂಗಾ, ನಂದಾದೇವಿ ಮುಂತಾದ ಪರ್ವತಗಳು ಸದಾ ಹಿಮದಿಂದಲೇ ಆವೃತವಾಗಿರುತ್ತವೆ. ಗಂಗಾ, ಯಮುನಾ, ಬ್ರಹ್ಮಪುತ್ರ, ಸಿಂಧೂ ಮತ್ತು ಸಟ್ಲೆಜ್ ನದಿಗಳ ಉಗಮ ಸ್ಥಾನ ಈ ಹಿಮಾದ್ರಿ ಪ್ರದೇಶ.

ಹಿಮಾದ್ರಿಯ ರೀತಿಯಲ್ಲಿಯೇ ಹಿಮಾಚಲ ಭಾಗದ ಪರ್ವತಗಳು (ಹಿಮಾಲಯದ ಮಧ್ಯಭಾಗ) ವರ್ಷಪೂರ್ತಿ ಹಿಮದಿಂದ ಆವರಿಸಲ್ಪಡದೇ ಇದ್ದರೂ, ಕೆಲವು ಪರ್ವತದ ಮೇಲ್ಭಾಗ ಸದಾ ಹಿಮದಿಂದ ಆವೃತವಾಗಿರುತ್ತವೆ. ಹೆಚ್ಚಾಗಿ ಇಲ್ಲಿ ದಟ್ಟ ಅರಣ್ಯಗಳು ಕಂಡು ಬರುತ್ತವೆ. ಶಿಮ್ಲಾ, ಮಸೂರಿ, ಡಾರ್ಜಿಲಿಂಗ್, ನೈನಿತಾಲ್‌ನಂತಹ ಪ್ರವಾಸೀ ತಾಣಗಳು ಇದಕ್ಕೆ ಉದಾಹರಣೆ. ವಿಜ್ಞಾನಿಗಳ ಪ್ರಕಾರ ಈ ಮೊದಲು ಹಿಮಾಚಲ ಮತ್ತು ಹಿಮಾದ್ರಿ ಭಾಗದಲ್ಲಿ ಸಾಮಾನ್ಯವಾಗಿ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಹಿಮ ಸುರಿತವಾಗುತ್ತಿತ್ತು. ಈ ಅವಧಿಯಲ್ಲಿ ಈ ಪ್ರದೇಶದಲ್ಲಿ ಚಳಿಗಾಲ ಇರುತ್ತಿದ್ದ ಕಾರಣ ನೆಲವೂ ಬಹುತೇಕ ತಣ್ಣಗೇ ಇರುತ್ತಿದ್ದು, ಸಹಜವಾಗಿಯೇ ಇಲ್ಲಿ ಬೀಳುವ ಹಿಮ ನೆಲವನ್ನು ಸದೃಢವಾಗಿ ಆವರಿಸಿಕೊಳ್ಳುತ್ತಿದ್ದವು.
