- ಲೋಕಸಭೆ ಚುನಾವಣೆಗೆ ತಯಾರಿ ಆರಂಭಿಸಿದ ರಾಜ್ಯ ಬಿಜೆಪಿ
- ಕೇಂದ್ರ ಸರ್ಕಾರದ ಸಾಧನೆ ಪ್ರಚಾರದ ಹೆಸರಲ್ಲಿ ಚುನಾವಣಾ ತಯಾರಿ
ಕೇಂದ್ರ ಸರಕಾರಕ್ಕೆ 9 ವರ್ಷ ತುಂಬಿದ ವಿಚಾರವನ್ನು ಮುಂದಿಟ್ಟುಕೊಂಡು ರಾಜ್ಯ ಬಿಜೆಪಿ ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ 7 ತಂಡಗಳ ಮೂಲಕ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಾಗುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಏಳು ತಂಡಗಳು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿವೆ. ಜೂನ್ 22ರಂದು ಈ ಪ್ರವಾಸ ಆರಂಭವಾಗಲಿದೆ” ಎಂದರು.
“ಪ್ರವಾಸದ ವೇಳೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಲಾಗುವುದು. ಕೇಂದ್ರ ಸರಕಾರಕ್ಕೆ 9 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಸರಕಾರದ ಸಾಧನೆಗಳ ಕುರಿತು ಜನರಿಗೆ ತಿಳಿಸಲಾಗುವುದು” ಎಂದು ರವಿಕುಮಾರ್ ಹೇಳಿದರು.
“ವಿಧಾನಸಭಾ ಚುನಾವಣೆಯ ಸೋಲಿನಿಂದ ಆಘಾತ ಆಗಿತ್ತು. ಅದರಿಂದ ಹೊರ ಬಂದು ಕಾರ್ಯಕರ್ತರಲ್ಲಿ ಹೊಸಹುರುಪು ತುಂಬಿ ಮತ್ತೆ ಸದೃಢ ಪಕ್ಷ ಕಟ್ಟುವುದು ಹಾಗೂ ನಾಯಕರು ಮತ್ತು ಕಾರ್ಯಕರ್ತರ ನಡುವೆ ಮರಳಿ ಬಾಂಧವ್ಯ ಬೆಸೆದು ಲೋಕಸಭೆ ಚುನಾವಣೆಗೆ ತಯಾರಾಗಲು ಈ ಪ್ರವಾಸ ಮಾಡಲಾಗುತ್ತಿದೆ” ಎಂದು ಅವರು ಹೇಳಿದರು.
“ಇದಾದ ಬಳಿಕ ಮರಳಿ ಜೂನ್ 26ರಿಂದ ಜುಲೈ 5ರವರೆಗೆ ಮತ್ತೊಂದು ರಾಜ್ಯ ಪ್ರವಾಸ ಮಾಡಲಾಗುತ್ತದೆ. ರಾಜ್ಯಾದ್ಯಂತ ಮನೆ ಮನೆಗೆ ತೆರಳಿ ‘ಮನೆಮನೆಗೆ ಮೋದಿ’ ಕರಪತ್ರ ವಿತರಿಸಿ ಪಕ್ಷವನ್ನು ಸಜ್ಜು ಮಾಡಲಾಗುತ್ತದೆ” ಎಂದು ರವಿಕುಮಾರ್ ಹೇಳಿದರು. ಈ ಪ್ರವಾಸದಲ್ಲಿ 50 ಲಕ್ಷ ಮನೆಗಳನ್ನು ತಲುಪುವ ಗುರಿ ಇದೆ ಎಂದು ಅವರು ತಿಳಿಸಿದರು.
