ಸರ್ಕಾರಿ ವೈದ್ಯರು ತಮ್ಮ ಕೆಲಸದ ಅವಧಿಯಲ್ಲಿ 4 ಬಾರಿ ಬಯೋಮೆಟ್ರಿಕ್ ನೀಡಬೇಕು ಎಂದು ಸರ್ಕಾರ ನಿಯಮ ರೂಪಿಸಿದೆ. ಇಡೀ ಜಗತ್ತಿನಲ್ಲಿಯೇ ಯಾವ ಉದ್ಯೋಗಿಗೂ ದಿನದಲ್ಲಿ ನಾಲ್ಕು ಬಾರಿ ಬಯೋಮೆಟ್ರಿಕ್ ಹಾಜರಾತಿಯ ನಿಯಮವಿಲ್ಲ. ಇದೇ ಮೊದಲ ಬಾರಿಗೆ ವೈದ್ಯರಿಗೆ ಇಂತಹ ನಿಯಮವನ್ನು ವಿಧಿಸಲಾಗಿದೆ.
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ದಿನದಲ್ಲಿ ನಾಲ್ಕು ಬಾರಿ ಬಯೋಮೆಟ್ರಿಕ್ ಹಾಜರಾತಿಯನ್ನು ಕಡ್ಡಾಯಗೊಳಿಸುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಹೇಳಿದ್ದಾರೆ. ವೈದ್ಯರ ಕೆಲಸಗಳ ಮೇಲೆ ಮತ್ತಷ್ಟು ನಿಗಾ ಇಡುವುದು ಈ ನಿರ್ಧಾರದ ಉದ್ದೇಶವೆಂದು ಪ್ರತಿಪಾದಿಸಿದ್ದಾರೆ.
ಸರ್ಕಾರಿ ವೈದ್ಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಳಗ್ಗೆ 9ರಿಂದ ಸಂಜೆ 4ಗಂಟೆವರೆಗೆ (7 ಗಂಟೆಗಳ ಕಾಲ) ಕಾರ್ಯನಿರ್ವಹಿಸಬೇಕು. ಈ 7 ಗಂಟೆ ಅವಧಿಯಲ್ಲಿಯೇ 4 ಬಾರಿ ಬಯೋಮೆಟ್ರಿಕ್ ನೀಡಬೇಕು ಎಂದು ಸರ್ಕಾರ ನಿಯಮ ರೂಪಿಸಿದೆ. ಇಡೀ ಜಗತ್ತಿನಲ್ಲಿಯೇ ಯಾವ ಉದ್ಯೋಗಿಗೂ ದಿನದಲ್ಲಿ ನಾಲ್ಕು ಬಾರಿ ಬಯೋಮೆಟ್ರಿಕ್ ಹಾಜರಾತಿಯ ನಿಯಮವಿಲ್ಲ. ಇದೇ ಮೊದಲ ಬಾರಿಗೆ ವೈದ್ಯರಿಗೆ ಇಂತಹ ನಿಯಮವನ್ನು ವಿಧಿಸಲಾಗಿದೆ.
ಈ ನಿಯಮವು ಮೇಲ್ನೋಟಕ್ಕೆ ಒತ್ತಡ, ಹೇರಿಕೆಯಂತೆ ಕಾಣಬಹುದು. ಆದರೆ, ರೋಗಿಗಳಿಗೆ ಹೆಚ್ಚಿನ ಮತ್ತು ಸೂಕ್ತ ಸೇವೆ ಒದಗಿಸಲು ವೈದ್ಯರು ಆಸ್ಪತ್ರೆಯಲ್ಲಿ ಇರುವಂತೆ ಮಾಡಲು ಇದನ್ನು ಜಾರಿಗೆ ತರಲಾಗಿದೆ. ಬೇರೆ ದಾರಿ ಇಲ್ಲವೆಂಬುದು ಸರ್ಕಾರದ ನಿಲುವು.