ಆದರೆ, ಪ್ರಸ್ತುತ ಹಿಮಾಚಲ ಅಥವಾ ಮಧ್ಯ ಹಿಮಾಲಯದ ಭಾಗದಲ್ಲಿರುವ ಉತ್ತರಾಖಂಡದಲ್ಲಿ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಸುರಿಯಬೇಕಿದ್ದ ಹಿಮ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಸುರಿಯುತ್ತಿದೆ. ಈ ಅವಧಿಯಲ್ಲಿ ವಾತಾವರಣ ಮತ್ತು ಭೂಮಿ, ಡಿಸೆಂಬರ್ ಮತ್ತು ಜನವರಿ ತಿಂಗಳಿಗೆ ಹೋಲಿಸಿದಾಗ ಸ್ವಲ್ಪ ಬಿಸಿಯಾಗಿಯೇ ಇರುತ್ತದೆ. ಹೀಗಾದಾಗ ಸುರಿಯುವ ಹಿಮದ ಸಾಂದ್ರತೆ ಮೊದಲಿನ ಅವಧಿಗೆ ಹೋಲಿಸಿದಾಗ ತುಸು ಕಡಿಮೆಯೇ ಇರುತ್ತದೆ. ಅಲ್ಲದೆ ಹಿಮಕ್ಕೆ ಈ ಮೊದಲಿನಂತೆ ನೆಲದ ಮೇಲೆ ಹಿಡಿತ ಸಾಧಿಸಲು, ಗಟ್ಟಿಯಾಗಿ ಆವರಿಸಿಕೊಳ್ಳಲು ಅಥವಾ ಹಿಡಿದಿಟ್ಟುಕೊಳ್ಳಲು ನೆಲಕ್ಕೆ ಸಾಧ್ಯವಾಗುವುದಿಲ್ಲ. ಭಾರೀ ಪ್ರಮಾಣದಲ್ಲಿ ಹಿಮವು ಸುರಿದಾಗ, ಹಿಮವು ಪದರ ಪದರಗಳಾಗಿ ಒಂದರ ಮೇಲೊಂದು ಶೇಖರವಾಗುತ್ತಾ ಹೋಗುತ್ತದೆ. ಆದರೆ ಅದರ ಬುಡದಲ್ಲಿರುವ ಹಿಮ ಪದರಗಳು ಸಡಿಲವಾಗಿಯೇ ಭೂಮಿಯನ್ನು ಆವರಿಸಿಕೊಂಡಿರುತ್ತವೆ. ಹೀಗಾಗಿ ಶೇಖರವಾದ ಹಿಮಗುಡ್ಡೆಯ ಮೇಲ್ಭಾಗದಲ್ಲಿ ಭಾರವು ಹೆಚ್ಚಾದಾಗ ಅಥವಾ ಮಳೆ, ಗಾಳಿಯಂತಹ ಇತರ ಬಾಹ್ಯ ಕಾರಣಗಳಿಂದಾಗಿ ಕುಸಿದು ಹಿಮಪಾತಕ್ಕೆ ಕಾರಣವಾಗುತ್ತವೆ. ಸಾಮಾನ್ಯವಾಗಿ ಅಕಾಲದಲ್ಲಿ ಸುರಿಯುವ ಹಿಮ, ಅವಲಂಚೆ ಅಂದರೆ ಹಿಮಪಾತದ ಅಪಾಯವನ್ನು ಹೆಚ್ಚಿಸುತ್ತದೆ. ಚಮೋಲಿಯ ದುರಂತವೂ ಇದೇ ರೀತಿಯಾಗಿ ಸಂಭವಿಸಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.
ಹೀಗೆ ಅಕಾಲದಲ್ಲಿ ಎಂದರೆ ಫೆಬ್ರವರಿ-ಮಾರ್ಚ್ ಅವಧಿಯಲ್ಲಿ ಹಿಮ ಸುರಿದು ಹಿಮಪಾತ ಸಂಭವಿಸುತ್ತಿರುವುದು ಇದೇ ಮೊದಲಲ್ಲ. ಮಾರ್ಚ್ 2021ರಲ್ಲಿ, ಧೌಲಿಗಂಗಾ ನದಿಯ ಜಲಾನಯನ ಪ್ರದೇಶದಲ್ಲಿ ಸಂಭವಿಸಿದ ಹಿಮಪಾತದಿಂದಾಗಿ 8 ರಿಂದ 10 ಕಾರ್ಮಿಕರು ಸಾವನ್ನಪ್ಪಿದ್ದರು. ಅದೇ ವರ್ಷ ಫೆಬ್ರವರಿ 7ರಂದು ಋಷಿಗಂಗಾ ನದಿಯ ಜಲಾನಯನ ಪ್ರದೇಶದ ರೈನಿಯಲ್ಲಿರುವ ಜಲವಿದ್ಯುತ್ ಸ್ಥಾವರವು ಹಿಮಪಾತದಿಂದಾಗಿ ಸಂಪೂರ್ಣವಾಗಿ ನಾಶವಾಯಿತು ಮತ್ತು ತಪೋವನ್‌ನಲ್ಲಿ ನಿರ್ಮಾಣ ಹಂತದ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರು ಸಾವನ್ನಪ್ಪಿದರು ಎಂದು ವರದಿಗಳು ಹೇಳುತ್ತವೆ. ಹೀಗೆ ಹಿಮ, ಬದಲಾದ ಋತುವಿನಲ್ಲಿ ಸುರಿಯುತ್ತಿರುವುದರಿಂದ ಮುಂಬರುವ ವರ್ಷಗಳಲ್ಲಿ ಈ ರೀತಿಯ ಹಿಮಪಾತದಂತಹ ಘಟನೆಗಳು ಇನ್ನಷ್ಟು ಸಂಭವಿಸುವ ಅಪಾಯ ಹೆಚ್ಚುತ್ತಿದೆ.