ಈ ಸುದ್ದಿ ಓದಿದ್ದೀರಾ?:ರಾಜ್ಯದಲ್ಲಿ ಅಕ್ಕಿ ಸಿಕ್ಕರೆ ಬಿ ವೈ ವಿಜಯೇಂದ್ರ ಕೊಡಿಸಲಿ: ಸಿಎಂ ಸಿದ್ದರಾಮಯ್ಯ
“ಮೊದಲ ತಂಡವನ್ನು ಬಿ.ಎಸ್.ಯಡಿಯೂರಪ್ಪ ಮುನ್ನಡೆಸಲಿದ್ದಾರೆ. ಈ ತಂಡದಲ್ಲಿ ಗೋವಿಂದ ಕಾರಜೋಳ, ನಾರಾಯಣಸ್ವಾಮಿ, ಪ್ರತಾಪ ಸಿಂಹ, ಪಿ.ಸಿ.ಮೋಹನ್, ಮುದ್ದುಹನುಮೇಗೌಡ, ಜಿ.ಎಸ್.ಬಸವರಾಜು, ಎಂ.ಪಿ.ರೇಣುಕಾಚಾರ್ಯ, ಮಾಧುಸ್ವಾಮಿ, ತೇಜಸ್ವಿ ಸೂರ್ಯ ಅವರು ಇರಲಿದ್ದಾರೆ. ಈ ತಂಡವು ದಾವಣಗೆರೆ, ಚಿತ್ರದುರ್ಗ, ಮಧುಗಿರಿ, ತುಮಕೂರು, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ ಸಂಘಟನಾತ್ಮಕ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದೆ” ಎಂದರು.
“ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ತಂಡದಲ್ಲಿ ಶ್ರೀರಾಮುಲು, ಭಗವಂತ ಖೂಬಾ, ಎಂ.ಪಿ.ದೇವೇಂದ್ರಪ್ಪ, ರಾಜೂಗೌಡ, ಪಿ.ವಿ.ನಾಯಕ್, ಕರಡಿ ಸಂಗಣ್ಣ, ಎಂ.ಪಿ.ಪ್ರಕಾಶ್ ಅವರ ಮಗಳಾದ ಶ್ರೀಮತಿ ಎಂ.ಪಿ.ಸುಮಾ ವಿಜಯ್ ಇರುವರು. ಇವರು ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲಾ ಪ್ರವಾಸ ಮಾಡಲಿದ್ದಾರೆ” ಎಂದು ತಿಳಿಸಿದರು.
“ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತಂಡದಲ್ಲಿ ರಮೇಶ್ ಜಿಗಜಿಣಗಿ, ಗದ್ದಿಗೌಡರ, ಮಂಗಳಾ ಸುರೇಶ್ ಅಂಗಡಿ, ಬಸನಗೌಡ ಪಾಟೀಲ ಯತ್ನಾಳ್, ರಮೇಶ್ ಜಾರಕಿಹೊಳಿ, ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ, ಬೈರತಿ ಬಸವರಾಜು, ವೀರಣ್ಣ ಚರಂತಿಮಠ, ರಮೇಶ್ ಕತ್ತಿ ಭಾಗವಹಿಸುವರು. ವಿಜಯಪುರ, ಬಾಗಲಕೋಟೆ, ಬೆಳಗಾವಿ ನಗರ, ಗ್ರಾಮಾಂತರ ಮತ್ತು ಚಿಕ್ಕೋಡಿಗಳಲ್ಲಿ ಇವರು ಪ್ರವಾಸ ಮಾಡುತ್ತಾರೆ” ಎಂದು ವಿವರಿಸಿದರು.
