ಮದುವೆಗು ಮುನ್ನ ಸುಂದರವಾಗಿದ್ದೆ, ಸಣ್ಣಗಿದ್ದೆ. ಆದರೆ, ಮದುವೆ ಬಳಿಕ ದಪ್ಪ ಆಗಿದ್ದೀಯಾ ಎಂದು ದುರುಳ ಪತಿಯೊಬ್ಬ ತನ್ನ ಪತ್ನಿಗೆ ನಿರಂತರವಾಗಿ ಕಿರುಕುಳ ನೀಡಿ, ಹಲ್ಲೆ ಮಾಡಿರುವ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಪೀಣ್ಯದಲ್ಲಿ ವಾಸವಾಗಿರುವ ರಮ್ಯಶ್ರೀ ಅವರಿಗೆ ಆಕೆಯ ಪತಿ ಪಿಲಿ ಸಾಯಿಕುಮಾರ್ ಕಿರುಕುಳ ನೀಡಿದ್ದಾನೆ. ಇತ್ತೀಚೆಗೆ, ರಮ್ಯಶ್ರೀ ಮತ್ತು ಆಕೆಯ ತಂದೆಯ ಮೇಲೆ ಹಲ್ಲೆ ಮಾಡಿ, ಖಾರದ ಪುಡಿ ಎರಚಿ ವಿಕೃತಿ ಮೆರೆದಿದ್ದಾನೆ. ಘಟನೆ ಬಳಿಕ ಸಂತ್ರಸ್ತೆ ಮಹಿಳೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ರಮ್ಯಶ್ರೀ ವೃತ್ತಿಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದಾರೆ. ಅವರು ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆ ಮೂಲಕ ಪುಲಿ ಸಾಯಿಕುಮಾರ್ ಎಂಬಾತನನ್ನು 2021ರಲ್ಲಿ ವಿವಾಹವಾಗಿದ್ದರು. ದಂಪತಿಗಳು ಆರಂಭದಲ್ಲಿ ಅನ್ಯೋನ್ಯತೆಯಿಂದ ಇದ್ದರು. ಆದರೆ, ಕಳೆದ ಕೆಲವು ತಿಂಗಳುಗಳಿಂದ ಸೌಂದರ್ಯದ ಕಾರಣಕ್ಕಾಗಿ ರಮಶ್ರೀಗೆ ಪುಲಿ ಸಾಯಿಕುಮಾರ್ ಕಿರುಕುಳ ನೀಡಲಾರಂಭಿಸಿದ್ದನೆಂದು ತಿಳಿದುಬಂದಿದೆ.
ಅಲ್ಲದೆ, ಇದೇ ಮಾರ್ಚ್ 6ರಂದು ತುರ್ತಾಗಿ ತನಗೆ 3 ಲಕ್ಷ ರೂಪಾಯಿ ಹಣ ಬೇಕು. ನಿನ್ನ ತಂದೆಯಿಂದ ಕೊಡುಸು ಎಂದು ರಮ್ಯಶ್ರೀಗೆ ಪುಲಿ ಒತ್ತಾಯಿಸಿದ್ದರು. ಹಣ ಕೊಡಿಸಲು ನಿರಾಕರಿಸಿದ್ದಕ್ಕೆ, ಜಗಳ ಮಾಡಿ, ಹಲ್ಲೆ ಎಸಗಿದ್ದ. ಮಾತ್ರವಲ್ಲದೆ, ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.