ಇತ್ತೀಚೆಗೆ ಆನ್‌ಲೈನ್ ಗೇಮಿಂಗ್‌ನ ಚಟಕ್ಕೆ ಸಿಲುಕಿ, ಕಳೆದುಕೊಂಡ ಹಣವನ್ನು ಮರಳಿ ಪಡುವ ಹಪಾಹಪಿಯಲ್ಲಿ ಬೆಂಗಳೂರಿನ ಸಾಪ್ಟ್ ವೇರ್ ಎಂಜಿನಿಯರ್ ಬರೋಬ್ಬರಿ 90 ಲಕ್ಷ ರೂಪಾಯಿಯನ್ನು ಕಳೆದುಕೊಂಡಿದ್ದಾರೆ. ತಾನು ಯಾವುದೇ ಲಾಭ ಗಳಿಸದೆ ನಿರಂತರವಾಗಿ ಹಣ ಕಳೆದುಕೊಂಡು ಸಾಲದಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಬಳಿಕ ಟೆಕ್ಕಿ ಪೊಲೀಸರ ಮೊರೆ ಹೋಗಿದ್ದಾರೆ.
ಆನ್‌ಲೈನ್ ಗೇಮಿಂಗ್ ಜಾಲ ಭಾರತದಲ್ಲಿ ವಿಸ್ತಾರವಾಗಿ ಬೆಳೆಯುತ್ತಿದೆ. ಅದೆಷ್ಟೋ ಯುವಕರು ಈ ಗೇಮಿಂಗ್ ಲೋಕದಲ್ಲಿ ಸಿಲುಕಿ, ಹಣ ಕಳೆದುಕೊಂಡು ಒದ್ದಾಡುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ರಾಜ್ಯದ ಹಲವು ಯುವಕರು, ವಿದ್ಯಾರ್ಥಿಗಳು ಆನ್‌ಲೈನ್ ಗೇಮಿಂಗ್‌ನಲ್ಲಿ ನಷ್ಟ ಹೊಂದಿ ಆತ್ಮಹತ್ಯೆಯಂತಹ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಹೆಚ್ಚಾಗಿ ವಿದ್ಯಾವಂತರು ಗೇಮಿಂಗ್ ಚಟದಲ್ಲಿ ಸಿಲುಕುತ್ತಿರುವುದು ವಿಷಾದನೀಯ.
ಇದನ್ನು ಓದಿದ್ದೀರಾ? ಆನ್‌ಲೈನ್ ಗೇಮ್ಸ್ | ತಂದೆ-ತಾಯಿ, ಸಹೋದರಿಯನ್ನು ಕೊಂದ 21 ವರ್ಷದ ಯುವಕ
ಬೆಂಗಳೂರಿನ 37 ವರ್ಷದ ಟೆಕ್ಕಿ ಕಳೆದ ಎರಡು ವರ್ಷಗಳಿಂದ ಆನ್‌ಲೈನ್ ಗೇಮಿಂಗ್ ಆ್ಯಪ್ ಒಂದರಲ್ಲಿ ಹೂಡಿಕೆ ಮಾಡಿ ಆನ್‌ಲೈನ್ ಗೇಮ್ ಆಡುತ್ತಿದ್ದು, ಈವರೆಗೆ ಬರೋಬ್ಬರಿ 90 ಲಕ್ಷ ರೂಪಾಯಿಯನ್ನು ಕಳೆದುಕೊಂಡಿದ್ದಾರೆ. ಉಳಿತಾಯ ಕಳೆದುಕೊಂಡು, ತನ್ನ ಮೇಲಿರುವ ಸಾಲದ ಹೊರೆ ಹೆಚ್ಚಾಗುತ್ತಿದ್ದಂತೆ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಟೆಕ್ಕಿ ದೂರು ದಾಖಲಿಸಿದ್ದಾರೆ.
ಸದ್ಯ ದೂರಿನ ಆಧಾರದಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಐಟಿ ಕಾಯ್ದೆ ಮತ್ತು ಬಿಎನ್‌ಎಸ್‌ನ ಸೆಕ್ಷನ್ 318 (4) ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿಂದೆಯೂ ಹೀಗೆಯೇ ಅದೆಷ್ಟೋ ಪ್ರಕರಣಗಳು ದಾಖಲಾಗಿವೆ. ಆದರೆ ಈವರೆಗೂ ಆನ್‌ಲೈನ್ ಗೇಮಿಂಗ್ ಆ್ಯಪ್‌ಗಳ ಮೋಸದ ಬಗ್ಗೆ ಆಳವಾದ ತನಿಖೆಯಾಗಿಲ್ಲ, ಯಾರ ಬಂಧನವಾಗಿಲ್ಲ, ಕ್ರಮವೂ ತೆಗೆದುಕೊಂಡಿಲ್ಲ.