“ಆರ್.ಅಶೋಕ್ ಅವರ ತಂಡದಲ್ಲಿ ಪ್ರತಾಪ ಸಿಂಹ, ಎಸ್.ಟಿ.ಸೋಮಶೇಖರ್, ಕೆ.ಜಿ.ಬೋಪಯ್ಯ, ಎ.ಟಿ.ರಾಮಸ್ವಾಮಿ, ಪಿ.ಸಿ.ಮೋಹನ್, ಮುನಿಸ್ವಾಮಿ, ಪ್ರೀತಂಗೌಡ, ಅಪ್ಪಚ್ಚು ರಂಜನ್, ಮಂಜುನಾಥ್ ಅವರು ಪಾಲ್ಗೊಳ್ಳುವರು. ಇವರು ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲಾ ಪ್ರವಾಸ ಮಾಡಲಿದ್ದಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ?: ಬಿಜೆಪಿ ಕಾಮಣ್ಣರ ಕಿರುಕುಳ ಅನುಭವಿಸುವ ಹೆಣ್ಣುಮಕ್ಕಳಿಗೆ ʼಹೆಲ್ಪ್ ಲೈನ್ʼ ಯಾವಾಗ: ಕಾಂಗ್ರೆಸ್ ಪ್ರಶ್ನೆ
“ಡಿ.ವಿ.ಸದಾನಂದ ಗೌಡ ಮತ್ತು ವಿ.ಸೋಮಣ್ಣರವರ ನೇತೃತ್ವದ ಮತ್ತೊಂದು ತಂಡವು ಶೋಭಾ ಕರಂದ್ಲಾಜೆ, ಪ್ರತಾಪ ಸಿಂಹ, ಗೋಪಾಲಯ್ಯ, ಮಲ್ಲಿಕಾರ್ಜುನಪ್ಪ, ವಿಜಯಶಂಕರ್, ಶ್ರೀನಿವಾಸ ಪ್ರಸಾದ್ ನಿರಂಜನ್, ವತ್ಸ, ರಾಮದಾಸ್, ನಾಗೇಂದ್ರ ಇರುವರು. ಈ ತಂಡವು ಚಾಮರಾಜನಗರ, ಮೈಸೂರು, ಮೈಸೂರು ಗ್ರಾಮಾಂತರ, ಮಂಡ್ಯ- ರಾಮನಗರ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತದೆ” ಎಂದು ಅವರು ವಿವರ ನೀಡಿದರು.
“ಪ್ರಲ್ಹಾದ ಜೋಷಿ ಮತ್ತು ಸಿ.ಟಿ.ರವಿ ಅವರ ನೇತೃತ್ವದ ತಂಡವು ವಿಶ್ವೇಶ್ವರ ಹೆಗಡೆ ಕಾಗೇರಿ, ಸುನೀಲ್‌ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ವಿಜಯೇಂದ್ರ, ಪ್ರಮೋದ್ ಮಧ್ವರಾಜ್, ಬಿ.ವೈ.ವಿಜಯೇಂದ್ರ, ಶಿವರಾಮ ಹೆಬ್ಬಾರ್, ದಿನಕರ್ ಶೆಟ್ಟಿ, ಅರಗ ಜ್ಞಾನೇಂದ್ರ, ವೇದವ್ಯಾಸ ಕಾಮತ್ ಅವರನ್ನು ಒಳಗೊಂಡಿರುತ್ತದೆ. ಇವರು ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದೆ” ಎಂದರು.
“ಈಶ್ವರಪ್ಪನವರ ತಂಡದಲ್ಲಿ ಸಿ.ಎನ್.ಅಶ್ವತ್ಥನಾರಾಯಣ, ಶಿವಕುಮಾರ್ ಉದಾಸಿ, ಅರವಿಂದ ಬೆಲ್ಲದ, ಬಿ.ಸಿ.ಪಾಟೀಲ, ಸಂಗಣ್ಣ ಕರಡಿ, ಶಂಕರ ಪಾಟೀಲ ಮುನೇನಕೊಪ್ಪ, ಬಿ.ಸಿ.ಪಾಟೀಲ, ಶಿವರಾಜ್ ಸಜ್ಜನರ್ ಇರುತ್ತಾರೆ. ಹಾವೇರಿ, ಹುಬ್ಬಳ್ಳಿ- ಧಾರವಾಡ, ಧಾರವಾಡ ಗ್ರಾಮಾಂತರ, ಗದಗ, ಕೊಪ್ಪಳಗಳಲ್ಲಿ ಇವರು ಪ್ರವಾಸ ಮಾಡುತ್ತಾರೆ” ಎಂದು ರವಿಕುಮಾರ್ ತಿಳಿಸಿದರು.