ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕು ವ್ಯಾಪ್ತಿಯ ವಸತಿ ನಿಲಯಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಹೊಸ ಮತ್ತು ಹಳೆಯ ಮಹಿಳಾ ಕಾರ್ಮಿಕರಿಗೆ ನಾಲ್ಕೈದು ತಿಂಗಳುಗಳ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ವಸತಿ ನಿಲಯಗಳ ಕಾರ್ಮಿಕರ ಸಂಘ, ಲಿಂಗಸೂಗೂರು ತಾಲೂಕು ಘಟಕ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯವಸ್ಥಾಪಕಿ ಮರಿಯಮ್ಮ ಅವರಿಗೆ ಹಕ್ಕೊತ್ತಾಯ ಸಲ್ಲಿಸಿತು.
ಲಿಂಗಸೂಗೂರು ತಾಲೂಕು ವ್ಯಾಪ್ತಿಯಲ್ಲಿರುವ ಹಿಂದುಳಿದ ವರ್ಗದ ವಸತಿ ನಿಲಯ, ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಸತಿ ನಿಲಯಗಳ ಸಿಬ್ಬಂದಿಗಳಿಗೆ ಸಮಯಕ್ಕೆ ಸರಿಯಾಗಿ ವೇತನ ಪಾವತಿಯಾಗದೆ ಇರುವುದರಿಂದ ಕುಟುಂಬ ನಿರ್ವಹಣೆ ದುಸ್ತರವಾಗಿದೆ. ಈ ಬಗ್ಗೆ ಸಾಕಷ್ಟು ಬಾರಿ ಮೌಖಿಕವಾಗಿ ಅಧಿಕಾರಿಗಳ ಗಮನಕ್ಕೆ ತಂದರೂ ಇಲ್ಲಿಯವರೆಗೂ ಬೇಡಿಕೆ ಈಡೇರಿಸಿಲ್ಲ ಎಂದು ಸಂಘದ ಸದಸ್ಯರು ಬೇಸರ ವ್ಯಕ್ತಪಡಿಸಿದರು.
ನಾಲ್ಕೈದು ತಿಂಗಳಿಂದ ವೇತನ ಪಾವತಿಯಾಗದೆ ಬಾಕಿ ಉಳಿಸಿಕೊಳ್ಳಲಾಗಿದೆ. ಇದರಿಂದ ವಸತಿ ನಿಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಮಕ್ಕಳ ಓದು, ಆರೋಗ್ಯ, ಇತರೆ ಖರ್ಚು-ವೆಚ್ಚಗಳನ್ನು ಸರಿದೂಗಿಸಲು ಸಾಲ-ಸೂಲ ಮಾಡುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಇದರಿಂದ ಜೀವನ ಅತಂತ್ರವಾಗಿದೆ. ನಿತ್ಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಹೆಚ್ಚಾಗುತ್ತಿದ್ದು ಜೀವನವನ್ನು ಮತ್ತೂ ಕೆಟ್ಟದಾಗಿಸಿದೆ” ಎಂದು ಅಳಲು ತೋಡಿಕೊಂಡರು.
ಹದಿನೈದು ದಿನಗಳ ಒಳಗಾಗಿ ಬಾಕಿ ವೇತನ ಜಮಾ ಮಾಡಬೇಕು. ಇಲ್ಲದಿದ್ದರೆ ವಸತಿ ನಿಲಯಗಳು ಕೆಲಸ ನಿಲ್ಲಿಸಿ ಇಲಾಖೆ ಮುಂದೆ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ರಾಯಚೂರು | ಹಟ್ಟಿ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಏ.2ರಂದು ಸಿಐಟಿಯು ಪ್ರತಿಭಟನೆ
ಈ ಸಂದರ್ಭದಲ್ಲಿ ವಸತಿ ನಿಲಯ ಕಾರ್ಮಿಕ ಮುಖಂಡರಾದ ದೇವಮ್ಮ ಈಚನಾಳ, ನಸ್ರೀನ್, ಕಮಲಮ್ಮ ಹಾಗೂ ಟಿಯುಸಿಐ ರಾಜ್ಯ ಸಮಿತಿ ಸದಸ್ಯ ಜಿ. ತಿಪ್ಪರಾಜ, ಬಸವರಾಜ ಹೆಸರೂರ ಸೇರಿದಂತೆ ವಸತಿ ನಿಲಯಗಳ ಕಾರ್ಮಿಕರು ಪಾಲ್ಗೊಂಡಿದ್ದರು.
