“ಈ ವರ್ಷ ಪವಿತ್ರ ರಂಜಾನ್ ಮಾಸದ ಶುಕ್ರವಾರವೇ ಹೋಳಿ ಬರುತ್ತದೆ. ಈ ದಿನದಂದು ಮುಸ್ಲಿಮರು ಒಳಗೆಯೇ ಇರಿ. ಹಿಂದೂಗಳು ತಮ್ಮ ಹಬ್ಬವನ್ನು ಯಾವುದೇ ಅಡೆತಡೆಗಳಿಲ್ಲದೆ ಆಚರಿಸಲು ಬಿಡಿ ಎಂದು ಬಿಹಾರದ ಬಿಜೆಪಿ ಶಾಸಕರೊಬ್ಬರು ಸೋಮವಾರ ಮುಸ್ಲಿಮರಿಗೆ ತಿಳಿಸಿದ್ದಾರೆ. ಸದ್ಯ ಬಿಹಾರದ ಶಾಸಕನ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.
ಮಧುಬನಿ ಜಿಲ್ಲೆಯ ಬಿಸ್ಫಿ ವಿಧಾನಸಭಾ ಕ್ಷೇತ್ರದ ಶಾಸಕ ಹರಿಭೂಷಣ್ ಠಾಕೂರ್ ಬಚೌಲ್ ಅವರು ವಿಧಾನ ಸಭಾ ಆವರಣದಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿದರು. “ಒಂದು ವರ್ಷದಲ್ಲಿ 52 ಜುಮ್ಮಾಗಳು (ಶುಕ್ರವಾರಗಳು) ಇರುತ್ತವೆ. ಅವುಗಳಲ್ಲಿ ಒಂದು ಹೋಳಿಯ ದಿನದಂದೇ ಬಂದಿದೆ. ಆದ್ದರಿಂದ, ಮುಸ್ಲಿಮರು ಶುಕ್ರವಾರದಂದು ಹಿಂದೂಗಳು ಹಬ್ಬವನ್ನು ಆಚರಿಸಲು ಬಿಡಬೇಕು” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಬೆಳಗಾವಿ | ಹೋಳಿ ಮತ್ತು ರಂಜಾನ್ ಹಬ್ಬ ಶಾಂತಿಯುತವಾಗಿ ಆಚರಿಸಲು ಜಿಲ್ಲಾಧಿಕಾರಿಗಳ ಕರೆ
“ಶುಕ್ರವಾರ ಹಿಂದೂಗಳು ಮುಸ್ಲಿಮರ ಮೇಲೆ ಬಣ್ಣ ಹಾಕಿದರೆ ಮುಸ್ಲಿಮರು ಬೇಸರಪಡಬಾರದು. ಬಣ್ಣ ಹಾಕುವುದರಿಂದ ಅಷ್ಟೊಂದು ಸಮಸ್ಯೆ ಇದ್ದರೆ, ನೀವು ಮನೆಯಲ್ಲಿಯೇ ಇರಿ. ಕೋಮು ಸಾಮರಸ್ಯವನ್ನು ಕಾಪಾಡಿಕೊಳ್ಳಲು ಇದು ಅತ್ಯಗತ್ಯ” ಎಂದಿದ್ದಾರೆ.
ಮುಸ್ಲಿಮರು ಉಪವಾಸ ಆಚರಿಸುತ್ತಿದ್ದಾರೆ. ಶುಕ್ರವಾರ ವಿಶೇಷ ಪ್ರಾರ್ಥನೆ ಇರುತ್ತದೆ ಅಲ್ಲವೇ? ಎಂಬ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕರು, “ಮುಸ್ಲಿಮರು ಯಾವಾಗಲೂ ಎರಡು ನೀತಿಗಳನ್ನು ಹೊಂದಿದ್ದಾರೆ. ಅಬಿರ್-ಗುಲಾಲ್ (ಬಣ್ಣದ ಪುಡಿ) ಮಾರಾಟ ಮಾಡಲು ಮುಸ್ಲಿಮರು ಅಂಗಡಿ ತೆರೆಯುತ್ತಾರೆ. ಈ ಮೂಲಕ ಹಣ ಗಳಿಸಿ ಸಂತೋಷಪಡುತ್ತಾರೆ. ಆದರೆ ಅದೇ ಬಣ್ಣ ತಮ್ಮ ಬಟ್ಟೆಗಳಿಗೆ ಬಿದ್ದರೆ ದೋಜಖ್‌ಗೆ (ನರಕ) ಹೋಗುವ ಭಯ ಅವರಲ್ಲಿ ಶುರುವಾಗುತ್ತದೆ” ಎಂದು ವಾಗ್ದಾಳಿ ನಡೆಸಿದರು.
