ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರದಲ್ಲಿ ಇತ್ತೀಚೆಗೆ ನಡೆದ ಇಬ್ಬರು ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಮೂರನೇ ಆರೋಪಿಯನ್ನು ತಮಿಳುನಾಡಿನಲ್ಲಿ ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದು, ಆತನನ್ನು ಗಂಗಾವತಿಗೆ ಕರೆ ತಂದಿದ್ದಾರೆ.
ಗಂಗಾವತಿಯ ಸಾಯಿ ನಗರದ ನಿವಾಸಿ ಶರಣಬಸವ(30) ಬಂಧಿತ ಆರೋಪಿ. ಘಟನೆ ನಡೆದ ಮರುದಿನ ಇದೇ ಬಡಾವಣೆಯ ಮಲ್ಲೇಶ ಹಂದಿ ಹಾಗೂ ಚೇತನ್ ಸಾಯಿ ಎಂಬುವರನ್ನು ಬಂಧಿಸಲಾಗಿತ್ತು. ಶರಣಬಸವ ಗಾರೆಕೆಲಸ ಮಾಡುತ್ತಾನೆ. ಈ ಮೂವರೂ ಆರೋಪಿಗಳು ಒಂದೇ ಪ್ರದೇಶದವರಾಗಿರುವುದರಿಂದ ಸ್ನೇಹಿತರು. ಒಟ್ಟಿಗೆ ಸೇರಿ ಕೃತ್ಯ ನಡೆಸಿದ್ದಾರೆಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಿನ.ಕಾಮ್ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಎಲ್ ಅರಸಿದ್ದಿಯವರನ್ನು ಸಂಪರ್ಕಿಸಿದಾಗ ಮಾತನಾಡಿ, “ಮಾರ್ಚ್ 6ರಂದು ನಡೆದ ಇಬ್ಬರು ಮಹಿಳೆಯರ ಅತ್ಯಾಚಾರ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರೋಡೆ, ಅತ್ಯಾಚಾರ ಹಾಗೂ ಕೊಲೆ ಯತ್ನ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿತ್ತು. ಒಡಿಶಾದ ಬಿಬಾಸ್ ಎಂಬುವವರ ಶವ ಪತ್ತೆಯಾದ ಬಳಿಕ ಕೊಲೆ ಪ್ರಕರಣವನ್ನೂ ದಾಖಲಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು. ತಲೆಮರೆಸಿಕೊಂಡಿದ್ದ ಮೂರನೇ ಆರೋಪಿಗಾಗಿ ಶೋಧ ಕಾರ್ಯ ನಡೆಸಿದ್ದು, ತಮಿಳುನಾಡಿನ ಚೆನ್ನೈನಲ್ಲಿ ಮೂರನೇ ಆರೋಪಿಯನ್ನು ಬಂಧಿಸಿ ಗಂಗಾವತಿಗೆ ಕರೆತರಲಾಗಿದೆ” ಎಂದು ತಿಳಿಸಿದರು.
“ಮೂರನೆ ಆರೋಪಿ ಶರಣಬಸವ ಕೃತ್ಯ ನಡೆಸಿದ್ದನ್ನು ಒಪ್ಪಿಕೊಂಡಿದ್ದಾನೆ. ಕೃತ್ಯಕ್ಕೆ ಬಳಸಿದ ಬೈಕ್ ಜಪ್ತಿ ಮಾಡಲಾಗಿದೆ. ಘಟನೆ ನಡೆದಾಗ ಆರೋಪಿಗಳು ಮದ್ಯಸೇವನೆ ಮಾಡಿದ್ದರು ಎನ್ನುವುದು ಸಾಬೀತಾಗಿದೆ. ಈ ಮೂವರೂ ಗಾರೆಕೆಲಸ ಮಾಡುವ ಸ್ನೇಹಿತರು. ಕುಡಿಯಲು ಹಣ ಕಿತ್ತುಕೊಳ್ಳುವುದಕ್ಕಾಗಿ ಇಂತಹ ಕೃತ್ಯ ನಡೆಸಿದ್ದಾರೆ. ಆರೋಪಿಗಳ ಬಂಧನದ ಪ್ರಕ್ರಿಯೆಗಳನ್ನು ನಡೆಸಿ ಮೂವರೂ ಆರೋಪಿಗಳನ್ನು ನ್ಯಾಯಾಲಯದ ವಶಕ್ಕೆ ನೀಡಲಾಗಿದೆ. ತನಿಖಾಧಿಕಾರಿಗಳು ಮುಂದಿನ ವಿಚಾರಣೆಯನ್ನು ಕೈಗೊಂಡಿದ್ದಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ದಲಿತ ಯುವಕನ ಮೇಲೆ ಹಲ್ಲೆ; ಆರೋಪಿಗಳ ಬಂಧನಕ್ಕೆ ಆಗ್ರಹ
“ಸಾಣಾಪುರ, ಆನೆಗೊಂದಿ ಭಾಗದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಕಾಡು ಪ್ರಾಣಿಗಳು ಇರುವುದುರಿಂದ ಜಾಗೃತಿ ಮೂಡಿಸುವಂತಹ ಕ್ರಮ ಕೈಗೊಳ್ಳಲಾಗಿದೆ. ವಿದೇಶಿ ಪ್ರವಾಸಿಗರು ಬಂದಲ್ಲಿ ಅರ್ಜಿ ಭರ್ತಿಮಾಡಿ ಕೊಡಬೇಕು. ಪ್ರವಾಸೋದ್ಯಮ ಇಲಾಖೆ ಈ ಕುರಿತು ಗಮನಹರಿಸಲಿದೆ” ಎಂದು ತಿಳಿಸಿದರು.