ಹೀಗೆ ಹಿಮಾಲಯ ಪ್ರದೇಶದಲ್ಲಿ ಹಿಮ ಸುರಿಯುವ ಋತುಮಾನದಲ್ಲಿ ಆಗಿರುವ ಬದಲಾವಣೆಯ ಹಿಂದಿರುವ ಪ್ರಮುಖ ಕಾರಣ ಜಾಗತಿಕ ತಾಪಮಾನ ಏರಿಕೆ ಎಂಬುದು ಹೊಸ ವಿಷಯವೇನಲ್ಲ. ಇದು ಕೇವಲ ಹಿಮಾಲಯಕ್ಕೆ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಇರುವ ಹಿಮನದಿಗಳಿಗೆ ದೊಡ್ಡ ಅಪಾಯ ಒಡ್ಡಬಲ್ಲವು ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸುತ್ತಾರೆ. ಸಾಮಾನ್ಯವಾಗಿ ಡಿಸೆಂಬರ್ ಮತ್ತು ಜನವರಿಯಲ್ಲಿ ಹಿಮ ಸುರಿದ ನಂತರದಲ್ಲಿ ಹಿಮಗಡ್ಡೆಗಳು ಬೀಳುತ್ತವೆ. ಈ ನೀರ್ಗಡ್ಡೆಗಳು (ಹಿಮಗಡ್ಡೆಗಳು) ಈಗಾಗಲೇ ಸುರಿದಿರುವ ಹಿಮವನ್ನು ಗಟ್ಟಿಗೊಳಿಸುತ್ತವೆ. ನಂತರ ಇವು ಹಿಮನದಿಗಳ ಭಾಗವಾಗುತ್ತವೆ. ಆದರೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಬೀಳುವ ಹಿಮಗಡ್ಡೆಗಳು ಭೂಮಿಯಲ್ಲಿ ಹೆಚ್ಚಿದ ತಾಪಮಾನದಿಂದಾಗಿ ನೆಲಕ್ಕೆ ಬೀಳುತ್ತಿದ್ದಂತೆ ಕರಗಿ ಬಿಡುತ್ತವೆ ಮತ್ತು ಇವು ಹಿಮನದಿಗಳ ಭಾಗವಾಗುವುದಿಲ್ಲ. ಹೀಗಾಗಿ ಹಿಮನದಿಗಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಹೋಗುತ್ತಿದೆ. ಇದರೊಂದಿಗೆ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಬೀಳುವ ಹಿಮ ಹಿಮಪಾತದ ಅಪಾಯವನ್ನು ಹೆಚ್ಚಿಸುತ್ತಿದೆ.
