ಆಹಾರ ಹುಡುಕುತ್ತ ನದಿ ನೀರಿನಿಂದ ಹೊರಗೆ ಬಂದು, ಹಳ್ಳಿ ಪ್ರವೇಶ ಮಾಡಿದ್ದ ಮೊಸಳೆಯನ್ನು ಬೆಳಗಾವಿ ಜಿಲ್ಲೆಯ ಗ್ರಾಮಸ್ಥರೇ ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಗೋಕಾಕ್ ತಾಲೂಕಿನ ಉದಗಟ್ಟಿ ಎಂಬ ಗ್ರಾಮದಲ್ಲಿ ಬೃಹತ್ ಗಾತ್ರದ ಮೊಸಳೆ ಸೆರೆಯಾಗಿದ್ದು, ಗ್ರಾಮಸ್ಥರು ಜೆಸಿಬಿ ತರಿಸಿ ಮೊಸಳೆಯನ್ನು ಸಾಗಿಸಿದ್ದಾರೆ.
ಮಳೆಯಿಲ್ಲದ ಕಾರಣ ಘಟಪ್ರಭಾ ನದಿಯಲ್ಲಿ ನೀರು ಕಡಿಮೆಯಾಗಿದೆ. ಹೀಗಾಗಿ ಇತ್ತೀಚೆಗೆ ನದಿ ತೀರದ ಊರ ಜನರಿಗೆ ಮೊಸಳೆ ಕಾಟ ಹೆಚ್ಚಾಗಿತ್ತು. ಮೊಸಳೆ ದಡಕ್ಕೆ ಬಂದು ಮಲಗುವುದು, ಊರಿಗೆ ಪ್ರವೇಶ ಮಾಡುವುದು, ಅಲ್ಲಿಯೇ ಇದ್ದ ಗದ್ದೆಗೆ ಬಂದು ಮಲಗುವುದು ಸಾಮಾನ್ಯವಾಗಿತ್ತು. ಹೀಗಾಗಿ ಸಮೀಪದ ಊರುಗಳ ಜನರು ಸದಾ ಭಯದಲ್ಲಿಯೇ ಇರುವಂತಾಗಿತ್ತು.

ಈ ಸುದ್ದಿ ಓದಿದ್ದೀರಾ? ಧಾರವಾಡ | ನೀರು ಪೂರೈಕೆ ಕಾಮಗಾರಿಗಳು ಸಮರ್ಪಕವಾಗಿ ಸಾಗಬೇಕು: ಸಚಿವ ಸಂತೋಷ್ ಲಾಡ್
ಶನಿವಾರ ರಾತ್ರಿಯೂ ಮೊಸಳೆ ಆಹಾರ ಅರಸಿ ಗದ್ದೆಗೆ ಬಂದು ಮಲಗಿತ್ತು. ಅದನ್ನು ನೋಡಿದ ಗ್ರಾಮಸ್ಥರು ಕೂಡಲೇ ತಾವೇ ಮೊಸಳೆಯನ್ನು ಸೆರೆ ಹಿಡಿದಿದ್ದಾರೆ. ಬಳಿಕ ಅದನ್ನು ಚೀಲದಲ್ಲಿ ಬಿಗಿಯಾಗಿ ಕಟ್ಟಿ, ಜೆಸಿಬಿ ಯಂತ್ರದ ಸಹಾಯದಿಂದ ಮೊಸಳೆ ಸಾಗಿಸಿದ್ದಾರೆ. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿ, ಮೊಸಳೆಯನ್ನು ಅವರ ಸುಪರ್ದಿಗೆ ವಹಿಸಿದ್ದಾರೆ.