ಕಾನೂನು ಎಷ್ಟೇ ಕಠಿಣವಾಗಿದ್ದರೂ ಸಮಾಜದಲ್ಲಿ ಮಹಿಳೆಯರ ಮೇಲೆ ನಿರಂತರವಾಗಿ ಅತ್ಯಾಚಾರ, ದೌರ್ಜನ್ಯಗಳು ನಡೆಯುತ್ತಿರುವುದು ಯಾಕೆ ಎಂಬ ಯಕ್ಷ ಪ್ರಶ್ನೆ ಸದಾ ಕಾಡುತ್ತಿದ್ದು, ಹೆಣ್ಣಿಗೆ ಹೆಣ್ಣು ಶತ್ರು ಎಂಬುದು ಶುದ್ಧ ಸುಳ್ಳು ಎಂದು ಜಿಲ್ಲಾ ಸರಕಾರಿ ನೌಕರರ ಮಹಿಳಾ ಸಂಘದ ಅಧ್ಯಕ್ಷೆ ಪಾರ್ವತಿ ವಿ. ಸೋನಾರೆ ಹೇಳಿದರು.
ಬೀದರ್ ಜಿಲ್ಲಾ ಸರಕಾರಿ ನೌಕರರ ಮಹಿಳಾ ಸಂಘ, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಲೇಖಕಿಯರ ಸಂಘದ ಸಹಯೋಗದಲ್ಲಿ ನಗರದ ತಾಯಿ ಮಗು ವೃತ್ತದಲ್ಲಿ ಆಯೋಜಿಸಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ʼ2025ನೇ ವರ್ಷ ಮಹಿಳಾ ದೌರ್ಜನ್ಯ ತಡೆ ದಿನಾಚರಣೆಯನ್ನಾಗಿ ಆಚರಿಸುತ್ತಿದೆ ಎಂದು ವಿಶ್ವಸಂಸ್ಥೆ ಹೇಳಿರುವುದು ಅತ್ಯಂತ ಖೇದಕರ ಮತ್ತು ನಾಚಿಕಿಗೇಡಿನ ಸಂಗತಿʼ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಭಾರತಿ ವಸ್ತ್ರದ ಮಾತನಾಡಿ, ʼಆಧುನಿಕ ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಭಾಗವಹಿಸುವ ಸಾಮರ್ಥ್ಯ ಹೊಂದಿರುವ ಮಹಿಳೆ ಕಠಿಣ ಸಂದರ್ಭದಲ್ಲಿಯೂ ಮುನ್ನಡೆಯಬೇಕುʼ ಎಂದರು.
ಜಿಲ್ಲಾ ಸರಕಾರಿ ನೌಕರರ ಮಹಿಳಾ ಸಂಘದ ಪ್ರಧಾನ ಕಾರ್ಯದರ್ಶಿ ಗೀತಾ ಗಡ್ಡೆ, ʼಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗೆ ಕುಟುಂಬದ ಪುರುಷರ ಸಹಕಾರ ಅತ್ಯಂತ ಅವಶ್ಯಕವಾಗಿದೆ. ಭೇದ-ಭಾವ ಮರೆತು ಎಲ್ಲರೂ ಅಭಿವೃದ್ಧಿ ಪಥದತ್ತ ಹೆಜ್ಜೆ ಇಡಬೇಕಾಗಿದೆʼ ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ʼನಮ್ಮ ಪೊಲೀಸ್ ನಮ್ಮ ಹೆಮ್ಮೆʼ ಮ್ಯಾರಾಥಾನ್
ಜಯದೇವಿ ಯದಲಾಪೂರೆ, ಪ್ರತಿಭಾ ಚಾಮಾ, ವಿಜಯಲಕ್ಮಿ ಕೌಟಗೆ, ಡಾ.ಶ್ರೇಯಾ ಮಹೇಂದ್ರಕರ್, ಸುಜಾತಾ ಪೂಜಾರಿ, ಸ್ವರೂಪರಾಣಿ ನಾಗೂರೆ, ಮಾಹಾನಂದಾ ಪಾಟೀಲ, ಚೆನ್ನಮ್ಮಾ ವಲ್ಲೇಪೂರೆ, ಕಾವೇರಿ ರಮೇಶ, ವಿದ್ಯಾವತಿ ಹಿರೇಮಠ, ಪದ್ಮಾ ಮಡಿವಾಳ, ಕು.ವಾಸವಿ ವಿಂದ್ಯಾ ಮಾಂತೇಶ ಸೇರಿದಂತೆ ಮುಂತಾದವರಿದ್ದರು.