ಕಿರಿದಾಗುತ್ತಿರುವ ಹಿಮನದಿಗಳ ವ್ಯಾಪ್ತಿ: ಭಾರತದ ಹಿಮಾಲಯದಲ್ಲಿ 9,575 ಹಿಮನದಿಗಳಿವೆ ಎಂದು ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ ಪಟ್ಟಿ ಮಾಡಿದೆ. ಅವುಗಳಲ್ಲಿ 267 ನದಿಗಳು 10 ಚದರ ಕಿಲೋಮೀಟರ್‌ಗಳಿಗಿಂತ ಹೆಚ್ಚು ವಿಸ್ತೀರ್ಣವನ್ನು ಹೊಂದಿವೆ ಮತ್ತು ಇವು ವಿಶ್ವದಲ್ಲೇ ಅತೀ ಹೆಚ್ಚು ಎಂದರೆ 70 ಶೇಕಡಾ ಸಿಹಿ ನೀರಿನ ಸಂಗ್ರಹಗಳಾಗಿವೆ ಎಂದು ಸಮೀಕ್ಷೆ ಹೇಳುತ್ತದೆ. ಹಿಮ ಸುರಿಯುವಿಕೆಯು ಹಿಮಾಲಯದ ಈ ಹಿಮನದಿಗಳನ್ನು ಪೋಷಿಸುತ್ತದೆ ಮತ್ತು ಹಿಮಾಲಯದಲ್ಲಿ ಹುಟ್ಟುವ ಎಲ್ಲಾ ನದಿಗಳ ವಾರ್ಷಿಕ ಹರಿವಿನ ಪ್ರಮಾಣದ ಸುಮಾರು 30-50 ಶೇಕಡಾ ಪ್ರಮಾಣ ಈ ಹಿಮ ಕರಗುವಿಕೆಯಿಂದ ಬರುತ್ತದೆ. ಆದರೆ ಈಗ ಈ ಹಿಮನದಿಗಳು ಹವಾಮಾನ ಬದಲಾವಣೆಯ ದುಷ್ಪರಿಣಾಮದ ಪ್ರಮುಖ ಬಲಿಪಶುಗಳಾಗಿವೆ. ತ್ವರಿತಗತಿಯಲ್ಲಿ ಅವುಗಳು ಕರಗುತ್ತಿರುವುದು ಲಕ್ಷಾಂತರ ಜನರಿಗೆ ದೀರ್ಘಕಾಲದ ನೀರಿನ ಅಪಾಯವನ್ನು ತಂದೊಡ್ಡಬಲ್ಲುದು.
ಹದಿನೆಂಟನೇ ಶತಮಾನದಲ್ಲಿ ಆರಂಭಗೊಂಡ ಕೈಗಾರಿಕಾ ಕ್ರಾಂತಿಯಿಂದ ಮೊದಲುಗೊಂಡು ಈವರೆಗೂ ಜಗತ್ತಿನಾದ್ಯಂತ ಹಿಮನದಿಗಳ ವ್ಯಾಪ್ತಿ ಗಮನಾರ್ಹ ರೀತಿಯಲ್ಲಿ ಕಿರಿದಾಗುತ್ತಿದೆ ಮತ್ತು ಅವುಗಳ ಆಳ ಕಡಿಮೆಯಾಗುತ್ತಿದೆ ಎಂದು ವಿಶ್ವಾದ್ಯಂತ ನಡೆಸಿದ ಸಂಶೋಧನೆಗಳು ನಿರಂತರವಾಗಿ ತೋರಿಸುತ್ತಿವೆ.

ಹಿಮನದಿ ಸರೋವರಗಳ ಕುರಿತಂತೆ ಇಸ್ರೋ ಅಧ್ಯಯನ
ರಾಷ್ಟ್ರದ ಹವಾಮಾನ ಮತ್ತು ನೀರಿನ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಹಿಮಾಲಯದ ಹಿಮ ಹಾಗು ಹಿಮನದಿಗಳ ಸ್ಥಿತಿಯನ್ನು ಅಧ್ಯಯನ ಮಾಡುವುದು; ಹಿಮನದಿಗಳ ವ್ಯಾಪ್ತಿಯನ್ನು ನಿಯಮಿತವಾಗಿ ಮಾಪನ ಮಾಡುವುದು; ಮತ್ತು ಅವುಗಳ ಮೇಲ್ವಿಚಾರಣೆ ನಡೆಸುವುದು ಅತ್ಯಗತ್ಯ. ಆದರೆ ಹಿಮಾಲಯದ ದುರ್ಗಮ ಭೂಪ್ರದೇಶಗಳಲ್ಲಿ ಮತ್ತು ಕಠಿಣ ಹವಾಮಾನ ಪರಿಸ್ಥಿತಿಯಲ್ಲಿ ಅಧ್ಯಯನ ಕಷ್ಟ ಸಾಧ್ಯ. ಆದ್ದರಿಂದ, ಈ ಅಧ್ಯಯನಕ್ಕೆ ಬಾಹ್ಯಾಕಾಶ ಆಧಾರಿತ ಸಮೀಕ್ಷೆ ಕೈಗೊಳ್ಳಲಾಗಿದ್ದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈ ಅಧ್ಯಯನವನ್ನು ಕೈಗೆತ್ತಿಕೊಂಡಿತ್ತು.
