ವೀಲ್ ಚೇರ್ ಸಿಗದ ಕಾರಣ ಕೋಪಗೊಂಡ ತಂದೆ, ಕಾಲು ಮುರಿತಕ್ಕೊಳಗಾಗಿದ್ದ ಮಗನನ್ನು ಸ್ಕೂಟಿಯಲ್ಲೇ ಆಸ್ಪತ್ರೆಯ ಮೂರನೇ ಮಹಡಿಗೆ ಚಿಕಿತ್ಸೆಗೆ ಕರೆದುಕೊಂಡ ಹೋದ ಅಪರೂಪದ ಘಟನೆ ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ನಡೆದಿದೆ.
ಕೋಟಾದ ಅತಿದೊಡ್ಡ ಎಂಬಿಎಸ್ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆಗಿದ್ದೇನು?
ವೃತ್ತಿಯಲ್ಲಿ ವಕೀಲರಾಗಿರುವ ಮನೋಜ್ ಜೈನ್ ಎಂಬುವವರು, ಎಡಗಾಲು ಮುರಿತಕ್ಕೆ ಒಳಗಾಗಿ ಪ್ಲಾಸ್ಟರ್ ಹಾಕಿಸಿಕೊಂಡಿದ್ದ ತನ್ನ ಮಗನನ್ನು ಚಿಕಿತ್ಸೆಗಾಗಿ ಗುರುವಾರ ಮಧ್ಯಾಹ್ನ 1.30ರ ಸುಮಾರಿಗೆ ಎಂಬಿಎಸ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು.
ಆಸ್ಪತ್ರೆಯ ಮಂಭಾಗದಲ್ಲಿ ವೀಲ್ ಚೇರ್ ಅಥವಾ ಸ್ಟ್ರೆಚರ್ ಒದಗಿಸುವಂತೆ ಕೇಳಿದ್ದಾರೆ. ಆದರೆ ಈ ವೇಳೆ ಸಿಬ್ಬಂದಿ ಉಡಾಫೆಯಿಂದ ಉತ್ತರಿಸಿದ್ದು, ಮನೋಜ್ ಜೈನ್‌ರನ್ನು ಸಿಟ್ಟಿಗೇಳುವಂತೆ ಮಾಡಿತ್ತು.
ತುಂಬಾ ಹೊತ್ತು ಕಾದ ಬಳಿಕ, ತಾನು ಬಂದಿದ್ದ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲೇ ನೇರವಾಗಿ ಆಸ್ಪತ್ರೆಯ ಒಳಗೆ ತೆರಳಿದ ಜೈನ್, ಬಳಿಕ ಮೂರನೇ ಮಹಡಿಯಲ್ಲಿರುವ ಒಪಿಡಿ ವಿಭಾಗಕ್ಕೆ ಲಿಫ್ಟ್‌ನಲ್ಲಿ ಸ್ಕೂಟರ್‌ನಲ್ಲೇ ತೆರಳಿ ಚಿಕಿತ್ಸೆ ಕೊಡಿಸಿದ್ದಾರೆ.
ವಾಗ್ವಾದ
ಚಿಕಿತ್ಸೆ ಪಡೆದು ಮತ್ತೆ ಸ್ಕೂಟರ್‌ನಲ್ಲೇ ಲಿಫ್ಟ್ ಬಳಿ ತೆರಳುತ್ತಿದ್ದ ಅಪ್ಪ-ಮಗನನ್ನು ಆಸ್ಪತ್ರೆಯ ಒಪಿಡಿ ವಿಭಾಗದ ವಾರ್ಡ್ ಉಸ್ತುವಾರಿ ದೇವಕಿನಂದ್ ತಡೆದಿದ್ದು, ಸ್ಕೂಟಿಯ ಕೀಯನ್ನು ಕಿತ್ತುಕೊಂಡಿದ್ದಾರೆ. ಈ ವೇಳೆ ಮನೋಜ್ ಜೈನ್ ಮತ್ತು ದೇವಕಿನಂದ್ ನಡುವೆ ಮಾತಿನ ಚಕಮಕಿ ನಡೆದಿದೆ.
ʻನಾನು ಯಾವುದೇ ತಪ್ಪು ಮಾಡಿಲ್ಲ, ಗಾಲಿಕುರ್ಚಿ ಇಲ್ಲದ ಕಾರಣ, ಮೂರನೇ ಮಹಡಿಗೆ ಸ್ಕೂಟರ್‌ನಲ್ಲಿ ತೆರಳಲು ಆಸ್ಪತ್ರೆಯ ಆಡಳಿತ ಮಂಡಳಿಯಿಂದ ಅನುಮತಿ ಪಡೆದಿದ್ದೆʼ ಎಂದು ಜೈನ್ ಹೇಳಿದ್ದಾರೆ. ಆಸ್ಪತ್ರೆಯ ಅಸಮರ್ಪಕ ನಿರ್ವಹಣೆ ಮತ್ತು ಅವ್ಯವಸ್ಥೆಗಳಿಂದಾಗಿ ಈ ಘಟನೆ ನಡೆದಿದೆ ಎಂದಿದ್ದಾರೆ.
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ದೇವಕಿನಂದ್ ʻಆಸ್ಪತ್ರೆಯಲ್ಲಿ ಒಪಿಡಿ ವಿಭಾಗವನ್ನು ವಿಸ್ತರಿಸಲಾಗಿದ್ದು, ಪ್ರತಿನಿತ್ಯ ಸುಮಾರು ಮೂರ ಸಾವಿರ ರೋಗಿಗಳು ಇಲ್ಲಿಗೆ ಬರುತ್ತಾರೆ. ಆದರೆ ಸಾಕಷ್ಟು ಸಂಖ್ಯೆಯ ಗಾಲಿಕುರ್ಚಿಗಳು ಇಲ್ಲಿಲ್ಲ. ಶೀಘ್ರದಲ್ಲೇ ವ್ಯವಸ್ಥೆಗೊಳಿಸಲಾಗುವುದುʼ ಎಂದು ಹೇಳಿದ್ದಾರೆ.