ಗುಬ್ಬಿ ಪಟ್ಟಣದ ಕ್ಷೇತ್ರಪಾಲಕ ಗುಬ್ಬಿಯಪ್ಪ ಎಂದೇ ಖ್ಯಾತಿ ಪಡೆದ ಗೋಸಲ ಶ್ರೀ ಚನ್ನಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ಜರುಗಿದ ರಥೋತ್ಸವಕ್ಕೆ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಸಾವಿರಾರು ಭಕ್ತರು ಸಾಕ್ಷಿಯಾದರು.
ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ಕೈಂಕರ್ಯ ನಡೆದು ಮಧ್ಯಾಹ್ನ 1.45 ಕ್ಕೆ ಸರಿಯಾಗಿ ರಥೋತ್ಸವಕ್ಕೆ ಸ್ವಾಮಿಯನ್ನು ಪಲ್ಲಕ್ಕಿ ಮೆರವಣಿಗೆ ಮೂಲಕ ಕರೆತಂದು ರಥೋತ್ಸವದಲ್ಲಿ ಪ್ರತಿಷ್ಠಾಪಿಸಿ ಬೃಹತ್ ಕಲ್ಲಿನ ತೇರು ಸಾವಿರಾರು ಭಕ್ತರು ಎಳೆದರು. ಹರಕೆ ಹೊತ್ತ ಭಕ್ತರು ದವನ ಸಿಲುಕಿಸಿದ ಬಾಳೆಹಣ್ಣು ಎಸೆದು ತಮ್ಮ ಹರಕೆ ತೀರಿಸುವ ಕೆಲಸ ಮಾಡಿದರು.

ನವ ದಂಪತಿಗಳು ಆಗಮಿಸಿ ಬಾಳೆಹಣ್ಣು ಎಸೆದು ಹರಕೆ ಕಟ್ಟಿಕೊಳ್ಳುವ ಪದ್ಧತಿ ಸಹ ನಡೆಯುತ್ತದೆ. ಬಿರು ಬಿಸಿಲಿನ ಝಳಕ್ಕೆ ಬಳಲಿದ ಭಕ್ತರಿಗೆ ಹಲವು ಸಂಘ ಸಂಸ್ಥೆಗಳು ಪಾನಕ, ಮಜ್ಜಿಗೆ, ಕೋಸಂಬರಿ ಹಾಗೂ ಉಪಹಾರ ಪ್ರಸಾದ ನೀಡಿ ಬಾಯಾರಿಕೆ ನೀಗಿಸಿದರು. ಕೆಲ ಭಕ್ತರು ಕೆಎಂಎಫ್ ನಂದಿನಿ ಮಸಾಲಾ ಮಜ್ಜಿಗೆ ಹಾಗೂ ನೀರಿನ ಬಾಟಲ್ ಹಂಚಿದರು.

ಜಾತ್ರೆಯಲ್ಲಿ ನಿರಂತರ ದಾಸೋಹ ವ್ಯವಸ್ಥೆ ಮಾಡಿದ ದಾಸೋಹ ಸಮಿತಿ ರಥೋತ್ಸವ ನಡೆದ ತಕ್ಷಣದಿಂದ ನಿರಂತರ ರಾತ್ರಿಯವರೆಗೆ ದಾಸೋಹ ವ್ಯವಸ್ಥೆ ಕಲ್ಪಿಸಿದ್ದರು. ಸಾವಿರಾರು ಭಕ್ತರು ದಾನವಾಗಿ ನೀಡಿದ ದವನ ಧಾನ್ಯ, ತರಕಾರಿ ಇನ್ನಿತರ ದಿನಸಿಗಳಿಂದ ದಾಸೋಹ ಬ್ರೇಕ್ ಇಲ್ಲದೆ ಸಾಗಿತ್ತು. ಹಲವು ಮಠಾಧೀಶರು, ಚುನಾಯಿತ ಪ್ರತಿನಿಧಿಗಳು ರಥೋತ್ಸವಕ್ಕೆ ಸಾಕ್ಷಿಯಾದರು.
ಬಿಸಿಲಲ್ಲಿ ಬದುಕು ಬವಣೆ : ತುತ್ತು ಚೀಲಕ್ಕೆ ಹಗ್ಗದ ಮೇಲೆ ಸರ್ಕಸ್.

ಜಾತ್ರೆಗೆ ಮೆರುಗು ತುಂಬುವ ಅಂಗಡಿ ಮುಂಗಟ್ಟು ಸಾಲು ಸಾಲಾಗಿದ್ದರೂ ದೇವಾಲಯದ ದಾಸೋಹ ನಿಲಯದ ಸಮೀಪ ಬೀದಿ ಬದಿ ಬಿಸಿಲು ಲೆಕ್ಕಿಸದೆ ಹಗ್ಗದ ಮೇಲೆ ಓಡಾಟ, ಡ್ಯಾನ್ಸ್ ಮಾಡುತ್ತಿದ್ದ ಪುಟ್ಟ ಬಾಲಕಿಯ ಸರ್ಕಸ್ ಅಲ್ಲಿದ್ದ ಭಕ್ತರ ಸೆಳೆಯಿತು. ಅನ್ನದ ಪ್ರಸಾದಕ್ಕೆ ಭಕ್ತರು ತೆರತ್ತಿದ್ದರು. ಆದರೆ ಬಾಲಕಿ ಭಕ್ತರು ನೀಡುವ ಹಣದ ನೆರೆವು ನಮ್ಮ ಅನ್ನ ಎಂದು ಹೇಳುವ ರೀತಿಯಲ್ಲಿ ಬಾಲಕಿಯ ಸರ್ಕಸ್ ಗೋಚರಿಸಿತು. ಈ ಜೊತೆಗೆ ಮಕ್ಕಳ ಆಟಿಕೆಗಳು, ಬಾಳೆಹಣ್ಣು ದವನ ಮಾರಾಟ, ಕಲ್ಲಂಗಡಿ ಹಣ್ಣು, ಐಸ್ ಕ್ರೀಂ ಮಾರಾಟ ಕೂಡಾ ನಿರಂತರ ಸಾಗಿತು.
ಜನ ಜಾತ್ರೆಯಲ್ಲಿ ಕಳ್ಳರ ಕೈಚಳಕ.
ಜಾತ್ರೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಿದಂತೆ ಸಂತಸ ಪಡುವ ಕಳ್ಳರು ಜನ ಜಂಗುಳಿ ಮಧ್ಯೆ ತಮ್ಮ ಕೈ ಚಳಕ ತೋರುತ್ತಾರೆ. ಅಂದಾಜು 20 ಕ್ಕೂ ಅಧಿಕ ಮೊಬೈಲ್ ಕಳವು ಪ್ರಕರಣ ರಥೋತ್ಸವ ಮುಗಿಯುವ ವೇಳೆಗೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ಸಂತ್ರಸ್ತ ಭಕ್ತರು ಸರದಿಯಲ್ಲಿ ನಿಂತಿದ್ದರು. ಮತ್ತೇ ಕೆಲವರು ಜಾತ್ರೆಯಲ್ಲಿ ಸಾಮಾನ್ಯ ಎಂದು ಹೇಳಿಕೊಂಡು ಕಡಿಮೆ ಬೆಲೆಯ ಮೊಬೈಲ್ ಎಂದು ತಮಗೆ ತಾವೇ ಸಮಾಧಾನ ಮಾಡಿಕೊಳ್ಳುವ ಘಟನೆ ಸಹ ನಡೆಯಿತು.