ಜಗತ್ತಿನಾದ್ಯಂತ ಫ್ಯಾಸಿಸಂ ವಿಸ್ತರಿಸುತ್ತಿರುವುದರ ವಿರುದ್ಧ ಹಲವಾರು ಮಹಿಳೆಯರು ‘ಮೇಲುಡುಪು’ ಧರಿಸದೆ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅಂತಾರಾಷ್ಟ್ರೀಯ ದುಡಿವ ಮಹಿಳಾ ದಿನದಂದು ಫ್ಯಾಸಿಸಂ ವಿರುದ್ಧ ಪ್ರತಿರೋಧ ದಾಖಲಿಸಿದ್ದಾರೆ.
ಪ್ಯಾರಿಸ್‌ನಲ್ಲಿ ಸಕ್ರಿಯವಾಗಿರುವ ‘ಫಿಮೆನ್’ (FEMEN) ಸಂಘಟನೆಯ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದಾರೆ. ‘ಫ್ಯಾಸಿಸ್ಟ್ ವೈರಸ್’ ಎಂಬ ಬರಹ ಮತ್ತು ‘ಸ್ವಸ್ತಿಕ್’ ಚಿಹ್ನೆ ಹಾಗೂ ಅಮೆರಿಕ, ರಷ್ಯಾ ಧ್ವಜಗಳನ್ನು ತಮ್ಮ ಎದೆಯ ಮೇಲೆ ಬರೆದುಕೊಂಡು ಮೇಲುಡುಪು ಧರಿಸದೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ‘ನಮ್ಮದು ಸ್ತ್ರೀವಾದಿ ಯುರೋಪ್, ಫ್ಯಾಸಿಸ್ಟ್ ಯುರೋಪ್ ಅಲ್ಲ!’ ಎಂದು ಘೋಷಣೆ ಕೂಗಿದ್ದಾರೆ.
FEMENನ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ; “HEIL MUSK! HEIL TRUMP! HEIL PUTINE! ಅಂತರರಾಷ್ಟ್ರೀಯವಾಗಿ, ಯುರೋಪ್ ಮತ್ತು ಅಮೆರಿಕ – ಎರಡರಲ್ಲೂ ಪ್ರತಿಗಾಮಿ ಆಕ್ರಮಣಗಳು ಹೆಚ್ಚುತ್ತಿವೆ. ಜಗತ್ತನ್ನು ಫ್ಯಾಸಿಸಂ ಆವರಿಸಿಕೊಳ್ಳುತ್ತಿದೆ. ಈ ಫ್ಯಾಸಿಸಂ ವಿರುದ್ಧ ಮತ್ತು ಮಹಿಳಾ ಹಕ್ಕುಗಳಿಗಾಗಿ 40 ಫಿಮೆನ್ ಕಾರ್ಯಕರ್ತೆಯರು ಮಿಲಿಟರಿ ಕ್ಯಾಪ್‌ಗಳನ್ನು ಧರಿಸಿ ಮಾರ್ಚ್ 8ರಂದು ಪ್ರತಿಭಟನೆ ನಡೆಸಿದ್ದಾರೆ” ಎಂದು ಪೋಸ್ಟ್ ಮಾಡಿದೆ.
“ಎರಡು ದೈತ್ಯ ಮಿಲಿಟರಿ ಶಕ್ತಿಗಳಾದ ಅಮೆರಿಕ ಮತ್ತು ರಷ್ಯಾ, ತಮ್ಮ ಪ್ರಾಬಲ್ಯವನ್ನು ಪ್ರತಿಪಾದಿಸುತ್ತಿವೆ. ಹಿಂಸಾತ್ಮಕ ಮತ್ತು ತಾರತಮ್ಯದ ಧೋರಣೆಗಳ ಮೂಲಕ ಭೌಗೋಳಿಕ ರಾಜಕೀಯವನ್ನು ವಿಷಕಾರಿಯಾಗಿ ಬದಲಿಸುತ್ತಿವೆ. ಒಂದು ಕಡೆ ಉಕ್ರೇನ್‌ನಲ್ಲಿ ಹತ್ಯಾಕಾಂಡ, ಮತ್ತೊಂದೆಡೆ ದಬ್ಬಾಳಿಕೆ ಮತ್ತು ಬೆದರಿಕೆಗಳು ನಡೆಯುತ್ತಿದೆ. ಭೂ ಗ್ರಹವು ಹಣ ಮತ್ತು ಅಧಿಕಾರದ ಗೀಳು ಹೊಂದಿರುವ ಇಬ್ಬರು ಅಧಿಕಾರದಾಹಿ ಹುಚ್ಚರ ಪ್ರಾಬಲ್ಯಕ್ಕೆ ಸಿಲುಕಿದೆ” ಎಂದು ಫಿಮೆನ್ ಹೇಳಿದೆ.
