ರಂಜಾನ್ ಹಬ್ಬದ ಪ್ರಯುಕ್ತ ರಾಷ್ಟ್ರೀಯ ಬಸವ ದಳದ ವತಿಯಿಂದ ಸೌಹಾರ್ದ ಇಫ್ತಾರ್ ಕೂಟ ಏರ್ಪಡಿಸಲಾಯಿತು.
ಬೀದರ್ ನಗರದ ಬಸವ ಮಂಟಪದ ಹತ್ತಿರದ ರಾಷ್ಟ್ರೀಯ ಬಸವದಳದ ಜಿಲ್ಲಾ ಉಪಾಧ್ಯಕ್ಷ ಶರಣ ಶಿವಶರಣಪ್ಪ ಪಾಟೀಲ ಅವರ ಮನೆ ಮುಂಭಾಗದಲ್ಲಿ ನಡೆಯಿತು.
ಬೆಂಗಳೂರು ಬಸವ ಗಂಗೋತ್ರಿಯ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ʼಪ್ರತಿ ವರ್ಷದಂತೆ ರಂಜಾನ್ ಸಂದರ್ಭದಲ್ಲಿ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟ ಏರ್ಪಡಿಸಲಾಗಿದೆ’ ಎಂದರು.

‘ಭಾರತ ಜಾತ್ಯಾತೀತ ರಾಷ್ಟ್ರ. ಸಂವಿಧಾನ ಪ್ರಕಾರ ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ ಸೇರಿದಂತೆ ಎಲ್ಲ ಧರ್ಮೀಯರು ಸಮಾನವಾಗಿ ಬದುಕಬೇಕು. ಮುಸ್ಲಿಂ ಬಾಂಧವರು ಆಚರಿಸುತ್ತಿರುವ ರಂಜಾನ್ ಮಾಸದ ಹಬ್ಬಕ್ಕೆ ನಾವೆಲ್ಲರೂ ಶುಭ ಹಾರೈಸಿ, ಸೌಹಾರ್ದತೆ ಸಾರುತ್ತೇವೆʼ ಎಂದರು.
ರಾಷ್ಟ್ರೀಯ ಬಸವ ದಳದ ಪ್ರಮುಖರಾದ ಶಿವರಾಜ ಪಾಟೀಲ ಅತಿವಾಳ, ಶಿವಶರಣಪ್ಪ ಪಾಟೀಲ, ಗಣಪತಿ ಬಿರಾದಾರ, ಶ್ರೀನಾಥ ಕೋರೆ, ರವಿಕಾಂತ ಬಿರಾದಾರ, ವಿಶ್ವನಾಥ ಪಾಟೀಲ, ಮಲ್ಲಿಕಾರ್ಜುನ ಶಹಾಪುರ, ಭರತ್ ಪಾಟೀಲ, ಭೀಮರಾವ ಪೊಲೀಸ್ ಪಾಟೀಲ ಮತ್ತು ಮುಸ್ಲಿಂ ಸಮಾಜ ಬಾಂಧವರು ಪಾಲ್ಗೊಂಡು ಹಣ್ಣು-ಹಂಪಲು, ಉಪಹಾರ ಸೇವಿಸಿದರು.