ನಾಲ್ಕು ದಶಕಗಳ ಅಧ್ಯಯನದ ನಂತರ ಇಸ್ರೋ 1984ರಲ್ಲಿ ಗುರುತಿಸಲಾಗಿದ್ದ ಹಿಮಾಲಯದಲ್ಲಿ ಹಿಮನದಿಗಳಿಂದ ರೂಪಿತವಾಗಿರುವ ಸರೋವರಗಳ ಪೈಕಿ ಶೇಕಡಾ 27 ಗಮನಾರ್ಹವಾಗಿ ವಿಸ್ತರಿಸಿದೆ ಎಂದಿದೆ. ಎಂದರೆ ಇವುಗಳಲ್ಲಿ ಕೆಲವು ಸರೋವರಗಳು ಎರಡು ಪಟ್ಟು ವಿಸ್ತರಿಸಿದ್ದರೆ ಕೆಲವು 1.5 ಪಟ್ಟು ಬೆಳೆದಿವೆ. ಹಿಮನದಿಗಳ ಕರಗುವಿಕೆಯಿಂದ ಸೃಷ್ಟಿಯಾಗುವ ಜಲರಾಶಿಗಳನ್ನು ಹಿಮನದಿ ಸರೋವರಗಳು ಎಂದು ಕರೆಯಲಾಗುತ್ತದೆ. ಹಿಮನದಿಗಳು ಪ್ರವಹಿಸುವ ದಾರಿಯ ಅಕ್ಕಪಕ್ಕದಲ್ಲಿ ಸೃಷ್ಟಿಯಾಗಿರುವ ತಗ್ಗು, ಗುಂಡಿಗಳೇ ಈ ಹಿಮನದಿ ಸರೋವರಗಳು. ಹಿಮಕರಗುವಿಕೆ ಹೆಚ್ಚಿದಂತೆಲ್ಲ ಹಿಮನದಿಗಳ ನೀರು ಈ ಸರೋವರಗಳಲ್ಲಿ ತುಂಬಿಕೊಳ್ಳಲಾರಂಭಿಸುತ್ತವೆ. ಇವುಗಳು ಹಿಮನದಿ ಸರೋವರಗಳ ಆಸ್ಪೋಟದ ಪ್ರವಾಹ (GLOF /ಜಿಎಲ್‌ಒಎಫ್) ಗಳಂತಹ ಅಪಾಯಗಳನ್ನುಂಟುಮಾಡುತ್ತವೆ. ಈ ಸರೋವರದ ಕೆಳಭಾಗದಲ್ಲಿರುವವರಿಗೆ ಇದು ವಿನಾಶಕಾರಿ ಪರಿಣಾಮಗಳನ್ನು ಬೀರಬಹುದು” ಎಂದು ಇಸ್ರೋ ಹೇಳಿದೆ.
ಈ ಹಿಮನದಿ ಸರೋವರಗಳು ಸಾಮಾನ್ಯವಾಗಿ ಹಿಮಗಡ್ಡೆಗಳ ನೈಸರ್ಗಿಕ ಅಣೆಕಟ್ಟುಗಳಿಂದ ಆವರಿಸಲ್ಪಟ್ಟಿರುತ್ತವೆ. ಈ ನೈಸರ್ಗಿಕ ಅಣೆಕಟ್ಟುಗಳು ಕುಸಿದಾಗ ಈ ಸರೋವರದಲ್ಲಿರುವ ದೊಡ್ಡ ಪ್ರಮಾಣದ ನೀರು ಹೊರಬಂದಾಗ, ಇವುಗಳ ಕೆಳಭಾಗದ ಪ್ರದೇಶದಲ್ಲಿ ಹಠಾತ್ತಾಗಿ ತೀವ್ರ ಪ್ರವಾಹ ಉಂಟಾಗುತ್ತದೆ. 2023ರಲ್ಲಿ ಸಿಕ್ಕಿಂನ ವಾಯುವ್ಯ ಭಾಗದಲ್ಲಿ 17,000 ಅಡಿ ಎತ್ತರದಲ್ಲಿರುವ ದಕ್ಷಿಣ ಲೋನಾಕ್ ಸರೋವರವು ನಿರಂತರ ಮಳೆಯಿಂದಾಗಿ ಒಡೆದ ನಂತರ ಕನಿಷ್ಠ 40 ಜನರು ಸಾವನ್ನಪ್ಪಿದರು ಮತ್ತು 76 ಜನರು ಕಾಣೆಯಾಗಿದ್ದರು.
