ವಿದ್ಯಾರ್ಥಿನಿಯೊಬ್ಬಳಿಗೆ ಮಾನಸಿಕ ಕಿರುಕುಳ ನೀಡಿ ಅವಳ ಸಾವಿಗೆ ಕಾರಣರಾದ ಬಾಗಲಕೋಟೆ ನಗರದ ಶಾರದಾ ಪಿಯು ಕಾಲೇಜಿನ ಉಪನ್ಯಾಸಕ ಹಾಗೂ ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಕಾಲೇಜಿನ ಪರವಾನಿಗೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಭೀಮ ಆರ್ಮಿ ಸಂಘಟನೆ ಹಾಗೂ ದಲಿತ ಸಮಾಜದ ಮುಖಂಡರು ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಬಾಗಲಕೋಟೆ ಜಿಲ್ಲೆ ಮುಧೋಳ ನಗರದ ಪ್ರತಿಭಾವಂತ ವಿದ್ಯಾರ್ಥಿನಿಯಾದ ತೇಜಸ್ವಿನಿ ಸುಂದರ ದೊಡ್ಡಮನಿಯು ಮಂಟುರ ರಸ್ತೆ ಗಾಂಧೀ ನಗರ ಹತ್ತಿರದ ಸ್ವಾಮಿ ವಿವೇಕಾನಂದ ವಿದ್ಯಾವರ್ಧಕ ಸಂಸ್ಥೆಯ ಶಾರದಾ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ಪ್ರಥಮ ವರ್ಷದಲ್ಲಿ ಓದುತ್ತಿದ್ದಳು. ವಾರ್ಷಿಕ ಪರೀಕ್ಷೆ ಮುಗಿದ ನಂತರ ಉಪನ್ಯಾಸಕರು ವಿದ್ಯಾರ್ಥಿನಿಯನ್ನು ಕಾರ್ಯಾಲಯಕ್ಕೆ ಕರೆಸಿ ಕಾಪಿ ಮಾಡಿರುವೆ, ಎರಡು ಉತ್ತರ ಪತ್ರಿಕೆಗಳು ಎಲ್ಲಿಂದ ಬಂದವು ಎಂದು ಪ್ರಶ್ನಿಸಿ, ತಾಯಿಯನ್ನು ಸಹ ಕಾಲೇಜಿಗೆ ಕರೆಸಿ ಅವರ ಮುಂದೆ ಮನಬಂದಂತೆ ಬೈದು, ತಪ್ಪು ಮಾಡಿದ್ದನ್ನು ಒಪ್ಪಿಕೋ ಎಂದು ಬೆದರಿಸಿದ್ದಾರೆ. ಆದರೆ ನಾನೇನೂ ತಪ್ಪು ಮಾಡಿಲ್ಲ ಎಂದು ಅವಳು ಹೇಳಿದ್ದಾಳೆ.
ಮುಂದುವರೆದು ಚರ್ಚೆ ವೇಳೆ ವಿದ್ಯಾರ್ಥಿನಿ ಹೆದರಿ ಕಾಲೇಜಿನಿಂದ ಓಡಿ ಹೋಗಿದ್ದಾಳೆ. ರಾತ್ರಿಯೆಲ್ಲ ಹುಡಿಕಿದರೂ ಸಿಗದಿದ್ದಾಗ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಮರುದಿನ ನಗರದ ಮಹಾರಾಣಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಈ ಸಾವಿಗೆ ಕಾಲೇಜಿನ ಉಪನ್ಯಾಸಕರು, ಆಡಳಿತ ಮಂಡಳಿಯೇ ಕಾರಣ ಎಂದು ಪಾಲಕರು ದೂರು ನೀಡಿದ್ದು ಎಫ್‌ಐಆರ್ ದಾಖಲಾಗಿದೆ. ಆದರೆ ಇಲ್ಲಿಯವರೆಗೆ ಕ್ರಮ ಕೈಗೊಳ್ಳದಿದ್ದಕ್ಕೆ ಸಂಘಟಕರು ರಸ್ತೆ ತಡೆದು, ಸಮಾಜದ ಮುಖಂಡರು ಸೇರಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರಗೆ ಮನವಿ ಪತ್ರ ಸಲ್ಲಿಸಿದರು.
ಇದನ್ನೂ ಓದಿ: ಬಾಗಲಕೋಟೆ | ಸಾರ್ವಜನಿಕ ಸೌಲಭ್ಯಕ್ಕೆ ಮೀಸಲಿಟ್ಟ ಜಾಗಗಳ ಅತಿಕ್ರಮಣ ತೆರವಿಗೆ ಕರವೇ ಮನವಿ
ಪ್ರತಿಭಟನೆಯಲ್ಲಿ ಮುಖಂಡರಾದ ಕೃಷ್ಣಾ ಮಾದರ, ಸತೀಶ ಗಾಡಿ, ಮಹೇಶ ಹುಗ್ಗಿ, ಪ್ರಕಾಶ ಮಾಂಗ, ಪರಶು ಮೇತ್ರಿ, ಆಶೋಕ ಮಾಂಗ, ಮಾನಿಂಗ ಮೇತ್ರಿ, ಮಲೆಪ್ಪ ತಳಗೇರಿ, ಯಲ್ಲಪ್ಪ ತಳಗೇರಿ, ಹಾಸೀಂ ಜಕ್ಕಲಿ, ಕಾಶಿಂ ಕೆಸರಟ್ಟಿ, ಯಾಕೂಬ ಪೂಜಾರಿ, ಸುರೇಶ ಮೇತ್ರಿ, ರೇಣುಕಾ ತಳವಾರ, ರುಕೃವ್ವ ಪೂಜಾರಿ, ಯಮನವ್ವ ಈರಗಾರ, ಮಾದೇವ ಮೀಶಿ, ಮಜ್ಜು ಅಷ್ಟೋಜಿ, ಚೇತನ ಪೂಜಾರಿ, ಸಂಜು ಮಾಂಗ, ಪುಟ್ಟು ಮೇತ್ರಿ, ಕರಣಕುಮಾರ ಮೌರ್ಯ, ಸಂಘಟಕ ಸುನೀಲ ಕಂಬೋ ಗಿ, ಲವಿತ ಮೇತ್ರಿ, ಅನೀಲ ಬರಗಿ ಸೇರಿ ಇತರರಿದ್ದರು.