ಟೆಕ್ಕಿ 2023ರ ಜೂನ್‌ನಲ್ಲಿ ತನ್ನ ಸ್ನೇಹಿತ ತಿಳಿಸಿದಂತೆ ಲಿಂಕ್ ಒಂದನ್ನು ಕ್ಲಿಕ್ ಮಾಡಿ ‘ನಮ್ಮ ಎಕ್ಸ್‌ಚೇಂಜ್’ ಎಂಬ ವೆಬ್‌ಸೈಟ್ ಮೂಲಕ ಗೇಮಿಂಗ್ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಆರಂಭದಲ್ಲಿ ಹತ್ತು ಸಾವಿರ ರೂಪಾಯಿ ಹೂಡಿಕೆ ಮಾಡಿ ಆಟವಾಡಿದ್ದು, ಇದರಿಂದ 40 ಸಾವಿರ ರೂಪಾಯಿ ಪಡೆದಿದ್ದಾರೆ. ಆ ಹಣ ಟೆಕ್ಕಿ ಖಾತೆಗೂ ಜಮೆಯಾಗಿದೆ.
ಇದನ್ನು ಓದಿದ್ದೀರಾ? ಆನ್‌ಲೈನ್ ಗೇಮಿಂಗ್ ಚಟ | 96 ಲಕ್ಷ ರೂ. ಸಾಲ ಮಾಡಿದ ವಿದ್ಯಾರ್ಥಿ; ಪತ್ರಕರ್ತನ ಮುಂದೆ ಕಣ್ಣೀರು!
ಇದರಿಂದ ಅತಿ ಉತ್ಸಾಹಕ್ಕೆ ಒಳಗಾದ ಟೆಕ್ಕಿ ಮತ್ತೆ ಹೂಡಿಕೆ ಮಾಡಿ ಆಟವಾಡಿದ್ದಾರೆ. ಆದರೆ ಹತ್ತು ಲಕ್ಷ ರೂಪಾಯಿ ನಷ್ಟವಾಗುತ್ತಿದ್ದಂತೆ ತನಗೆ ಈ ಗೇಮ್ ಪರಿಚಯಿಸಿದ ಸ್ನೇಹಿತನನ್ನು ಭೇಟಿಯಾಗಿ ತಿಳಿಸಿದ್ದಾರೆ. “ಆರಂಭದಲ್ಲಿ ನಷ್ಟವಾಗುವುದು ಸಹಜ, ಬಳಿಕ ಹೆಚ್ಚು ಲಾಭ ಪಡೆಯಬಹುದು. ಹೂಡಿಕೆ ಮಾಡಿ ಆಡು” ಎಂಬ ತನ್ನ ಸ್ನೇಹಿತನ ಮಾತು ಕೇಳಿ ಟೆಕ್ಕಿ ಹತ್ತು ಲಕ್ಷ ನಷ್ಟವನ್ನು ಸರಿದೂಗಿಸಲು 50 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಾರೆ. ಬಳಿಕ 40 ಲಕ್ಷ ರೂಪಾಯಿ ಸಾಲ ಪಡೆದು ಹೂಡಿಕೆ ಮಾಡಿ ಗೇಮ್ ಆಡಿದ್ದಾರೆ. ಹೀಗೆ ಸುಮಾರು ಎರಡು ವರ್ಷಗಳ ಕಾಲ ಗೇಮಿಂಗ್ ಚಟ ಮತ್ತು ನಷ್ಟವಾದ ಹಣವನ್ನು ಹಿಂಪಡೆಯುವ ನಿರೀಕ್ಷೆಯಲ್ಲಿ ಹೂಡಿಕೆ ಮಾಡಿ ಬೆಂಗಳೂರಿನ ಈ ಟೆಕ್ಕಿ ಬರೋಬ್ಬರಿ 90 ಲಕ್ಷ ರೂಪಾಯಿ (ಒಂದು ಕೋಟಿ ರೂಪಾಯಿಗಿಂತ ಹತ್ತು ಲಕ್ಷ ರೂ. ಕಡಿಮೆ) ಕಳೆದುಕೊಂಡಿದ್ದಾರೆ.
