ಒತ್ತಾಯಪೂರ್ವಕವಾಗಿ ಮತಾಂತರ ಮಾಡಿದವರಿಗೆ ಸಾವೇ ಶಿಕ್ಷೆಯಾಗಲಿದೆ. ಮಧ್ಯಪ್ರದೇಶ ಸರ್ಕಾರವು ಮತಾಂತರ ಮಾಡಿದವರಿಗೆ ಗಲ್ಲು ಶಿಕ್ಷೆ ವಿಧಿಸುವಂತಹ ಕಾನೂನನ್ನು ಜಾರಿ ಮಾಡಲಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೋಹನ್ ಯಾದವ್ ಅವರು, “ನಮ್ಮ ಮುಗ್ಧ ಹೆಣ್ಣು ಮಕ್ಕಳ ವಿರುದ್ಧ ದೌರ್ಜನ್ಯ ಎಸಗುವವವರ ವಿರುದ್ಧ ನಮ್ಮ ಸರ್ಕಾರವು ಅತೀ ಕಠಿಣವಾದ ಕ್ರಮವನ್ನು ಕೈಗೊಳ್ಳಲಿದೆ. ನಮ್ಮ ಹೆಣ್ಣು ಮಕ್ಕಳನ್ನು ಒತ್ತಾಯಪೂರ್ವಕವಾಗಿ ಮತಾಂತರ ಮಾಡುವವರನ್ನು ನಾವು ಬಿಡಲಾರೆವು. ಅಂತಹ ಜನರಿಗೆ ಬದುಕಲು ಬಿಡಬಾರದು” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕ್ರೈಸ್ತ ಧರ್ಮಕ್ಕೆ ದಲಿತರ ಮತಾಂತರ: ಕೇರಳದ ದಂಪತಿಗೆ 5 ವರ್ಷ ಜೈಲು ಶಿಕ್ಷೆ
2021ರ ಮಾರ್ಚ್ 8ರಂದು ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರವು ಮತಾಂತರ ತಡೆಗಟ್ಟುವ ಉದ್ದೇಶದಿಂದ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯನ್ನು ಜಾರಿ ಮಾಡಿದೆ. ಈಗಾಗಲೇ ಉತ್ತರ ಪ್ರದೇಶ ಮತ್ತು ಗುಜರಾತ್‌ನಲ್ಲಿ ಬಿಜೆಪಿ ಸರ್ಕಾರವು ಇಂತಹುದ್ದೇ ಕಾಯ್ದೆಗಳನ್ನು ಹೊಂದಿದೆ. ಈ ನಡುವೆ ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಮತಾಂತರ ತಡೆ ಕಾಯ್ದೆ ಜಾರಿಗೊಳಿಸುವ ಸಿದ್ಧತೆ ನಡೆಸುತ್ತಿದ್ದಾರೆ. ಬಹುತೇಕ ಬಿಜೆಪಿ ಆಡಳಿತವಿರುವ ರಾಜ್ಯಗಳು ಮತಾಂತರ ವಿರೋಧಿ ಕಾಯ್ದೆ ಜಾರಿಗೆ ತರಲು ಮುಂದಾಗುತ್ತಿದೆ.
ಮಧ್ಯಪ್ರದೇಶದಲ್ಲಿ ಈಗಾಗಲೇ ಜಾರಿಯಲ್ಲಿರುವ ಕಾಯ್ದೆಯಡಿ ಅಕ್ರಮವಾಗಿ ಮತಾಂತರ ಮಾಡಿರುವುದು ಸಾಬೀತಾದರೆ ಹತ್ತು ವರ್ಷ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಗುತ್ತದೆ. ಈ ಶಿಕ್ಷೆಯನ್ನು ಗಲ್ಲು ಶಿಕ್ಷೆಗೆ ಏರಿಸಲು ಮಧ್ಯಪ್ರದೇಶದ ಬಿಜೆಪಿ ಸರ್ಕಾರವು ಮುಂದಾಗಿದೆ.
ಈ ನಡುವೆ ಬಿಜೆಪಿ ಸರ್ಕಾರ ನಿಜವಾಗಿಯೂ ಹೆಣ್ಣು ಮಕ್ಕಳ ಸುರಕ್ಷತೆಗೆ ನಿಂತಿರುವುದಾದರೆ ಅದೆಷ್ಟೋ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಈ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲಿ. ಮಹಿಳೆಯರ ಮೇಲಾಗುವ ದೌರ್ಜನ್ಯವನ್ನು ತಡೆಯಲಿ. ಅದರ ಬದಲಾಗಿ ಎಲ್ಲಾ ವಿಚಾರದಲ್ಲಿ ರಾಜಕೀಯ ಮೂಗು ತೂರಿಸುವ ತಮ್ಮ ಪ್ರವೃತ್ತಿಯನ್ನು ಬಿಡಲಿ ಎಂದು ನೆಟ್ಟಿಗರು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಶಾರೂಖ್ ಪತ್ನಿ ಗೌರಿ ಮತಾಂತರ ಆಗಿದ್ದಾರೆ ಎಂದು ಚಿತ್ರ ವೈರಲ್; ಬೇರೆಯೇ ಇದೆ ಅಸಲಿಯತ್ತು!
ಮತಾಂತರ ವಿಚಾರದಲ್ಲಿ ಸದಾ ತನ್ನ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳುತ್ತಲೇ ಬಂದಿರುವ ಬಿಜೆಪಿ ಧರ್ಮಗಳ ನಡುವೆ ವಿಷಬೀಜ ಬಿತ್ತುವ ತಮ್ಮ ಚಾಳಿಯನ್ನು ಮುಂದುವರೆಸುತ್ತಲೇ ಬಂದಿದೆ. ಈಗಾಗಲೇ ‘ಲವ್ ಜಿಹಾದ್’ ಎಂಬ ಕಥೆ ಕಟ್ಟಿ ಹಿಂದೂ- ಮುಸ್ಲಿಮರ ನಡುವೆ ಬಿರುಕು ಮೂಡಿಸಿದೆ. ಜೊತೆಗೆ ಆ ಬಿರುಕಿನಲ್ಲೇ ನಿಂತು ಜನರಲ್ಲಿ ಸಾಮರಸ್ಯ ಬೆಳೆಯದಂತೆ ಕಾವಲು ಕಾಯುತ್ತಿದೆ.
ಬಿಜೆಪಿ ನಾಯಕರು ತಮ್ಮ ರಾಜಕೀಯ ಲಾಭಕ್ಕಾಗಿ ಈಗಾಗಲೇ ಉತ್ತರ ಪ್ರದೇಶದಲ್ಲಿ ಗೋವಿನ ಹೆಸರಿನಲ್ಲಿ ಹಲವು ಅಮಾಯಕರನ್ನು ಬಲಿ ತೆಗೆದುಕೊಂಡಿದೆ. ಬರೀ ಮುಸ್ಲಿಂ ಎಂಬ ಕಾರಣಕ್ಕೆ ಅಕ್ರಮ ಗೋ ಸಾಗಾಟದ ಆರೋಪ ಹೊರಿಸಿ ಅಮಾಯಕರ ಮೇಲೆ ಹಲ್ಲೆ, ಹತ್ಯೆ ನಡೆಯುತ್ತಿದೆ. ಇದೀಗ ಮತಾಂತರ ಎಂಬ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಅಲ್ಪಸಂಖ್ಯಾತರ ಮೇಲೆ ಬಿಜೆಪಿ ದಬ್ಬಾಳಿಕೆ ನಡೆಸಲು ಸಿದ್ಧತೆ ನಡೆಸುತ್ತಿರುವಂತಿದೆ.
