ಖಾಸಗಿ ಶಾಲೆಯ ಆವರಣದಲ್ಲಿದ್ದ ಕೊಳವೆ ಬಾವಿ ಕೆಟ್ಟುಹೋಗಿದ್ದು, ರಿಪೇರಿಗಾಗಿ ಅದರಲ್ಲಿದ್ದ ಪೈಪ್‌ಅನ್ನು ಮೇಲೆತ್ತಲು ಸಿಬ್ಬಂದಿಗಳು ಶಾಲೆಯ ಮಕ್ಕಳನ್ನು ಬಳಸಿಕೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ಕೆಂಭಾವಿಯಲ್ಲಿ ನಡೆದಿದೆ. ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡ ಶಾಲೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಷಕರು ಶಿಕ್ಷಣ ಇಲಾಖೆಗೆ ಆಗ್ರಹಿಸಿದ್ದಾರೆ.
ಕೆಂಭಾವಿಯಲ್ಲಿರುವ ಖಾಸಗಿ ಜ್ಞಾನದೀಪ ಶಾಲೆಯಲ್ಲಿ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ನಡೆದು ಈಗಾಗಲೇ ಐದಾರು ದಿನಗಳಾಗಿವೆ. ಆದರೂ, ಇಲಾಖೆ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆಕ್ರೋಶ ವ್ಯಕ್ತವಾಗಿದೆ.
ಶಾಲೆಯ ಕಾಂಪೌಂಡ್ ಬಳಿ 300 ಅಡಿ ಆಳದ ಕೊಳವೆ ಬಾವಿ ಇದೆ. ಆ ಕೊಳವೆ ಬಾವಿಗೆ ಇಳಿಸಲಾಗಿದ್ದ ಮೋಟಾರ್ ಕೆಟ್ಟಿದ್ದರಿಂದ, ದುರಸ್ತಿಗಾಗಿ ಮೋಟಾರ್ ಮತ್ತು ಪೈಪ್‌ಅನ್ನು ಮೇಲೆತ್ತಬೇಕಿತ್ತು. ಪೈಪ್‌ಅನ್ನು ಮೇಲೆತ್ತಲು ಶಾಲಾ ಮುಖ್ಯಸ್ಥರು ಮತ್ತು ಸಿಬ್ಬಂದಿಗಳು ಮಕ್ಕಳನ್ನು ಬಳಿಸಿಕೊಂಡಿದ್ದಾರೆ. ಮಕ್ಕಳು ಪೈಪ್‌ಅನ್ನು ಎಳೆಯುತ್ತಿರುವ ವಿಡಿಯೋ ವೈರಲ್ ಆಗಿದೆ.
ವಿಡಿಯೋ ವೈರಲ್ ಆದ ಬಳಿಕ ಶಾಲೆಗೆ ಮಕ್ಕಳ ಹಿತರಕ್ಷಣಾ ಸಮಿತಿ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೂ, ಶಾಲೆಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿದುಬಂದಿದೆ.
ಶಾಲೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಮಕ್ಕಳ ಹಕ್ಕುಗಳ ಆಯೋಗವು ಡಿಡಿಪಿಐಗೆ ಸೂಚನೆ ನೀಡಿದೆ. ಆದರೆ, ಡಿಡಿಪಿಐ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆಯಿಂದ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ಶಾಲೆ ವಿರುದ್ಧ ಕ್ರಮಕ್ಕೆ ಮುಂದಾಗದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಡಿಡಿಪಿಐ ಚನ್ನಬಸಪ್ಪ, “ಘಟನೆ ನಡೆದ ದಿನದಂದೇ ಪ್ರಕರಣ ದಾಖಲಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆ ಬಳಿಕ, ಮಕ್ಕಳ ಹಕ್ಕುಗಳ ಆಯೋಗವೂ ಸೂಚನೆ ನೀಡಿದೆ. ಇಂದೇ ಪ್ರಕರಣ ದಾಖಲಿಸಲು ಸೂಚಿಸುತ್ತೇನೆ” ಎಂದು ಹೇಳಿದ್ದಾರೆ.