ಕೆನಡಾದ ಕೇಂದ್ರೀಯ ಬ್ಯಾಂಕಿನ ಮಾಜಿ ಗವರ್ನರ್ ಮಾರ್ಕ್ ಕಾರ್ನಿ ಅವರನ್ನು ಪ್ರಧಾನಿ ಹುದ್ದೆಗೆ ಭಾನುವಾರ(ಮಾ.09) ಆಡಳಿತಾರೂಢ ಲಿಬರಲ್ ಪಕ್ಷ ಆಯ್ಕೆ ಮಾಡಿದೆ. ಹಾಲಿ ಪ್ರಧಾನಿ ಜಸ್ಟಿನ್ ಟ್ರೂಡೊ ಅವರ ಸ್ಥಾನಕ್ಕೆ ಕಾರ್ನಿ ಅವರನ್ನು ಆಯ್ಕೆ ಮಾಡಲಾಗಿದೆ.
ಏಪ್ರಿಲ್ 2ರಿಂದ ದೇಶದ ಆರ್ಥಿಕತೆಯ ಮೇಲೆ ಹೇರಲು ಉದ್ದೇಶಿಸಿರುವ ಸುಂಕದ ಆತಂಕದ ಹಿನ್ನೆಲೆಯಲ್ಲಿ ಅಮೆರಿಕ ಜತೆ ಸಂಘರ್ಷ ಏರ್ಪಟ್ಟಿರುವ ನಡುವೆಯೇ ಈ ಆಯ್ಕೆ ನಡೆದಿದೆ.
ಕಾರ್ನಿ ಬ್ಯಾಂಕ್ ಆಫ್ ಕೆನಡಾದ ಮುಖ್ಯಸ್ಥರಾಗಿದ್ದ ಅವಧಿಯಲ್ಲಿ ಕಠಿಣ ಆರ್ಥಿಕ ಸಂಘರ್ಷವನ್ನು ಸಮರ್ಥವಾಗಿ ನಿಭಾಯಿಸಿದ್ದರು.ಬಳಿಕ 2013ರಲ್ಲಿ ಬ್ಯಾಂಕ್ ಆಫ್ ಇಂಗ್ಲೆಂಡ್ ಗೆ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು. ಇತರ ಹಲವು ದೇಶಗಳಿಗೆ ಹೋಲಿಸಿದರೆ 2008ರ ಆರ್ಥಿಕ ಸಂಕಷ್ಟದಿಂದ ಶೀಘ್ರವಾಗಿ ಕೆನಡಾ ಹೊರಬಂದ ಹಿನ್ನೆಲೆಯಲ್ಲಿ ದೇಶದ ಪ್ರಜೆಯಲ್ಲದ ಕಾರ್ನಿ ಅವರ ನೇಮಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಹಿಳಾ ದಿನ ಕೇವಲ ಆಚರಣೆ ಮಾತ್ರವಲ್ಲ ಹಿರಿಮೆ
ಕಳೆದ ವಾರ ಪ್ರಚಾರ ರ್‍ಯಾಲಿಯಲ್ಲಿ ಮಾತನಾಡಿದ್ದ ಕಾರ್ನಿ, ಸುಂಕದ ಬೆದರಿಕೆಯನ್ನು “ನಮ್ಮ ಜೀವಿತಾವಧಿಯ ಅತ್ಯಂತ ಗಂಭೀರ ಸಂಕಷ್ಟ” ಎಂದು ಬಣ್ಣಿಸಿದ್ದರು.”ನಾವು ಏನು ನಿರ್ಮಿಸಲು ಹೊರಟಿದ್ದೇವೆಯೋ ಅದರ ವಿರುದ್ಧ ಟ್ರಂಪ್ ದಾಳಿ ನಡೆಸುತ್ತಿದ್ದಾರೆ. ನಮ್ಮ ಮಾರಾಟದ ಮೇಲೆ, ನಮ್ಮ ಜೀವನಾಧಾರದ ಮೇಲೆ ಟ್ರಂಪ್ ದಾಳಿ ಮಾಡುತ್ತಿದ್ದಾರೆ.ನಾವು ನಮ್ಮ ಜೀವಿತಾವಧಿಯ ಅತ್ಯಂತ ಕಠಿಣ ಸಂಕಷ್ಟವನ್ನು ಎದುರಿಸುತ್ತಿದ್ದೇವೆ” ಎಂದು ಹೇಳಿದ್ದರು.
ಟ್ರಂಪ್ ವಿಧಿಸಿರುವ ಸುಂಕಕ್ಕೆ ಪ್ರತಿಯಾಗಿ ಕೆನಡಾ ಈಗಾಗಲೇ ಸುಂಕ ವಿಧಿಸಿದ್ದು, ವಿಶ್ವ ವ್ಯಾಪಾರ ಸಂಸ್ಥೆಯ ಬಳಿಯೂ ದೂರು ದಾಖಲಿಸಿದೆ. ಕಾರ್ನಿ ಅವರು ಸಂಸತ್ತಿನಲ್ಲಿ ಹಾಗೂ ಚುನಾಯಿತ ಸಂಸ್ಥೆಗಳಲ್ಲಿ ಯಾವುದೇ ಅನುಭವವನ್ನೂ ಹೊಂದಿಲ್ಲ.
