ಉತ್ತರ ಪ್ರದೇಶದ ಕುಂದಾ ಶಾಸಕ ರಘುರಾಜ್ ಪ್ರತಾಪ್ ಸಿಂಗ್ ಅಲಿಯಾಸ್ ರಾಜಾ ಭಯ್ಯಾ ಅವರ ಮೇಲೆ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಪತ್ನಿ ಭನ್ವಿ ಸಿಂಗ್ ನೀಡಿದ ದೂರಿನ ಮೇರೆಗೆ ಕೌಟುಂಬಿಕ ದೌರ್ಜನ್ಯದ ಆರೋಪ ಹೊರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಮಾರ್ಚ್ 7ರಂದು ದೆಹಲಿಯ ಸಫ್‌ದರ್ಜಂಗ್ ಎನ್ಕ್ಲೇವ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತನ್ನ ಮೇಲೆ ಹಲವು ವರ್ಷಗಳಿಂದ ದೈಹಿಕ ಮತ್ತು ಮಾನಸಿಕ ಕಿರುಕುಳ ಎಸಗಿದ್ದಾರೆ ಎಂದು ಪತ್ನಿ ಭನ್ವಿ ಸಿಂಗ್ ದೂರಿನಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಉತ್ತರ ಪ್ರದೇಶ | ಪತ್ರಕರ್ತನಿಗೆ ಗುಂಡಿಕ್ಕಿ ಹತ್ಯೆ; ಆರೋಪಿಗಳು ಪರಾರಿ
ಪೊಲೀಸರ ಪ್ರಕಾರ, ದಂಪತಿಗಳು ಹಲವು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಇನ್ನು ಪತ್ನಿ ಭನ್ವಿ ಸಿಂಗ್ ತನ್ನ ಅತ್ತೆ ಸೇರಿದಂತೆ ಹಲವು ಮಂದಿಯ ಮೇಲೆ ಕಿರುಕುಳದ ಆರೋಪ ಹೊರಿಸಿದ್ದಾರೆ.
ತನ್ನ ವಿವಾಹ ಜೀವನವನ್ನು ಉಳಿಸುವ ಸಲುವಾಗಿ ಆರಂಭದಲ್ಲಿ ಎಲ್ಲವನ್ನು ಸಹಿಸಿಕೊಂಡೆ. ಆದರೆ ದೌರ್ಜನ್ಯ ಮುಂದುವರಿದಂತೆ ಸಹಿಸಲಾಗದೆ ದೂರು ನೀಡಲು ನಿರ್ಧರಿಸಿದೆ ಎಂದು ಭನ್ವಿ ಸಿಂಗ್ ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಎಫ್ಐಆರ್ ದಾಖಲಿಸಲಾಗಿದೆ ಮತ್ತು ಈ ವಿಷಯದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
