ಬಬ್ಬೂರ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರೂಢಿಗತ ರಸ್ತೆಯನ್ನು ಕಳೆದ ಮೂರು ವರ್ಷಗಳಿಂದ ತಡೆ ಹಿಡಿದಿದ್ದು, ಜಿಲ್ಲಾಧಿಕಾರಿ ಆದೇಶದಂತೆ ರಸ್ತೆ ತೆರವು ಮಾಡಬೇಕು ಎಂದು ಆಗ್ರಹಿಸಿ ನಾಗರಿಕ ಹಿತರಕ್ಷಣಾ ಸಮಿತಿ ಮತ್ತು ಉಪ್ಪಾರ ಸಂಘ ಆಗ್ರಹಿಸಿದೆ.
ಈ ಸಂಬಂಧ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಹಶೀಲ್ದಾರ್ ಮತ್ತು ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಿ, ಪ್ರತಿಭಟನೆ ನಡೆಸಿದರು.
“ಹಿರಿಯೂರು ನಗರ, ವೇದಾವತಿ ನಗರದ ಆಂಜನೇಯ ಸ್ವಾಮಿ ದೇವಸ್ಥಾನದಿಂದ 3ನೇ ವಾರ್ಡ್, ಚಂದ್ರಾ ಲೇಔಟ್, ಪಾಂಡುರಂಗಪ್ಪ ಲೇ ಔಟ್, ಶಿವಶಂಕರಪ್ಪ ಲೇ ಔಟ್ ಮೂಲಕ ಬಬ್ಬೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸರ್ವೆ ನಂ. 39 ಮತ್ತು 40ರ ನಡುವಿನ ರಸ್ತೆಯನ್ನು ತಡೆಹಿಡಿಯಲಾಗಿದೆ” ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
“ರಸ್ತೆ ಅಳತೆ ಮಾಡಿಸಿ ಗಡಿ ಗುರುತು ಮಾಡುವಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ರಸ್ತೆ ಬಂದ್ ಮಾಡಲಾಗಿದೆ. ಈವರೆಗೆ ಅಧಿಕಾರಿಗಳು ಅನೇಕ ಬಾರಿ ಸ್ಥಳಕ್ಕೆ ಭೇಟಿ ನೀಡಿದ್ದರೂ ರಸ್ತೆ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ. ಈ ಭಾಗದ ಜನ ಜಾನುವಾರುಗಳು, ಕೂಲಿ ಕಾರ್ಮಿಕರು, ಸರ್ಕಾರಿ ಕಚೇರಿಗೆ ತೆರಳುವ ನೌಕರರು, ಅಂಗವಿಕಲರು, ವೃದ್ಧರು, ಮಹಿಳೆಯರು ಓಡಾಡಲು ಸಮಸ್ಯೆ ಉಂಟಾಗಿದೆ” ಎಂದು ವಿವರಿಸಿದ್ದಾರೆ.
“ಯಾವುದೇ ದಿಕ್ಕಿನಿಂದಲೂ ಪರ್ಯಾಯವಾದ ಸಮರ್ಪಕ ರಸ್ತೆ ಇಲ್ಲ. ಮಳೆಗಾಲದಲ್ಲಿ ಇಲ್ಲಿನ ನಿವಾಸಿಗಳು ಕೆಸರುಗದ್ದೆ, ಕೊಚ್ಚೆ ಗುಂಡಿಗಳಲ್ಲಿ ಸುತ್ತಿ ಹೋಗಬೇಕಾಗಿದೆ. ಇದರಿಂದಾಗಿ ಮುಖ್ಯ ರಸ್ತೆ ತಲುಪಲು ಕೇವಲ ಅರ್ಧ ಕಿ.ಮೀ ಇರುವ ರಸ್ತೆಯ ಬದಲಿಗೆ 2 ಕಿ.ಮೀ ನಡೆಯಬೇಕಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ದಾರಿಗೆ ಅಡ್ಡಿಪಡಿಸಿರುವ ಸ್ಥಳದಲ್ಲಿ ಕೊಳಚೆ ನೀರು ನಿಂತು ಹಂದಿ ಮತ್ತು ಸೊಳ್ಳೆಗಳ ಆಶ್ರಯ ತಾಣವಾಗಿ ಸಾಂಕ್ರಾಮಿಕ ರೋಗದ ಭೀತಿ ಉಂಟಾಗಿದೆ. ರಾತ್ರಿ ಸಮಯದಲ್ಲಿ ಗರ್ಭಿಣಿ, ಬಾಣಂತಿ, ಮಕ್ಕಳು, ವೃದ್ಧರನ್ನು ತುರ್ತು ಚಿಕಿತ್ಸೆಗೆ ಕರೆದೊಯ್ಯುವ ಸಂದರ್ಭ ಎದುರಾದರೆ ಆಟೋರಿಕ್ಷಾ, ಆಂಬುಲೆನ್ಸ್ ಕೂಡಾ ಮನೆ ಹತ್ತಿರ ಬರಲು ಸಾಧ್ಯವಾಗುವುದಿಲ್ಲ” ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
“ಈ ಭಾಗದಲ್ಲಿ ಮಾಜಿ ಸೈನಿಕರು, ಹಾಲಿ ಸೈನಿಕರು, ಪೊಲೀಸ್, ಅರಣ್ಯ, ಆರೋಗ್ಯ, ಶಿಕ್ಷಣ, ಬ್ಯಾಂಕಿಂಗ್, ಬೆಸ್ಕಾಂ ನೌಕರು ವಾಸವಿದ್ದಾರೆ. ಕೂಡಲೇ ಜಿಲ್ಲಾಧಿಕಾರಿ ಮಧ್ಯ ಪ್ರವೇಶ ಮಾಡಿ ರಸ್ತೆ ತೆರವು ಮಾಡಿಸಿಕೊಡಬೇಕು” ಎಂದು ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಸಂತೋಷ ರಾಥೋಡ್ ಒತ್ತಾಯ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉಡುಪಿ | ಕಾಂಪೌಂಡ್ ಕುಸಿದು ಆಟೋ, ಬೈಕ್‌ಗಳಿಗೆ ಹಾನಿ
ಪ್ರತಿಭಟನೆಯಲ್ಲಿ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಸಂತೋಷ ರಾಥೋಡ್, ಕಾರ್ಯದರ್ಶಿ ಸಿ ಜಿ ಗೌಡ, ಗೌರವಾಧ್ಯಕ್ಷ ಎಸ್ ವಿ ರಂಗನಾಥ್, ಉಪ್ಪಾರ ಸಂಘದ ಅಧ್ಯಕ್ಷ ಆಲೂರು ರಾಮಣ್ಣ, ಸ್ಥಳೀಯರು ರಂಗಸ್ವಾಮಿ, ಶ್ರೀದೇವಿ ಸ್ಥೋರ್ ತಿಪ್ಪೇಸ್ವಾಮಿ, ಐಟಿಸಿ ಜ್ಞಾನೇಶ್, ಷಫಿಉಲ್ಲಾ, ಅಶ್ವಥ್ ನಾರಾಯಣ, ರಮೇಶ್, ತಿಪ್ಪೇಸ್ವಾಮಿ, ಗೋವರ್ಧನ್ ಸನಾವುಲ್ಲಾ, ಶ್ರೀನಿವಾಸ್, ರಾಘವೇಂದ್ರ, ಮಧು, ಜಾಫರ್, ಜಕ್ತರ್ ಸಿಂಗ್ ಹಾಗೂ ಇತರರು ಇದ್ದರು.