ಇನ್ನು ಬಿಜೆಪಿ ಶಾಸಕರ ಹೇಳಿಕೆಗೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ತಿರುಗೇಟು ನೀಡಿದ್ದಾರೆ. “ಅಂತಹ ಹೇಳಿಕೆಗಳನ್ನು ನೀಡಲು ಅವರು ಯಾರು? ಅವರು ಅಂತಹ ವಿಷಯಗಳನ್ನು ಹೇಗೆ ನೀಡುತ್ತಾರೆ” ಎಂದು ಪ್ರಶ್ನಿಸಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಗುರಿಯಾಗಿಸಿಕೊಂಡ ಅವರು, “ಮುಖ್ಯಮಂತ್ರಿ ಎಲ್ಲಿದ್ದಾರೆ? ಅವರಿಗೆ ಬಚೋಲ್ ಅವರನ್ನು ಶಿಕ್ಷಿಸಲು ಧೈರ್ಯವಿದೆಯೇ” ಎಂದು ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ? ಬೆಳಗಾವಿ | ‘ಗೃಹಲಕ್ಷ್ಮಿ’ ಹಣದಲ್ಲಿ ಹೋಳಿಗೆ ಊಟ ಹಾಕಿಸಿದ್ದ ಅಕ್ಕಾತಾಯಿಗೆ ಸಿಎಂ ಸನ್ಮಾನ
“ಇದು ‘ರಾಮ್ ಮತ್ತು ರಹೀಮ್’ ಅವರನ್ನು ನಂಬುವ ದೇಶ. ಇದು ಬಿಹಾರ – ಇಲ್ಲಿ, ಐದು ಅಥವಾ ಆರು ಹಿಂದೂಗಳು ಒಬ್ಬ ಮುಸ್ಲಿಂ ಸಹೋದರನನ್ನು ರಕ್ಷಿಸಲು ನಿಲ್ಲುತ್ತಾರೆ” ಎಂದು ತೇಜಸ್ವಿ ಹೇಳಿದ್ದಾರೆ. “ಹಬ್ಬಗಳ ವಿಷಯದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಯಾವುದೇ ಸಮಸ್ಯೆ ಇಲ್ಲ” ಎಂದು ಆರ್‌ಜೆಡಿ ಶಾಸಕ ಮತ್ತು ಮಾಜಿ ಸಚಿವ ಇಸ್ರೇಲ್ ಮನ್ಸೂರಿ ಹೇಳಿದ್ದಾರೆ.
ಬಿಜೆಪಿಗರು ನಿರಂತರವಾಗಿ ಹಿಂದೂಗಳ ನಡುವೆ ಮುಸ್ಲಿಮರು ವಿರುದ್ಧ ವಿಷಬೀಜ ಬಿತ್ತಿದ್ದರೆ, ಇತ್ತರೆ ಎಸ್‌ಡಿಪಿಐ ಮುಸ್ಲಿಮರನ್ನು ಹಿಂದೂಗಳ ವಿರುದ್ಧ ಪರೋಕ್ಷವಾಗಿ ಎತ್ತಿಕಟ್ಟುತ್ತಿದೆ. ಇವೆರಡೂ ರಾಜಕೀಯಗಳ ನಡುವೆ ಸಿಲುಕಿರುವುದು ಬಡ ಯುವಕರು.
