- ಸಮಾಜ ಕಲ್ಯಾಣ ಸಚಿವರ ವಿರುದ್ಧ ಅಸಮಾಧಾನ ಹೊರಹಾಕಿದ ಸಂಸದ
- ನನಗೀಗ ರಾಜಕೀಯ ರೆಸ್ಟ್ ಬೇಕಿದೆ ಎಂದ ಬೆಂಗಳೂರು ಗ್ರಾಮಾಂತರ ಸಂಸದ
ಮುಖ್ಯಮಂತ್ರಿ ಅಧಿಕಾರ ಅವಧಿಯ ಬಗ್ಗೆ ಹೇಳಿಕೆ ನೀಡಿದ್ದ ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ ವಿರುದ್ಧ ಸಂಸದ ಡಿ ಕೆ ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಮಹದೇವಪ್ಪ ನೀಡಿದ್ದ ಸಿಎಂ ಅಧಿಕಾರಾವಧಿಯ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಸುರೇಶ್, “ಮುಖ್ಯಮಂತ್ರಿಯ ಅಧಿಕಾರ ಹಂಚಿಕೆ ಬಗ್ಗೆ ನನಗೆ ಗೊತ್ತಿಲ್ಲ. ಸಿಎಂ ಸಿದ್ದರಾಮಯ್ಯ ಅವರನ್ನೇ ಕೇಳಿ” ಎಂದಿದ್ದಾರೆ.
ಜೊತೆಗೆ, “ಸಿದ್ದರಾಮಯ್ಯ ಅವರ ಆಪ್ತ ಸಚಿವ ಮಹದೇವಪ್ಪ ಹಿರಿಯರಿದ್ದಾರೆ. ಮಹಾದೇವಪ್ಪ ಪ್ರಬುದ್ಧ ನಾಯಕರು. ಆದರೆ ಕೆಲಸ ಮಾಡುವ ಬದಲಿಗೆ ಬೇರೆಯದೇ ಆಸಕ್ತಿ ಮಹದೇವಪ್ಪರಿಗೆ ಇದ್ದ ಹಾಗಿದೆ. ಹೀಗಾಗಿ ಅವರು ಈ ರೀತಿ ಮಾತನಾಡುತ್ತಿದ್ದಾರೆ” ಎಂದು ಲೇವಡಿ ಮಾಡಿದರು.
“ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಸಾಮೂಹಿಕ ನಾಯಕರ ಸಹಕಾರ ಇದೆ. ನನಗೆ ರಾಜಕೀಯ ವಿಶ್ರಾಂತಿ ಬೇಕಿದೆ. ನನ್ನಂತಹವರಿಗೆ ರಾಜಕೀಯ ಸರಿ ಬರುವುದಿಲ್ಲ. ರಾಜಕೀಯ ಹೊರಗೆ, ಒಳಗೆ ಸರಿ ಇಲ್ಲ. ಜನರ ಸೇವೆ ಮಾಡಲು ಸಾಕಷ್ಟು ದಾರಿ ಇದೆ. ನಾನು ನನ್ನ ಕ್ಷೇತ್ರದ ಜನರಿಗೆ ತಿಳಿಸಿದ್ದೇನೆ. ಪಕ್ಷದಲ್ಲಿ ನನ್ನ ಸೇವೆ ಬಗ್ಗೆ ನೀವು ಹೇಳುವ ನಾಯಕರನ್ನು ಕೇಳಿಕೊಳ್ಳಿ” ಎಂದು ಸುರೇಶ್ ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ?:ಕ್ಷೇತ್ರಕ್ಕೆ ಹೆಚ್ಚು ಸಮಯ ಕೊಡದ ಕಾರಣ ಕಳೆದ ಬಾರಿ ಸೋತಿದ್ದೆ: ಸಚಿವ ಎಚ್ ಸಿ ಮಹದೇವಪ್ಪ
ಮೈಸೂರಿನಲ್ಲಿ ಸುದ್ದಿಗೋಷ್ಠಿ ವೇಳೆ ಸಚಿವ ಮಹದೇವಪ್ಪ, “ಮುಂದಿನ ಐದು ವರ್ಷದ ಅವಧಿಗೂ ಸಿದ್ದರಾಮಯ್ಯನವರೇ ಸಿಎಂ” ಎಂದು ಹೇಳಿದ್ದರು. ಈ ವಿಚಾರವೀಗ ಡಿ ಕೆ ಶಿವಕುಮಾರ್ ಸಹೋದರ ಸುರೇಶ್ ಅವರಲ್ಲಿ ದ್ವೇಷದ ಕಿಡಿ ಹೊತ್ತಿಸಿದೆ.
ಇದಕ್ಕೂ ಮುನ್ನ ಅಂದರೆ ಸಿಎಂ ಅಧಿಕಾರ ಹಂಚಿಕೆಯ ಕುರಿತು ಸಚಿವ ಎಂ.ಬಿ ಪಾಟೀಲ್ ಕೂಡ ಮಹದೇವಪ್ಪ ಮಾದರಿಯಲ್ಲೇ ಹೇಳಿಕೆ ನೀಡಿದ್ದರು. ಅಂದು ಆ ಹೇಳಿಕೆ ರಾಜ್ಯ ರಾಜಕಾರಣದ ಜೊತೆ ಕಾಂಗ್ರೆಸ್ ಪಕ್ಷದೊಳಗೂ ಸಂಚಲನ ಹುಟ್ಟು ಹಾಕಿತ್ತು.