ಡಿಜಿಟಲ್ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿದ ಹಿನ್ನೆಲೆಯಲ್ಲಿ ಬಿಎಂಟಿಸಿ ಹೆಗಲಿಗೆ ಎಸ್‌ಟಿಆರ್‌ಟಿಯುವಿನಿಂದ ‘ಎಕ್ಸಲೆನ್ಸ್ ಪ್ರಶಸ್ತಿ’ ಲಭಿಸಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಆಸೋಸಿಯೇಷನ್ ಆಫ್ ಸ್ಟೇಟ್ ರೋಡ್ ಟ್ರಾನ್ಸ್ಪೋರ್ಟ್ ಅಂಡರ್ಟೇಕಿಂಗ್ಸ್ (ASRTU) ಮೂಲಕ ಪ್ರದಾನಿಸಲಾದ ಪ್ರಖ್ಯಾತ ರಾಷ್ಟ್ರೀಯ ಪಬ್ಲಿಕ್ ಬಸ್ ಟ್ರಾನ್ಸ್ಪೋರ್ಟ್ ಎಕ್ಸಲೆನ್ಸ್ ಪ್ರಶಸ್ತಿಯನ್ನು ಡಿಜಿಟಲ್ ಪ್ರಾಕ್ಟಿಸಸ್ ಅಡಿಯಲ್ಲಿ ಹೊಸ ಉಪಕ್ರಮಗಳ ವಿಭಾಗದಲ್ಲಿ ಗೆದ್ದಿದೆ.
ಬೆಂ.ಮ.ಸಾ.ಸಂಸ್ಥೆಯ ಮೆಟ್ರೋ ಫೀಡರ್ ಕ್ಯೂ ಆರ್ ಕೋಡ್ ಸೇವೆಗಳನ್ನು ಗುರುತಿಸಿ ಈ ಪ್ರಶಸ್ತಿ ಲಭಿಸಿದೆ. ಪ್ರಯಾಣಿಕರ ಅನುಕೂಲಕ್ಕೆ ಕ್ಯೂ ಆರ್ ಕೋಡ್ ಸೇವೆಯನ್ನು ತೊಡಗಿಸಿಕೊಂಡು, ಸಾರ್ವಜನಿಕ ಸಾರಿಗೆಯನ್ನು ಆಧುನಿಕಗೊಳಿಸಲು ಮತ್ತು ಡಿಜಿಟಲ್ ಪರಿಹಾರಗಳ ಮೂಲಕ ಸೇವಾ ಸರಬರಾಜು ಮಾಡುವ ಬದ್ಧತೆಯನ್ನು ಗುರುತಿಸಿ ಈ ಪ್ರಶಸ್ತಿ ಲಭಿಸಿದೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟದ ವತಿಯಿಂದ ನವದೆಹಲಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಐಪಿಎಸ್, ಅಧಿಕಾರಿ ಡಾ.ಕಿರಣ್ ಬೇಡಿ ಪ್ರಶಸ್ತಿ ಪ್ರದಾನ ಮಾಡಿದರು. ಬೆಂಮಸಾಸಂಸ್ಥೆಯ ಗಣಕ ಶಾಖೆಯ ಸಹಾಯಕ ಸಂಚಾರ ಅಧೀಕ್ಷಕರಾದ ಶ್ರೀಮತಿ ಯಶೋಧ.ಬಿ.ಎಸ್ ನಿಗಮದ ಪರವಾಗಿ ಪ್ರಶಸ್ತಿಗಳನ್ನು ಸ್ವೀಕರಿಸಿದರು.
ಇದೇ ವೇಳೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಬೆಂಮಸಾಸಂಸ್ಥೆಯ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಮತಿ ಸವಿತಾ, (ಬಿಲ್ಲೆ ಸಂಖ್ಯೆ 8617), ಶ್ರೀಮತಿ ಸಿ.ಎನ್.ಕುಸುಮ(ಬಿಲ್ಲೆ ಸಂಖ್ಯೆ 8625) ಮತ್ತು ಶ್ರೀಮತಿ ಮಂಜುಳಾ, (ಬಿಲ್ಲೆ ಸಂಖ್ಯೆ 9232) ಇವರುಗಳಿಗೆ ಸಂಸ್ಥೆಯಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ ಮತ್ತು ಎಎಸ್ಆರ್‌ಟಿಯು ನಿರ್ವಾಹಕ ನಿರ್ದೇಶಕ ಸೂರ್ಯಕಿರಣ್ ಉಪಸ್ಥಿತರಿದ್ದರು.

ದೇಶದ 62 ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟದ (ASRTU) ಅಡಿಯಲ್ಲಿ ಸದಸ್ಯತ್ವವನ್ನು ಹೊಂದಿವೆ. ಒಕ್ಕೂಟವು 13-08-1965 ರಂದು ಅಸ್ತಿತ್ವಕ್ಕೆ ಬಂದಿತ್ತು. ಇದು ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ನಿರ್ದೇಶನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಬೆಂ.ಮ.ಸಾ.ಸಂಸ್ಥೆಯ ಮೆಟ್ರೋ ಫೀಡರ್ QR ಕೋಡ್ ಸೇವೆಗಳು ಪ್ರಯಾಣಿಕರಿಗೆ ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಬಸ್ ಸೇವೆಗಳನ್ನು ಉಪಯೋಗಿಸಲು ಅವಕಾಶ ನೀಡುತ್ತವೆ, ಇದು ಅವರ ಪ್ರಯಾಣವನ್ನು ಸರಳಗೊಳಿಸುತ್ತದೆ. ಟಿಕೆಟ್ ಪ್ರಕ್ರಿಯೆಯಲ್ಲಿ QR ಕೋಡ್‌ಗಳನ್ನು ಸಂಯೋಜನೆ ಮಾಡುವ ಮೂಲಕ, ಸಂಸ್ಥೆಯು ಪ್ರಯಾಣಿಕರಿಗೆ ತಮ್ಮ ಪ್ರಯಾಣಗಳನ್ನು ಡಿಜಿಟಲ್ ಆಗಿ ಪಾವತಿಸುವಲ್ಲಿ ಹೆಚ್ಚು ಅನುಕೂಲ ನೀಡಿದೆ. ಈ ನಾವೀನ್ಯತೆಯು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮತ್ತು ಪ್ರಯಾಣಿಕರಿಗೆ ತಡೆರಹಿತ, ಪರಿಣಾಮಕಾರಿ ಅನುಭವವನ್ನು ಒದಗಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವ್ಯಾಪಕ ಪ್ರಯತ್ನಗಳ ಭಾಗವಾಗಿದೆ.
