ಮುಸ್ಲಿಂ ಯುವಕನೊಬ್ಬನನ್ನು ಮೊಬೈಲ್ ಕಳ್ಳನೆಂದು ಶಂಕಿಸಿ ಆತನನ್ನು ಮರಕ್ಕೆ ಕಟ್ಟಿ, ಹಲ್ಲೆ ನಡೆಸಿ ‘ಜೈ ಶ್ರೀರಾಮ್’ ಎಂದು ಹೇಳುವಂತೆ ಒತ್ತಾಯಿಸಿರುವ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ. ಪ್ರಕರಣ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದೆ.
ಜೂ.13 ರಂದು ಸಾಹಿಲ್ ಎಂಬುವರು ತನ್ನ ಗ್ರಾಮದ ಬಸ್ ನಿಲ್ದಾಣದಲ್ಲಿ ನಿಂತಿದ್ದರು. ಈ ವೇಳೆ ಮೂವರು ಯುವಕರು ಬಂದು ಆತನನ್ನು ಬಲವಂತವಾಗಿ ತಮ್ಮ ಬೈಕ್‌ನಲ್ಲಿ ಕೂರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮೊಬೈಲ್ ಕಳವಿನ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ತಾನು ಮೊಬೈಲ್ ಕದ್ದಿಲ್ಲ ಎಂದು ಹೇಳಿದಾಗ ಸಾಹಿಲ್‌ನನ್ನು ಮರಕ್ಕೆ ಕಟ್ಟಿ ಹಲ್ಲೆ ನಡೆಸುವುದರ ಜೊತೆ ತಲೆಯನ್ನು ಬೋಳಿಸಿದ್ದಾರೆ. ನಂತರ ಬಲವಂತವಾಗಿ “ಜೈ ಶ್ರೀರಾಮ್” ಹೇಳುವಂತೆ ಹಲ್ಲೆ ಮಾಡಿದ್ದಾರೆ.
ಸಾಹಿಲ್ ಅವರು ಘಟನಾ ಸ್ಥಳದಿಂದ ತಪ್ಪಿಸಿಕೊಂಡು ಪೊಲೀಸ್ ಠಾಣೆಗೆ ಬಂದಿದ್ದಾರೆ. ಆದರೆ ಪ್ರಕರಣದ ಬಗ್ಗೆ ಮಾಹಿತಿಯನ್ನು ತಿಳಿದ ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸುವ ಬದಲು, ಮೊಬೈಲ್ ಕಳ್ಳನೆಂದು ಸಾಹಿಲ್ ಅವರನ್ನೇ ಬಂಧಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಂಡವಾಳಶಾಹಿ ಸ್ನೇಹಿತರ ಲಾಭಕ್ಕೆ ಪಿಎಸ್‌ಯುಗಳಿಂದ 2 ಲಕ್ಷ ಉದ್ಯೋಗ ಕಡಿತ: ರಾಹುಲ್ ಗಾಂಧಿ ಆಕ್ರೋಶ
ಈ ಬಗ್ಗೆ ಜೂನ್ 17 ರಂದು, ಸಾಹಿಲ್‌ನ ಪೋಷಕರು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಅವರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ಆನಂತರ ತನಿಖೆ ನಡೆಸಿದ ಬಳಿಕ ಮೂವರು ಆರೋಪಿಗಳಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಗಮನದಲ್ಲಿಟ್ಟುಕೊಂಡು, ಕಳ್ಳತನದ ಶಂಕೆಯಲ್ಲಿ ಅದೇ ಗ್ರಾಮದ ಯುವಕನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿರುವುದು ನಮ್ಮ ಗಮನಕ್ಕೆ ಬಂದಿದೆ. ಸಂತ್ರಸ್ತನ ಕುಟುಂಬದವರು ನೀಡಿದ ದೂರಿನ ಮೇರೆಗೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಎಎಸ್‌ಪಿ ಎಸ್ ಎನ್ ತಿವಾರಿ ತಿಳಿಸಿದ್ದಾರೆ.
“ಈ ಮೊದಲು ಪೊಲೀಸರು ತಮ್ಮನ್ನು ಬೆದರಿಸಿದ್ದು ಮಾತ್ರವಲ್ಲದೆ ತಮ್ಮ ದೂರನ್ನು ಹಿಂಪಡೆಯುವಂತೆ ಒತ್ತಡ ಹೇರಿದ್ದರು. ಅವರು ಶ್ರೀಮಂತ ಜನರು. ನಾವು ಬಡವರು. ಆರೋಪಿಗಳು ಇನ್ನೂ ಬೆದರಿಕೆ ಹಾಕುತ್ತಲೇ ಇದ್ದಾರೆ” ಎಂದು ಎಂದು ಸಾಹಿಲ್‌ನ ತಾಯಿ ನೂರ್ ಬಾನೋ ಆರೋಪಿಸಿದ್ದಾರೆ.