ಈ ವರದಿ ಓದಿದ್ದೀರಾ?: ಮಾಯಾವತಿ ವಿಚಿತ್ರ ನಿರ್ಧಾರಗಳು: ಆಕಾಶ್ ಪದಚ್ಯುತಿ, ಅಧೋಗತಿಯತ್ತ ಬಿಎಸ್‌ಪಿ
“ಟ್ರಂಪ್ ಆಡಳಿತವು ಸರ್ಕಾರಿ ವೆಬ್‌ಸೈಟ್‌ಗಳಿಂದ ‘ಮಹಿಳೆಯರು’, ‘ಕ್ವೀರ್’ ಮತ್ತು ‘ಗೇ’ ಪದಗಳನ್ನು ಅಳಿಸಿಹಾಕುತ್ತಿದೆ. ಗರ್ಭಪಾತದ ಹಕ್ಕನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸಲಾಗಿದೆ. ನಾಲ್ಕು ಯುಎಸ್ ರಾಜ್ಯಗಳಾದನೆವಾಡಾ, ಅರಿಜೋನಾ, ಮೊಂಟಾನಾ ಹಾಗೂ ಮಿಸೌರಿಯಲ್ಲಿ ಗರ್ಭಪಾತದ ಹಕ್ಕನ್ನು ನಿಷೇಧಿಸಲಾಗಿದೆ. ಪ್ರತಿಗಾಮಿ ‘ವ್ಯಾಪಾರಿ’ ವ್ಯಕ್ತಿ ಟ್ರಂಪ್ ಆಯ್ಕೆ ಮತ್ತು ಮಾಧ್ಯಮಗಳಲ್ಲಿ ಪ್ರರುಷಪ್ರಭುತ್ವದ ವಾಕ್ಚಾತುರ್ಯವು ಹಿಂಸಾತ್ಮಕ ಮತ್ತು ವಿಷಕಾರಿ ಪ್ರತಿಕ್ರಿಯೆಯನ್ನು ಪ್ರತಿಬಿಂಬಿಸುತ್ತದೆ” ಎಂದು ಹೇಳಿದೆ.
ಫಿಮೆನ್ ಸಂಘಟನೆಯು ಅಂತರರಾಷ್ಟ್ರೀಯ ಮಹಿಳಾ ಚಳುವಳಿಯ ಭಾಗವೆಂದು ಗುರುತಿಸಿಕೊಂಡಿದೆ. ಇದು ಸೆಕ್ಸ್‌ಟ್ರೀಮಿಸಂ ಎಂಬ ವಾದವನ್ನು ಪ್ರತಿಪಾದಿಸುತ್ತದೆ. ಅವರ ಪ್ರಕಾರ, ಸೆಕ್ಸ್‌ಟ್ರೀಮಿಸಂ ಎಂದರೆ “ಪಿತೃಪ್ರಭುತ್ವದ ವಿರುದ್ಧ ದಂಗೆ ಏಳುವುದು. ಸೆಕ್ಸ್‌ಟ್ರೀಮಿಸಂ ಶೈಲಿಯು ಸ್ತ್ರೀ ಲೈಂಗಿಕತೆ ಕುರಿತಾದ ಪಿತೃಪ್ರಭುತ್ವದ ಧೋರಣೆಯನ್ನು ಹೊಡೆದುರುಳಿಸುವ ಮಾರ್ಗವಾಗಿದೆ. ಪಿತೃಪ್ರಭುತ್ವ ಸಂಸ್ಕೃತಿಯ ಅಡಿಪಾಯವನ್ನು ದುರ್ಬಲಗೊಳಿಸುವ ಪ್ರಭಾವಶಾಲಿ ಅಸ್ತ್ರವಾಗಿದೆ” ಎಂದು ಫಿಮೆನ್ ಹೇಳುತ್ತದೆ.