- ತೀವ್ರ ಶಾಖ ಹಿನ್ನೆಲೆ ಅನೇಕ ರಾಜ್ಯಗಳ ಶಾಲೆಗಳಿಗೆ ರಜೆ ಘೋಷಣೆ
- ಆಸ್ಪತ್ರೆಗೆ ದಾಖಲಾಗುವವರಲ್ಲಿ ಹೆಚ್ಚಿನವರು 60 ವರ್ಷ ಮೇಲ್ಪಟ್ಟವರು
ಉತ್ತರ ಭಾರತದಲ್ಲಿ ತೀವ್ರ ಶಾಖದ ಅಲೆಗಳು ಮುಂದುವರೆದಿವೆ. ಭಾರೀ ಬಿಸಿಲಿನ ತಾಪದಿಂದ ಕಳೆದ ಮೂರು ದಿನಗಳಲ್ಲಿ ಬಲ್ಲಿಯಾ ಜಿಲ್ಲಾ ಆಸ್ಪತ್ರೆಯಲ್ಲಿ 54 ಮಂದಿ ಮೃತಪಟ್ಟಿದ್ದು ಸುಮಾರು 400 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಭಾನುವಾರ (ಜೂನ್ 18) ವರದಿಯಾಗಿದೆ.
ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದರಲ್ಲಿಯೇ ಶನಿವಾರ ಹೆಚ್ಚಿನ ಬಿಸಿಲಿನ ತಾಪದಿಂದ ಕೇವಲ 24 ಗಂಟೆಗಳ ಅವಧಿಯಲ್ಲಿ 34 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳಲ್ಲಿ ಹೆಚ್ಚಿನವರು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು ತೀವ್ರ ಶಾಖ ಪರಿಣಾಮ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಳವಾಗುತ್ತಿದೆ.
ಸಾವಿಗೆ ಅನೇಕ ಕಾರಣಗಳಿದ್ದು ತೀವ್ರ ಶಾಖವೂ ಒಂದು ಪ್ರಮುಖ ಕಾರಣವಾಗಿದೆ ಎಂದು ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತೀವ್ರ ಶಾಖದ ಅಲೆಯು ಉತ್ತರ ಪ್ರದೇಶವನ್ನು ಆವರಿಸಿದ್ದು, ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ತಾಪಮಾನ 40 ಡಿಗ್ರಿಗೂ ಅಧಿಕವಿದೆ.
ತೀವ್ರ ಶಾಖದ ಪರಿಣಾಮ ಹಠಾತ್ ಸಾವುಗಳು ಸಂಭವಿಸುತ್ತಿವೆ. ರೋಗಿಗಳು ಜ್ವರ, ಉಸಿರಾಟದ ತೊಂದರೆ ಮತ್ತು ಇತರ ಸಮಸ್ಯೆಗಳಿಂದ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಇದರಿಂದ ಆಸ್ಪತ್ರೆಯ ಸಿಬ್ಬಂದಿಗೆ ಸಜ್ಜಾಗಿರಲು ಸೂಚಿಸಲಾಗಿದೆ.
ಜೂನ್ 15 ರಂದು 23, ಮರುದಿನ 20, ಶನಿವಾರ 11 ಮಂದಿ ಭಾರೀ ಬಿಸಿಲಿನ ತಾಪಕ್ಕೆ ಅಸುನೀಗಿದ್ದಾರೆ ಎಂದು ಬಲ್ಲಿಯಾ ಜಿಲ್ಲಾ ಆಸ್ಪತ್ರೆ ಪ್ರಭಾರಿ ವೈದ್ಯಕೀಯ ಅಧೀಕ್ಷಕ ಎಸ್.ಕೆ. ಯಾದವ್ ತಿಳಿಸಿದ್ದಾರೆ.
“ಲಕ್ನೋದಿಂದ ತಂಡವೊಂದು ಬರುತ್ತಿದ್ದು ತೀವ್ರ ಶಾಖದ ಅಲೆಗಳ ಬಗ್ಗೆ ತನಿಖೆ ನಡೆಸುತ್ತದೆ. ಇದು ತುಂಬಾ ಬಿಸಿಯಾಗಿದ್ದಾಗ ಅಥವಾ ಶೀತವಾಗಿದ್ದಾಗ ಉಸಿರಾಟದ ರೋಗಿಗಳು, ಮಧುಮೇಹ ರೋಗಿಗಳು ಮತ್ತು ರಕ್ತದೊತ್ತಡ ರೋಗಿಗಳು ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಶಾಖದ ಏರಿಕೆ ಇಂತಹ ರೋಗಿಗಳ ಸಾವಿಗೆ ಕಾರಣವಾಗಬಹುದು ಎಂದು ಅಜಂಗಢ ಸರ್ಕಲ್‌ನ ಹೆಚ್ಚುವರಿ ಆರೋಗ್ಯ ನಿರ್ದೇಶಕ ಡಾ.ಬಿ.ಪಿ.ತಿವಾರಿ ಹೇಳಿದ್ದಾರೆ.