ಅಂತರರಾಷ್ಟ್ರೀಯ ಹಿಮನದಿಗಳ ಸಂರಕ್ಷಣಾ ವರ್ಷ
ಹವಾಮಾನ ಬದಲಾವಣೆಯಿಂದಾಗಿ ಹಿಮನದಿಗಳು ಆತಂಕಕಾರಿ ಪ್ರಮಾಣದಲ್ಲಿ ಕಣ್ಮರೆಯಾಗುತ್ತಿರುವುದರಿಂದ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2025 ನೇ ವರ್ಷವನ್ನು ಅಂತರರಾಷ್ಟ್ರೀಯ ಹಿಮನದಿಗಳ ಸಂರಕ್ಷಣಾ ವರ್ಷ (YGP) ಎಂದು ಘೋಷಿಸಿದೆ. ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ಮತ್ತು ವಿಶ್ವ ಹವಾಮಾನ ಸಂಸ್ಥೆ (WMO) ಸಹಯೋಗದೊಂದಿಗೆ, ತೆಗೆದುಕೊಳ್ಳಲಾಗಿರುವ ಜಾಗತಿಕ ಮಟ್ಟದ ಈ ಉಪಕ್ರಮವು ಜನರಿಗೆ ಸಿಹಿನೀರನ್ನು ಒದಗಿಸುವ ಈ ಪ್ರಮುಖ ನೀರಿನ ಮೂಲಗಳನ್ನು ರಕ್ಷಿಸಲು ವಿಶ್ವಾದ್ಯಂತ ಎಲ್ಲಾ ದೇಶಗಳು ಕ್ರಮಗಳನ್ನು ತೆಗೆದುಕೊಳ್ಳಲು ಉತ್ತೇಜಿಸುತ್ತದೆ.
ಇದನ್ನೂ ಓದಿ ಭೂಮ್ತಾಯಿ | ಪ್ಯಾರಿಸ್ ಒಪ್ಪಂದ v/s ಡ್ರಿಲ್ ಬೇಬಿ ಡ್ರಿಲ್
ಅಂತರರಾಷ್ಟ್ರೀಯ ಹಿಮನದಿ ಸಂರಕ್ಷಣಾ ವರ್ಷವು ಹಲವಾರು ಪ್ರಮುಖ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತದೆ ಅವುಗಳಲ್ಲಿ ಪ್ರಮುಖವಾದುವುಗಳೆಂದರೆ ಜಾಗತಿಕಮಟ್ಟದಲ್ಲಿ ಹಿಮನದಿ ಮೇಲ್ವಿಚಾರಣಾ ವ್ಯವಸ್ಥೆಗಳನ್ನು ಬಲಗೊಳಿಸುವ ಮೂಲಕ ಮೂಲಕ ದತ್ತಾಂಶ ಸಂಗ್ರಹಣೆ ಮತ್ತು ವಿಶ್ಲೇಷಣೆಯನ್ನು ಹೆಚ್ಚಿಸುವುದು; ಹಿಮನದಿಗಳಿಗೆ ಸಂಬಂಧಿಸಿದಂತೆ ಉಂಟಾಗಬಲ್ಲ ಅಪಾಯಗಳಿಗೆ ಮುನ್ನೆಚ್ಚರಿಕೆ ನೀಡುವ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು; ಹಿಮನದಿ ಅವಲಂಬಿತ ಪ್ರದೇಶಗಳಲ್ಲಿ ಸುಸ್ಥಿರ ಜಲ ಸಂಪನ್ಮೂಲ ನಿರ್ವಹಣೆಯನ್ನು ಉತ್ತೇಜಿಸುವುದು; ಹಿಮನದಿಗಳಿಗೆ ಸಂಬಂಧಿಸಿದ ಸಾಂಸ್ಕೃತಿಕ ಪರಂಪರೆ ಮತ್ತು ಸಾಂಪ್ರದಾಯಿಕ ಜ್ಞಾನವನ್ನು ಸಂರಕ್ಷಿಸುವುದು;ಹಿಮನದಿ ಸಂರಕ್ಷಣೆ ಮತ್ತು ಹವಾಮಾನಕ್ಕೆ ಸಂಬಂಧಿಸಿದ ಉಪಕ್ರಮಗಳಲ್ಲಿ ಯುವಕರನ್ನು ಹೆಚ್ಚು ಹೆಚ್ಚಾಗಿ ತೊಡಗಿಸಿಕೊಳ್ಳುವುದು.
