ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಕುಂದಕೆರೆ ವಲಯದ ಚಿರಕನಹಳ್ಳಿ ಗ್ರಾಮದ ಚಿಕ್ಕತೋಟದ ಶನೇಶ್ವರ ತೋಪಿನ ಬಳಿ ಅಂದಾಜು 65 ವರ್ಷದ ಹೆಣ್ಣಾನೆ ಮೃತಪಟ್ಟಿದೆ.
ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ಗಡಿ ದಾಟಿ ಬಂಡೀಪುರ ವ್ಯಾಪ್ತಿಯ ಕುಂದಕೆರೆ ವಲಯಕ್ಕೆ ಬಂದಿದ್ದ ಹೆಣ್ಣಾನೆಯೊಂದು ವಯೋ ಸಹಜವಾಗಿ ಸಾವನ್ನಪ್ಪಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಬಂಡೀಪುರ ಅರಣ್ಯಕ್ಕೆ ಬಂದಿದ್ದ ಆನೆ ಕುಂದಕೆರೆ ವಲಯದ ಕಡಬೂರು ಗ್ರಾಮದ ಸುತ್ತಮುತ್ತ ಸಂಚರಿಸುತ್ತಿರುವ ವಿಚಾರ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ದಿಕ್ಕು ತಪ್ಪಿ ಬಂದಿದ್ದ ಆನೆಯನ್ನು ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯಾಚರಣೆಯನ್ನು ಅಧಿಕಾರಿಗಳು ಕೈಗೊಂಡಿದ್ದರು.
ಆದರೆ ಕಾಡಿಗೆ ಹಿಂದಿರುಗದೆ ಪೋತರಾಜು ಎಂಬವರ ಜಮೀನಿನಲ್ಲಿ ಬೀಡು ಬಿಟ್ಟಿತ್ತು. ಆ ಬಳಿಕ ಕೂಡ ರಾತ್ರಿ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ, ಆನೆಯನ್ನು ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯ ಚುರುಕುಗೊಳಿಸಿದ್ದರು. ಆದರೂ ಸಫಲವಾಗಲಿಲ್ಲ. ಮರುದಿನ ಮಧ್ಯಾಹ್ನದ ವೇಳೆ ಚಿರಕನಹಳ್ಳಿ ಗ್ರಾಮದ ಸಮೀಪ ಆನೆ ಸಾವನ್ನಪ್ಪಿರುವುದಾಗಿ ಬಂಡೀಪುರ ಸಿಎಫ್ ರಮೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಅಶ್ಲೀಲ ವಿಡಿಯೋ ಹರಿಬಿಟ್ಟ ಪ್ರಕರಣ; ಎಬಿವಿಪಿ ಅಧ್ಯಕ್ಷ ಪ್ರತೀಕ್ ಗೌಡ ಬಂಧನ
ಆನೆ ಮೃತಪಟ್ಟಿರುವ ಸ್ಥಳಕ್ಕೆ ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ರವೀಂದ್ರ, ಪಶು ವೈದ್ಯಾಧಿಕಾರಿ ಡಾ. ಮಿರ್ಜಾ ವಾಸೀಂ, ಕುಂದಕೆರೆ ಆರ್ಎಫ್ಓ ಶ್ರೀನಿವಾಸ್ ತೆರಳಿ, ಮರಣೋತ್ತರ ಪರೀಕ್ಷೆ ನಡೆಸಿದರು. ಅಂಗಾಂಗ ಮಾದರಿ ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ವರದಿ ಬಂದ ಬಳಿಕ ಸಾವಿಗೆ ನೈಜ ಕಾರಣ ತಿಳಿದು ಬರಲಿದೆ. ಮೇಲ್ನೋಟಕ್ಕೆ ಸಹಜ ಸಾವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.