ಸಾಫ್ಟ್ ವೇರ್ ಎಂಜಿನಿಯರ್ 2023ರ ಜೂನ್‌ನಿಂದ ಆನ್‌ಲೈನ್ ಗೇಮಿಂಗ್ ಆ್ಯಪ್‌ನಲ್ಲಿ ಆಟವಾಡಲು ಶುರು ಮಾಡಿದ್ದು, 2025ರ ಮಾರ್ಚ್ 6ರವರೆಗೆ ಆಡಿ ತನ್ನ ಎಲ್ಲಾ ಹಣವನ್ನು ಕಳೆದುಕೊಂಡಿದ್ದಾರೆ. ಸದ್ಯ ಸಾಲದ ಹೊರೆಯಲ್ಲಿ ಮುಳುಗಿ ಸೈಬರ್ ಕ್ರೈಮ್ ಮೊರೆ ಹೋಗಿದ್ದಾರೆ.
ಇದನ್ನು ಓದಿದ್ದೀರಾ? ಹಾಸನ | ಆನ್‌ಲೈನ್ ಗೇಮಿಂಗ್; ಲಕ್ಷಾಂತರ ಹಣ ಕಳೆದುಕೊಂಡ ಯುವಕ ಅತ್ಮಹತ್ಯೆ
ಆನ್‌ಲೈನ್ ಗೇಮಿಂಗ್‌ನ ಚಟದಿಂದಾಗಿ ಯುವಕರು, ವಿದ್ಯಾರ್ಥಿಗಳು ಲಕ್ಷಾಂತರ ರೂಪಾಯಿ ಕಳೆದುಕೊಳ್ಳುವುದು ಇದು ಮೊದಲೇನಲ್ಲ. ರಾಜ್ಯದಲ್ಲಿ ಅದೆಷ್ಟೋ ಪ್ರಕರಣಗಳು ದಾಖಲಾಗಿವೆ. ಕಲಬುರಗಿಯಲ್ಲಿ 80 ಲಕ್ಷ ರೂಪಾಯಿ ಕಳೆದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡರೆ, ಬೀದರ್‌ನಲ್ಲಿ ಆನ್‌ಲೈನ್ ಜೂಜಲ್ಲಿ ಸಿಲುಕಿ 15 ಲಕ್ಷ ರೂ. ಕಳೆದುಕೊಂಡು ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಹಾಸನದಲ್ಲಿಯೂ ಇದೇ ರೀತಿಯ ಘಟನೆ ನಡೆದಿದೆ. ಇವೆಲ್ಲವೂ ಮುನ್ನಲೆಗೆ ಬಂದ ಘಟನೆಗಳಾದರೆ, ಇನ್ನೂ ಕೆಲವು ಪ್ರಕರಣಗಳು ಕುಟುಂಬಸ್ಥರ ಭಯ, ಸಮಾಜದ ಆತಂಕದಲ್ಲಿ ಮುಚ್ಚಿ ಹೋಗಿದೆ. ಮದ್ಯ, ಡ್ರಗ್ಸ್, ಮೊದಲಾದವು ಜನರಿಗೆ ಹೇಗೆ ವ್ಯಸನವಾಗುತ್ತದೆಯೋ ಹಾಗೆಯೇ ಗೇಮಿಂಗ್ ಕೂಡಾ ಒಂದು ವ್ಯಸನ. ಈ ಚಟದಿಂದ ಹೊರಬರಲು ಅದೆಷ್ಟೋ ಯುವಕರು ಇಂದಿಗೂ ಒದ್ದಾಡುತ್ತಿದ್ದಾರೆ.
ಇಂತಹ ಗೇಮಿಂಗ್ ಆ್ಯಪ್‌ಗಳಿಗೆ ಸರ್ಕಾರ ಕಡಿವಾಣ ಹಾಕುವುದು ಅತ್ಯಗತ್ಯ. ಹಾಗೆಯೇ ಪೋಷಕರು ಕೂಡಾ ತಮ್ಮ ಮಕ್ಕಳಿಗೆ ಮೊಬೈಲ್ ಕೊಡಿಸಿದರೆ ಸಾಲದು, ಮಕ್ಕಳ ಮೇಲೆ ನಿಗಾ ವಹಿಸುವುದು ಮುಖ್ಯ. ಆನ್‌ಲೈನ್ ಗೇಮಿಂಗ್‌ಗೆ ಸರ್ಕಾರ ಕಡಿವಾಣ ಹಾಕುವುದರ ಜೊತೆಗೆ ಇಂತಹ ಜಾಲಕ್ಕೆ ಸಿಲುಕುವುದರಿಂದ ನಮ್ಮನ್ನು ನಾವು ತಪ್ಪಿಸಿಕೊಳ್ಳುವ ಅಗತ್ಯವೂ ಇದೆ.