ರೋಗಿಗಳು ಹೆಚ್ಚಾದ ಕಾರಣ ಜಿಲ್ಲಾಸ್ಪತ್ರೆಯಲ್ಲಿ ನೂಕು ನುಗ್ಗಲು ಉಂಟಾಗಿದ್ದು ರೋಗಿಗಳು ಸ್ಟ್ರೆಚರ್‌ಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಅನೇಕ ಅಟೆಂಡರ್‌ಗಳು ತಮ್ಮ ರೋಗಿಗಳನ್ನು ತುರ್ತು ವಿಭಾಗಕ್ಕೆ ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿದ್ದಾರೆ. ಹತ್ತು ರೋಗಿಗಳು ಒಂದೇ ಸಮಯದಲ್ಲಿ ಬಂದರೆ ಕಷ್ಟವಾಗುತ್ತದೆ ಎಂದು ಅವರು ಹೇಳಿದರು.
ಒಡಿಶಾ, ವಿದರ್ಭ, ಪಶ್ಚಿಮ ಬಂಗಾಳ, ಜಾರ್ಖಂಡ್, ಆಂಧ್ರಪ್ರದೇಶ, ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ತೆಲಂಗಾಣ, ತಮಿಳುನಾಡು ರಾಜ್ಯಗಳಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತೀವ್ರತರವಾದ ಶಾಖದ ಪರಿಸ್ಥಿತಿಯ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಬಿಸಿಗಾಳಿ ಪರಿಸ್ಥಿತಿಗಳಿಂದಾಗಿ ಬಿಹಾರದಲ್ಲಿ ರೆಡ್ ಅಲರ್ಟ್ ಎಚ್ಚರಿಕೆ ನೀಡಲಾಗಿದೆ.
ತೀವ್ರ ಶಾಖ ಹಿನ್ನೆಲೆ ಪಾಟ್ನಾ ಜಿಲ್ಲಾಡಳಿತವು 12 ನೇ ತರಗತಿಯವರೆಗೆ ಶಾಲೆಗಳ ಬೇಸಿಗೆ ರಜೆಯನ್ನು ಜೂನ್ 24 ರವರೆಗೆ ವಿಸ್ತರಿಸಿದೆ.
ಈ ಸುದ್ದಿ ಓದಿದ್ದೀರಾ? ಜನರ ಭಾವನೆಗಳಿಗೆ ಧಕ್ಕೆ; ‘ಆದಿಪುರುಷ್’ ಚಿತ್ರದ ವಿರುದ್ಧ ಕಾಂಗ್ರೆಸ್, ಎಎಪಿ, ಶಿವಸೇನೆ ಆಕ್ರೋಶ
ಬಿಹಾರ ಹೊರತುಪಡಿಸಿ ಹಲವು ರಾಜ್ಯಗಳು ಸುಡುವ ಬೇಸಿಗೆಯ ಕಾರಣ ತಮ್ಮ ರಾಜ್ಯಗಳಲ್ಲಿ ಬೇಸಿಗೆ ರಜೆಯನ್ನು ವಿಸ್ತರಿಸಿವೆ.
ಜಾರ್ಖಂಡ್‌ನ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 8 ನೇ ತರಗತಿಯವರೆಗಿನ ಶಾಲೆಗಳ ಮುಚ್ಚುವಿಕೆಯನ್ನು ಜೂನ್ 17 ರವರೆಗೆ ವಿಸ್ತರಿಸಿದೆ. ಇದಲ್ಲದೆ, ಛತ್ತೀಸ್‌ಗಢ, ಗೋವಾ, ಆಂಧ್ರಪ್ರದೇಶ ವಿದ್ಯಾರ್ಥಿಗಳಿಗೆ ಶಾಲೆಯನ್ನು ಬಂದ್ ಮಾಡಿವೆ.