ಸಿಎಂ ಸಿದ್ದರಾಮಯ್ಯನವರು ತಮ್ಮ 16ನೇ ಬಜೆಟ್ ಆಗಿ ರಾಜ್ಯ ಸರ್ಕಾರದ 2025ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಈ ಬಗ್ಗೆ ದಾವಣಗೆರೆಯ ವಿವಿಧ ಕ್ಷೇತ್ರಗಳ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ದಕ್ಷಿಣ ಶಾಸಕ ಶಾಮನೂರು ಶಿವಶಂಕರಪ್ಪ
“ದಾವಣಗೆರೆ ಜಿಲ್ಲಾ ಆಸ್ಪತ್ರೆ ನವೀಕರಣ, ಬಂಜಾರ ಸಮುದಾಯದ ಪ್ರಮುಖ ಧಾರ್ಮಿಕ ಸ್ಥಳ ಸಂತ ಸೇವಾಲಾಲ್ ಪುಣ್ಯಕ್ಷೇತ್ರ ಸೂರಗೊಂಡನಕೊಪ್ಪದಲ್ಲಿ ಒಂದು ವಸತಿಶಾಲೆ, ಕೊಂಡಜ್ಜಿಯ ವೃತ್ತಿರಂಗಭೂಮಿ ರಂಗಾಯಣದಲ್ಲಿ ಮೂಲಸೌಕರ್ಯ, ವೃತ್ತಿ ‘ರಂಗಾಯಣ ಸಮುಚ್ಛಯ ಹಾಗೂ ಥಿಯೇಟರ್ ಮ್ಯೂಸಿಯಂ ನಿರ್ಮಾಣಕ್ಕೆ ₹3 ಕೋಟಿ, ಜಗಳೂರು ಕೆರೆ ತುಂಬಿಸುವ ಯೋಜನೆ, ಹೊನ್ನಾಳಿಯ ಬೆನಕನಹಳ್ಳಿ ಗೋವಿನಕೋವಿ ಮತ್ತು ಹನುಮಸಾಗರ ಕೆರೆ ತುಂಬಿಸುವ ಯೋಜನೆಗೆ ಅನುದಾನ ತೆಗೆದಿರಿಸಿರುವುದು ಹಾಗೂ ರಾಜ್ಯ ಸರ್ಕಾರವು ರೈಲ್ವೆ ಸಹಯೋಗದೊಂದಿಗೆ ತುಮಕೂರು-ದಾವಣಗೆರೆ ಸೇರಿದಂತೆ 9 ವಿವಿಧ ರೈಲ್ವೆ ಯೋಜನೆಗಳಿಗೆ ಮಂಜೂರಾತಿ ಮಾಡಿರುವುದು, ದಾವಣಗೆರೆ ಕೇಂದ್ರ ವಲಯದಲ್ಲಿ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳಗಳ ಸ್ಥಾಪನೆ ದಾವಣಗೆರೆ ಜಿಲ್ಲೆ ವಿದ್ಯುನ್ಮಾನ ಕ್ಯಾಮೆರಾ ಅಳವಡಿಕೆಗೆ ಮಂಜೂರಾತಿ ಸೇರಿದಂತೆ ದಾವಣಗೆರೆಗೆ ಪ್ರಾಶಸ್ತ್ಯ ನೀಡಲಾಗಿದೆ. ಎಲ್ಲ ವಲಯಕ್ಕೂ ಈ ಬಜೆಟ್ ಪೂರಕವಾಗಿ ಸ್ಪಂದಿಸಿದೆ” ಎಂದಿದ್ದಾರೆ.

ಕಾರ್ಮಿಕ ಮುಖಂಡ; ಕೆ.ರಾಘವೇಂದ್ರ ನಾಯರಿ
“ಕಾರ್ಮಿಕ ವರ್ಗಕ್ಕೆ ಬಜೆಟ್ ಸಮಾಧಾನ ತಂದಿಲ್ಲ. ಬಜೆಟ್‌ನಲ್ಲಿ ಕಾರ್ಮಿಕ ವರ್ಗದ ಹಿತವನ್ನು ಕಡೆಗಣಿಸಲಾಗಿದೆ. ಅಂಗನವಾಡಿ, ಬಿಸಿಯೂಟ ಮತ್ತು ಆಶಾ ಕಾರ್ಯಕರ್ತೆಯರ ಹೋರಾಟ, ಬೇಡಿಕೆಗೆ ಮನ್ನಣೆ ನೀಡದೆ ಗೌರವಧನದಲ್ಲಿ ಕೇವಲ ₹1000 ಏರಿಕೆ ಮಾಡಲಾಗಿದೆ. ಇದು ಕಾರ್ಮಿಕವರ್ಗದ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ನಮ್ಮ ಹೋರಾಟವನ್ನು ಮುಂದುವರೆಸಬೇಕಾಗಿದೆ” ಎಂದು ಎಚ್ಚರಿಕೆ ನೀಡಿದರು.
“ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸಲು ವಸತಿ ಶಾಲೆಗಳ ಆರಂಭ, ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯಡಿ ₹5 ಲಕ್ಷ ಮಿತಿ ಪೂರ್ಣಗೊಂಡಲ್ಲಿ ಹೃದ್ರೋಗ, ಕ್ಯಾನ್ಸರ್ ಚಿಕಿತ್ಸೆಗೆ ಹೆಚ್ಚುವರಿಯಾಗಿ ₹5 ಲಕ್ಷ ನೀಡುವ ಯೋಜನೆ, 2,500 ಪತ್ರಕರ್ತರಿಗೆ ಮಾಧ್ಯಮ ಸಂಜೀವಿನಿ ಯೋಜನೆ ಕಲ್ಪಿಸಿರುವುದು ಸ್ವಾಗತಾರ್ಹ” ಎಂದರು.
