ಮಹಾ ಕುಂಭಮೇಳದ ವೇಳೆ ನೀರಿನ ಗುಣಮಟ್ಟ ಸ್ನಾನಕ್ಕೆ ಯೋಗ್ಯವಾಗಿತ್ತು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ಸಲ್ಲಿಸಲಾದ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮಹಾ ಕುಂಭಮೇಳ ನಡೆಯುತ್ತಿರುವ ಪ್ರಯಾಗ್‌ರಾಜ್‌ನ ಹಲವು ಕಡೆಗಳಲ್ಲಿ ನದಿ ನೀರು ಸ್ನಾನ ಮಾಡಲು ಯೋಗ್ಯವಾಗಿಲ್ಲ. ಗಂಗಾ ನದಿಯಲ್ಲಿ ಫೀಕಲ್ ಕೋಲಿಫಾರ್ಮ್ (faecal coliform) ಬ್ಯಾಕ್ಟೀರಿಯಾ ಅಧಿಕವಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಮೂಲಕ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಈ ಹಿಂದೆ ತಿಳಿಸಿತ್ತು.
ಇದನ್ನು ಓದಿದ್ದೀರಾ? ಕುಂಭಮೇಳ | ಭಕ್ತರ ಆತಂಕ ತಪ್ಪಿಸಲು ಕಾಲ್ತುಳಿತದ ವಾಸ್ತವ ತಿಳಿಸಿಲ್ಲ: ಸಿಎಂ ಆದಿತ್ಯನಾಥ್ ಸಮಜಾಯಿಷಿ
ಆದರೆ ಆಗಾಗಲೇ ಕೋಟ್ಯಾಂತರ ಮಂದಿ ಗಂಗಾ ನದಿ ನೀರಿನಲ್ಲಿ ಪವಿತ್ರ ಸ್ನಾನ ಮಾಡಿದ್ದರು. ಈ ಡೇಟಾದ ಬಳಿಕ ಹಲವು ತಜ್ಞರು ಇದು ಆರೋಗ್ಯ ಸಮಸ್ಯೆಗೆ, ಚರ್ಮ ರೋಗಕ್ಕೆ ಕಾರಣವಾಗಬಹುದು ಎಂದು ಹೇಳಿದ್ದರು. ಆದರೆ ಸರ್ಕಾರ ಮಾತ್ರ ತನ್ನ ಎಂದಿನ ಚಾಳಿಯಂತೆ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿತ್ತು. ಹಾಗೆಯೇ ವರದಿಯನ್ನು ಮುಚ್ಚಿಡಲು ಯತ್ನಿಸಿತ್ತು ಎಂಬ ಆರೋಪವೂ ಕೇಳಿಬಂದಿದೆ.
ಇದಾದ ಬೆನ್ನಲ್ಲೇ ಫೆಬ್ರವರಿ 28 ಮತ್ತು ಮಾರ್ಚ್ 7ರಂದು ನ್ಯಾಯಮಂಡಳಿಯ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ವರದಿಯು ಜನವರಿ 12ರಿಂದ ಗಂಗಾ ನದಿಯ ಐದು ಸ್ಥಳಗಳಲ್ಲಿ ಮತ್ತು ಯಮುನಾ ನದಿಯ ಎರಡು ಸ್ಥಳಗಳಲ್ಲಿ ವಾರಕ್ಕೆ ಎರಡು ಬಾರಿ ನೀರಿನ ಪರೀಕ್ಷೆ ನಡೆಸಿದ ವರದಿ ಎಂದು ಸಿಪಿಸಿಬಿ ಹೇಳಿಕೊಂಡಿದೆ.
ಇದನ್ನು ಓದಿದ್ದೀರಾ? ಆರ್‌ಎಸ್‌ಎಸ್ ಮುಖ್ಯಸ್ಥರು ಕುಂಭಮೇಳಕ್ಕೆ ಹೋಗಿರುವ ಚಿತ್ರ ತೋರಿಸಿ: ಶಿಂದೆ ವಿರುದ್ಧ ರಾವತ್ ವಾಗ್ದಾಳಿ
ಹಾಗೆಯೇ ತಜ್ಞರ ಸಮಿತಿಯು ಡೇಟಾದಲ್ಲಿರುವ ವ್ಯತ್ಯಾಸದ ಸಮಸ್ಯೆಯನ್ನು ಪರಿಶೀಲಿಸಿದೆ. ಡೇಟಾವು ನಿರ್ದಿಷ್ಟ ಸ್ಥಳ ಮತ್ತು ಸಮಯದಲ್ಲಿ ನೀರಿನ ಗುಣಮಟ್ಟವನ್ನು ಉಲ್ಲೇಖಿಸಿದೆ. ಆದರೆ ಪ್ರವಾಹ, ಹರಿವು, ಇತರೆ ಅಂಶಗಳ ಕಾರಣಗಳಿಂದಾಗಿ ನೀರಿನ ಗುಣಮಟ್ಟ ಬದಲಾಗಬಹುದು ಎಂದು ವರದಿ ಹೇಳಿದೆ.
ಜನವರಿ 12ರಿಂದ ಫೆಬ್ರವರಿ 22ರವರೆಗೆ ಸಾಮೂಹಿಕ ಸ್ನಾನ ನಡೆದ 10 ಸ್ಥಳಗಳಲ್ಲಿನ ನೀರಿನ ಗುಣಮಟ್ಟದ ವಿಶ್ಲೇಷಣೆ ನಡೆಸಲಾಗಿದ್ದು, 20 ಸುತ್ತಿನ ಮೇಲ್ವಿಚಾರಣೆಯನ್ನು ಮಾಡಲಾಗಿದೆ. ಈ ವೇಳೆ ನೀರಿನ ಗುಣಮಟ್ಟ ಮಾನದಂಡದ ಮಿತಿಯೊಳಗಿತ್ತು ಎಂದು ವರದಿ ಉಲ್ಲೇಖಿಸಿದೆ.
