ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ಇಫ್ತಾರ್ ಕೂಟದ ವೇಳೆ ಬಜರಂಗದಳದ ಕಾರ್ಯಕರ್ತರು ದಾಂಧಲೆ ನಡೆಸಿ, ಕೂಟಕ್ಕೆ ಅಡ್ಡಿಪಡಿಸಿರುವ ಘಟನೆ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದಿದೆ.
ಹರಿದ್ವಾರದಲ್ಲಿರುವ ರಿಷಿಕುಲ್ ಆಯುರ್ವೇದಿಕ್ ಕಾಲೇಜಿನ ಆವರಣದಲ್ಲಿ ಶುಕ್ರವಾರ ಸಂಜೆ ಮುಸ್ಲಿಂ ವಿದ್ಯಾರ್ಥಿಗಳಿಗಾಗಿ ಇಫ್ತಾರ್ ಕೂಟ ಆಯೋಜಿಸಲಾಗಿತ್ತು. ಕೂಟಕ್ಕೆ ಹೊರಗಿನ ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗಿದೆ ಎಂದು ಆರೋಪಿಸಿ ಬಜರಂಗದಳದ ಕಾರ್ಯಕರ್ತರು ಕಾಲೇಜಿಗೆ ನುಗ್ಗಿ, ದಾಂಧಲೆ ನಡೆಸಿದ್ದಾರೆ.
ಸ್ಥಳಕ್ಕೆ ಪೊಲೀಸರು ಬಂದಿದ್ದು, ಬಜರಂಗದಳದ ಕಾರ್ಯಕರ್ತರನ್ನು ಸ್ಥಳದಿಂದ ಕಳಿಸಿದ್ದಾರೆ. ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಆದಾಗ್ಯೂ, ಇಫ್ತಾರ್ ಕೂಟ ಏರ್ಪಡಿಸಿದ ವಿದ್ಯಾರ್ಥಿಗಳ ವಿರುದ್ಧ ಕ್ರಮವನ್ನು ಕೈಗೊಳ್ಳಬೇಕೆಂದು ಬಜರಂಗದಳದ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರು ಕಾಲೇಜಿನ ನಿರ್ದೇಶಕ ಡಿಸಿ ಸಿಂಗ್, “ಅನುಮತಿ ಪಡೆಯದೆ ಕೆಲವು ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಇಫ್ತಾರ್ ಆಯೋಜಿಸಿರುವ ಬಗ್ಗೆ ದೂರು ಬಂದಿದೆ” ಎಂದು ಹೇಳಿದ್ದಾರೆ.
ಶಾಲಾ-ಕಾಲೇಜುಗಳು ಧರ್ಮಾತೀಯವಾಗಿ ಕಾರ್ಯನಿರ್ವಹಿಸಬೇಕು. ಆದಾಗ್ಯೂ, ಶಾಲಾ-ಕಾಲೇಜುಗಳಲ್ಲಿ ಸರಸ್ವತಿ ಪೂಜೆ ಸೇರಿದಂತೆ ಕೆಲವು ಹಿಂದು ಧಾರ್ಮಿಕ ಕಾರ್ಯಕ್ರಮಗಳು ಮತ್ತು ಹಬ್ಬಗಳನ್ನು ಆಚರಿಸಲಾಗುತ್ತದೆ ಎಂಬುದು ಗಮನಾರ್ಹ. ಅಂತೆಯೇ ಇಫ್ತಾರ್ ಮತ್ತು ಕ್ರಿಸ್‌ಮಸ್ ಆಚರಣೆ ನಡೆಸುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂಬುದನ್ನು ಅರಿತುಕೊಳ್ಳುವುದು ಅತ್ಯಗತ್ಯ.