ಚಿತ್ರದುರ್ಗ ಕಾಂಗ್ರೆಸ್ ಮುಖಂಡ ಆರ್ ಕೆ ಸರ್ದಾರ್.
“ಮುಖ್ಯಮಂತ್ರಿ ಸಿದ್ದರಾಮಯ್ಯನವರ 16ನೇ ಬಜೆಟ್ 4 ಲಕ್ಷದ 9 ಸಾವಿರ ಕೋಟಿ ವೆಚ್ಚದ ಬಜೆಟ್ ಐತಿಹಾಸಿಕವಾಗಿದೆ. ಸಾರ್ವಜನಿಕವಾಗಿ ಎಲ್ಲ ಸಮುದಾಯ ಮತ್ತು ಸಮಾಜದ ಜನರಿಗೆ ಸಮನಾಗಿ ಹಂಚುವ, ಸಂತೋಷ ತರುವಂತಹ ಬಜೆಟ್ ಆಗಿರುತ್ತದೆ. ಇಡೀ ರಾಜ್ಯದ ಬಡ ಮತ್ತು ಮಧ್ಯಮವರ್ಗದ ಜನರು ತಮ್ಮ ಮೇಲೆ ಇಟ್ಟಿರುವ ವಿಶ್ವಾಸ ನಂಬಿಕೆಯನ್ನು ಸಿದ್ದರಾಮಯ್ಯ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಬಜೆಟ್ ನಲ್ಲಿ ನೇರಪಾವತಿಗೊಳಿಸದೆ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರಿಗೆ ಅನ್ಯಾಯ; ಪ್ರತಿಭಟನೆ.
ಚಿತ್ರದುರ್ಗ ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್: ತಿಪ್ಪೇಸ್ವಾಮಿ ಬಿಪಿ
“ಇದೊಂದು ಆಶಾದಾಯಕ ಬಜೆಟ್ ಆಗಿದ್ದರೂ, ಪರಿಶಿಷ್ಟ ಜಾತಿ/ಪಂಗಡದ ನಿರುದ್ಯೋಗಿ ಯುವಜನತೆಯ ಸ್ವ-ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಪ್ರಾಚೀನ ಬೌದ್ದ ಕೇಂದ್ರ ಸನ್ನತಿ ಅಭಿವೃದ್ಧಿ ಪ್ರಾಧಿಕಾರ ರಚನೆ, ಬೆಂಗಳೂರು ಬೌದ್ದ ಅಧ್ಯಯನ ಅಕಾಡೆಮಿ ಸ್ಥಾಪನೆ, ನಿರಂತರ ಬುದ್ದ ದಮ್ಮದ ಚಟುವಟಿಕೆಯಲ್ಲಿ ತೊಡಗಿರುವ ಮಹಾಬೋಧಿ ಅಧ್ಯಯನ ಕೇಂದ್ರದ 100 ವರ್ಷಗಳ ಹಳೆಯ ಗ್ರಂಥಾಲಯವನ್ನು ₹1 ಕೋಟಿ ರೂ ವೆಚ್ಚದ ಡಿಜಿಟಲೀಕರಣ ಉನ್ನತಿ ಹಾಗೂ ಬೌದ್ದ, ಜೈನ್, ಸಿಖ್ ಸಮುದಾಯ ಸಮಗ್ರ ಅಭಿವೃದ್ದಿಗೆ ₹100 ಕೋಟಿ ಅನುದಾನ ನೀಡಿರುವುದು ಸ್ವಾಗತಾರ್ಹ” ಎಂದರು.
“ಎಸ್‌ಸಿ/ಎಸ್‌ಟಿ ಹಾಗೂ ಹಿಂದುಳಿದ ವರ್ಗದ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸಲು ಪ್ರತಿ ಜಿಲ್ಲೆಗೆ ಶಾಲೆ, 26 ಹೊಸ ವಸತಿ ಶಾಲೆಗಳ ಸ್ಥಾಪನೆ, ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಹೈನುಗಾರಿಕೆ ಸೌಲಭ್ಯ, ಮಹಿಳಾ ಸ್ವಸಹಾಯ ಸಂಘಗಳಿಗೆ ₹5 ಲಕ್ಷ ಸಾಲ ಸೌಲಭ್ಯ ನೀಡಿರುವುದು ಉತ್ತಮವಾದುದು. ಎಸ್‌ಸಿ/ಎಸ್‌ಟಿ ನಿರುದ್ಯೋಗ ಯುವಕ/ಯುವತಿಯರು ಸ್ವ-ಉದ್ಯೋಗ ಸೃಷ್ಠಿಯ ಬಗ್ಗೆ ಇಟ್ಟುಕೊಂಡಿದ್ದ ಅಪಾರ ಭರವಸೆಗೆ ಫಾಸ್ಟ್‌ಫುಡ್, ಟ್ರಕ್ ಟ್ರೇಲರ್, ಮೊಬೈಲ್ ಕಿಚನ್ ಫುಡ್ ಕಿಯೋಸ್ಕ್ ಸೌಲಭ್ಯ ಮಾತ್ರ ಘೋಷಿಸಿರುವುದು ನಿರೀಕ್ಷೆ ಹುಸಿಗೊಳಿಸಿದೆ. ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನ ಕೊಟ್ಟಿದ್ದರೂ ದಲಿತ ವಿದ್ಯಾರ್ಥಿಗಳ ಅತಿ ಮುಖ್ಯ ಬೇಡಿಕೆಯಾಗಿದ್ದ ʼಪೇಮೆಂಟ್ ಸೀಟ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯʼ ನಿರಾಕರಿಸುವುದು ದುರದೃಷ್ಠಕರ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು