ಸಾರ್ವಜನಿಕರಿಗೆ ಉಪಯುಕ್ತವಾಗಬೇಕಾಗಿರುವ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಪೋತ್ನಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರೇ ಇಲ್ಲದೆ ರೋಗಿಗಳು ಪರದಾಡುವಂತಾಗಿದೆ.
ಪೋತ್ನಾಳ ಗ್ರಾಮವು ಸುತ್ತಲಿನ ವಿವಿಧ ಗ್ರಾಮಗಳ ವಾಣಿಜ್ಯ ಕೇಂದ್ರವಾಗಿದೆ. ಇಲ್ಲಿ ಸುಸಜ್ಜಿತ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದೆ. ಆದರೆ, ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ರೋಗಿಗಳು ಪರದಾಡುವ ಪರಿಸ್ಥಿತಿ ಕಳೆದ ಸುಮಾರು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ.
ಗ್ರಾಮದಲ್ಲಿ ಸುಮಾರು 7000ಕ್ಕಿಂತ ಹೆಚ್ಚು ಜನಸಂಖ್ಯೆ ಇದೆ. ಸುಮಾರು 6 ಹಳ್ಳಿಗಳನ್ನು ಇತ್ತೀಚೆಗೆ ಹೊಸದಾಗಿ ಸೇರ್ಪಡೆ ಮಾಡಲಾಗಿದೆ. ಇದರಿಂದ ರೋಗಿಗಳು ಪರದಾಡಬೇಕಾಗಿದ್ದು, ಚಿಕಿತ್ಸೆಗಾಗಿ ಪರ ಊರನ್ನು ಆಶ್ರಯಿಸಬೇಕಾಗಿದೆ. ಸುಮಾರು ವರ್ಷಗಳಿಂದ ಖಾಯಂ ವೈದ್ಯರಿಲ್ಲ, ತಾತ್ಕಾಲಿಕವಾಗಿರುವ ವೈದ್ಯರು ಕೂಡಾ ಸರಿಯಾಗಿ ಬರುತ್ತಿಲ್ಲ ಹಾಗೂ ಸಿಬ್ಬಂದಿಗಳ ಕೊರತೆಯಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಈ ಬಗ್ಗೆ ಗ್ರಾಮದ ನಿವಾಸಿ ಶರಣು ಮದ್ದನಗುಡ್ಡಿ ಮಾತನಾಡಿ, “ಆಸ್ಪತ್ರೆಯಲ್ಲಿ ವಾರಕ್ಕೊಮ್ಮೆ ಇಲ್ಲದಿದ್ದರೆ ವಾರದಲ್ಲಿ 2 ಸಲ ವೈದ್ಯರು ಬರುತ್ತಾರೆ. ರಾತ್ರಿ ವೇಳೆ ಯಾವೊಬ್ಬ ವೈದ್ಯರು ಇರಲ್ಲ. ನರ್ಸ್ ಗಳೇ ನೋಡಬೇಕು ಇಲ್ಲದಿದ್ದರೆ ಜಿಲ್ಲಾಸ್ಪತ್ರೆಗೆ ತೆರಳಬೇಕು. ರಾತ್ರಿ ವೇಳೆ ತುರ್ತು ಚಿಕಿತ್ಸೆ ಸಂದರ್ಭದಲ್ಲಿ ವೈದ್ಯರಿಲ್ಲದೆ ಅನಾಹುತಗಳು ಸಂಭವಸಿವೆ. ಈ ಗ್ರಾಮಕ್ಕೆ ಸುಮಾರು ಸುತ್ತಮುತ್ತ ಎಂಟತ್ತು ಹಳ್ಳಿಯ ಜನರು ಹಾಗೂ ಸಿಂಧನೂರು ಮಾನ್ವಿ ಹೆದ್ದಾರಿಯಲ್ಲಿ ಜಂಕ್ಷನ್ ಆಗಿ ಈ ಗ್ರಾಮವು ಹೊಂದಿಕೊಂಡಿದೆ. ನಿತ್ಯ ಗ್ರಾಮದಲ್ಲಿ ನೂರಾರು ಸಂಖ್ಯೆಯಲ್ಲಿ ಆಸ್ಪತ್ರೆಗೆ ದಾಖಲಾಗುತ್ತಾರೆ ಸರಿಯಾದ ಚಿಕಿತ್ಸೆ ಇಲ್ಲದ ಕಾರಣ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಕೂಡಲೇ ಸ್ಥಳೀಯ ಆಡಳಿತ ಇತ್ತ ಗಮನಹರಿಸಬೇಕು” ಎಂದು ಹೇಳಿದರು.
ಗ್ರಾಮದ ನಿವಾಸಿ ದುರುಗಮ್ಮ ಮಾತನಾಡಿ, “ಆಸ್ಪತ್ರೆಯಲ್ಲಿ ವಾರಕ್ಕೊಮ್ಮೆ ವೈದ್ಯರು ಬರುತ್ತಾರೆ. ಏನಾದರೂ ಪ್ರಶ್ನೆ ಮಾಡಿದರೆ ʼನನಗೆ ಎರಡು ಮೂರು ಆಸ್ಪತ್ರೆಗಳುಲ್ಲಿ ಕೆಲಸ ಮಾಡಲಿಕ್ಕಿದೆ. ಈ ಕೇಂದ್ರದಲ್ಲಿ ಸಿಬ್ಬಂದಿಗಳಿಗೆ ಸಂಬಳ ಕೊಡುವುದಕ್ಕೆ ಮಾತ್ರ ಹೇಳಿದ್ದಾರೆʼ ಎಂದು ಉಡಾಫೆಯ ಉತ್ತರ ನೀಡುತ್ತಾರೆ. ರೋಗ ಉಲ್ಬಣವಾಗಿ ಪ್ರಾಣ ಕಳೆದುಕೊಂಡರೆ ಯಾರು ಹೊಣೆ. ತೀರಾ ತುರ್ತು ಪರಿಸ್ಥಿತಿ ಇದ್ದಾಗ ಪ್ರಾಥಮಿಕ ಕೇಂದ್ರಗಳು ಬಹಳ ಸಹಕಾರಿ ಅಂತಲೇ ಇಲ್ಲಿಗೆ ಬರುತ್ತೇವೆ. ಇಲ್ಲಿ ವೈದ್ಯರು ಬಂದರೂ ಹೆಸರಿಗಷ್ಟೇ ಎನ್ನುವಂತಾಗಿದೆ. ದಯವಿಟ್ಟು ಈಗಲಾದರೂ ಒಬ್ಬಿಬ್ಬರು ಖಾಯಂ ವೈದ್ಯರನ್ನು ಈ ಕೇಂದ್ರಕ್ಕೆ ನಿಯೋಜಿಸಿ ಸಾರ್ವಜನಿಕರ ಆರೋಗ್ಯ ಕಾಪಾಡಿ” ಎಂದು ಮನವಿ ಮಾಡಿದರು.
ರಾತ್ರಿ ವೇಳೆ ವೈದ್ಯರಿಲ್ಲ, ಇತ್ತ ನರ್ಸ್ ಕೂಡ ಇರಲ್ಲ. ಹೊಟ್ಟೆ ನೋವಿನಿಂದ ಬಳಲುವಾಗ ಚಿಕಿತ್ಸೆಗೆಂದು ರಾತ್ರಿ ಆಸ್ಪತ್ರೆಗೆ ಬಂದರೆ ಯಾರು ದಿಕ್ಕಿಲ್ಲದೆ ಆಸ್ಪತ್ರೆ ಬಿಕೋ ಎನ್ನುತ್ತಿತ್ತು. ಆಂಬುಲೆನ್ಸ್ ಇಲ್ಲದೆ ಪಕ್ಕದ ಬಳಗಾನೂರ ಗ್ರಾಮದ ಆಂಬುಲೆನ್ಸ್ ಮೂಲಕ ಬೇರೆ ಆಸ್ಪತ್ರೆಗೆ ತೆರಳಲಾಯಿತು. ಜೀವನ್ಮರಣ ಸ್ಥಿತಿಯಲ್ಲಿ ವೈದ್ಯರನ್ನು ನಂಬಿಕೊಂಡು ಆಸ್ಪತ್ರೆಗೆ ಬರುತ್ತಾರೆ ಆದರೆ ವೈದ್ಯರು ಇಲ್ಲದಿದ್ದರೆ ಸಾವುಗಳು ಸಂಭವಿಸುತ್ತವೆ” ಎಂದು ಬೇಸರ ವ್ಯಕ್ತಪಡಿಸಿದರು.

ವೈದ್ಯರಿಲ್ಲದ ಕಾರಣ ಹೆರಿಗೆ ಸಂದರ್ಭದಲ್ಲಿ ನರ್ಸ್ ಗಳೇ ಹೆರಿಗೆ ಮಾಡುವುದಕ್ಕೆ ಮುಂದಾಗುತ್ತಾರೆ. ಹೆಚ್ಚು ಕಡಿಮೆ ಆದರೆ ನಾವು ಹೊಣೆ ಅಲ್ಲ, ಇಲ್ಲದಿದ್ದರೆ ಜಿಲ್ಲಾಸ್ಪತ್ರೆಗೆ ಹೋಗಿ ಎಂದು ಉತ್ತರ ನೀಡುತ್ತಾರೆ. ನಡು ರಾತ್ರಿಗಳಲ್ಲಿ ಹೀಗಾದರೆ ನಮ್ಮಂತ ಬಡವರು ಎಲ್ಲಿಗೆ ಅಂತ ಹೋಗುವುದು ಎಂದು ಗ್ರಾಮಸ್ಥರು, ಆಸ್ಪತ್ರೆಗೆ ಆಗಮಿಸಿದ್ದ ರೋಗಿಗಳು ಅಳಲು ತೋಡಿಕೊಂಡರು.
ಇದನ್ನೂ ಓದಿ: ರಾಯಚೂರು | ದಲಿತ ಯುವಕನ ಮೇಲೆ ಹಲ್ಲೆ; ಆರೋಪಿಗಳ ಬಂಧನಕ್ಕೆ ಆಗ್ರಹ
ಸ್ಥಳೀಯ ಆಡಳಿತ ಈಗಲಾದರೂ ಎಚ್ಚೆತ್ತು ಸರ್ಕಾರದ ಗಮನ ಸೆಳೆದು ಪೋತ್ನಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನು ನೇಮಕ ಮಾಡಲು ಕ್ರಮವಹಿಸುತ್ತದೆಯೋ ಇಲ್ಲ ಹೀಗೆ ಸಾರ್ವಜನಿಕರ ಆರೋಗ್ಯದ ಜತೆ ಚೆಲ್ಲಾಟವಾಡುತ್ತದೆಯೋ ಕಾದು ನೋಡಬೇಕು.