ಆದರೆ ಮೇಲೆ ಹೇಳಲಾದ ಎಲ್ಲಾ ಅಂಶಗಳು ಸರ್ಕಾರದ ವಿಕೋಪ ನಿರ್ವಹಣಾ ಪ್ರಾಧಿಕಾರಗಳ ಕೈಪಿಡಿಯಲ್ಲಿ ಸೂಚಿಸಲಾದ ವಿಕೋಪ ನಿರ್ವಹಣಾ ವಿಧಾನಗಳಂತೆ ಕಂಡುಬರುತ್ತವೆಯೇ ಹೊರತು ಈ ಪಟ್ಟಿಯಲ್ಲಿ ಹಿಮನದಿಗಳ ಕರಗುವಿಕೆಗೆ ಪ್ರಮುಖ ಕಾರಣವಾಗಿರುವ ಜಾಗತಿಕ ತಾಪಮಾನ ಏರಿಕೆಯನ್ನು ತಗ್ಗಿಸುವ ಬಗೆಗೆ ಯಾವುದೇ ಉಲ್ಲೇಖವಿಲ್ಲ. ಆದರೂ ಇಡೀ ಜಗತ್ತೇ ಹವಾಮಾನ ಬದಲಾವಣೆಯ ಭೀಕರ ಪರಿಣಾಮಗಳ ಸುಳಿಯಲ್ಲಿ ಸಿಲುಕಿ ತತ್ತರಿಸುತ್ತಿರುವಾಗ ಈ ನಿಟ್ಟಿನಲ್ಲಿ ಕೈಗೊಳ್ಳುವ ಯಾವುದೇ ಉಪಕ್ರಮಗಳು ಸ್ವಾಗತಾರ್ಹವೆ. ವಿಶ್ವಸಂಸ್ಥೆಯ ಈ ಘೋಷಣೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ ಭೂಮ್ತಾಯಿ | ಹವಾಮಾನ ಬದಲಾವಣೆ ವೈಪರೀತ್ಯದಿಂದ ತತ್ತರಿಸಿರುವ ದೇಶಗಳ ಪೈಕಿ 7ನೇ ಸ್ಥಾನದಲ್ಲಿದೆ ಭಾರತ!

ಡಾ ಶ್ರೀನಿಧಿ ಅಡಿಗ
ಹುಟ್ಟೂರು ಉಡುಪಿ. ಪ್ರಸ್ತುತ ಮೈಸೂರು ನಿವಾಸಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ., ʻಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪರಿಸರ ಚಳವಳಿಗಳು ಮತ್ತು ಮುದ್ರಣ ಮಾಧ್ಯಮʼ ಕುರಿತಂತೆ ಡಾಕ್ಟರೇಟ್ ಮಾಡಿದ್ದಾರೆ. ವಿವಿಧ ಸಂಸ್ಥೆಗಳಲ್ಲಿ ಸ್ವತಂತ್ರ ಮಾಧ್ಯಮ ಸಮಾಲೋಚಕಿಯಾಗಿದ್ದಾರೆ