ವಿಧಾನ ಪರಿಷತ್‌ನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಸಚಿವ ಶರಣ ಪಾಟೀಲ್, ”ಸರ್ಕಾರಿ ಆಸ್ಪತ್ರೆಗಳ ವೈದ್ಯರು ಕರ್ತವ್ಯದ ಅವಧಿಯಲ್ಲಿ ಆಸ್ಪತ್ರೆಯಲ್ಲಿರದೆ ಬೇರೆ ಕಡೆ ಕರ್ತವ್ಯ ನಿರ್ವಹಿಸುತ್ತಾರೆ ಎಂಬ ಆರೋಪ ಹೆಚ್ಚಾಗಿದೆ. ಇದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಹಿಂದೆ, ಬೆಳಗ್ಗೆ 9ರಿಂದ ಮಧ್ಯಾಹ್ನ 2ರ ತನಕ ವೈದ್ಯರು ಸರ್ಕಾರಿ ಆಸ್ಪತ್ರೆಯಲ್ಲಿ ಇರುವುದು ಕಡ್ಡಾಯವಾಗಿತ್ತು. ಈಗ ಕೆಲಸದ ಅವಧಿಯನ್ನು ಸಂಜೆ 4ರವರೆಗೆ ವಿಸ್ತರಿಸಲಾಗಿದೆ” ಎಂದಿದ್ದಾರೆ.
ಜೊತೆಗೆ, ”ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆಗೆ ಹಾಜರಾಗುವ ವೈದ್ಯರು ದಿನಕ್ಕೆ ನಾಲ್ಕು ಬಾರಿ ಬಯೋಮೆಟ್ರಿಕ್‌ಗೆ ತಮ್ಮ ಹಸ್ತ ಮುದ್ರೆ ಹಾಕಬೇಕು. ಬೆಳಗ್ಗೆ 9, ಮಧ್ಯಾಹ್ನ 2 ಮತ್ತು 3 ಹಾಗೂ 4 ಗಂಟೆಗೆ ಹಸ್ತ ಮುದ್ರೆ ಹಾಕಲೇಬೇಕು. ಅವರ ಬಯೋಮೆಟ್ರಿಕ್ ಆಧಾರದ ಮೇಲೆ ವೇತನ ನೀಡಲು ಸೂಚನೆ ನೀಡಲಾಗಿದೆ. ಉಲ್ಲಂಘಿಸಿದವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುತ್ತದೆ” ಎಂದು ಕಟ್ಟುನಿಟ್ಟಾಗಿ ಹೇಳಿದ್ದಾರೆ.
ಇದಕ್ಕೆ ಕಾರಣವಿಷ್ಟೇ, ಹಣದ ಬೆನ್ನತ್ತಿರುವ ವೈದ್ಯರು ತಮ್ಮ ಬಹುತೇಕ ಕೆಲಸದ ಅವಧಿಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ಕಳೆಯುತ್ತಲೇ, ಹೆಚ್ಚು ಹಣ ಗಳಿಕೆ ಮಾಡುವ ಹಪಾಹಪಿಗೆ ಬಿದ್ದಿದ್ದಾರೆ. ಹಣಬಾಕ ಧೋರಣೆಯಿಂದಾಗಿ ಆರೋಗ್ಯ ಇಲಾಖೆಗೆ ಮತ್ತು ಸರ್ಕಾರಕ್ಕೆ ಸರ್ಕಾರಿ ವೈದ್ಯರು ಅಕ್ಷರಶಃ ತಲೆನೋವಾಗಿ ಪರಿಣಮಿಸಿದ್ದಾರೆ. ಸರ್ಕಾರಿ ವೈದ್ಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವಂತೆ ಮಾಡುವುದೇ ಸರ್ಕಾರಕ್ಕೆ ಸವಾಲಾಗಿ ಎದುರಾಗಿದೆ.
ಈ ಹಿಂದೆ, ಸರ್ಕಾರಿ ವೈದ್ಯರಿಗೆ ಬೆಳಗ್ಗೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ ಆಸ್ಪತ್ರೆಗಳಲ್ಲಿ ಕೆಲಸ ಮಾಡಿ, ನಂತರ ಬೇರೆ ಎಲ್ಲಿಯಾದರೂ (ಖಾಸಗಿ ಆಸ್ಪತ್ರೆಗಳು/ಕ್ಲಿನಿಕ್‌ಗಳು) ಕೆಲಸ ಮಾಡಲು ಅವಕಾಶವಿತ್ತು. ಆಗ, ವೈದ್ಯರಿಗೆ ವೇತನವೂ ತೀರಾ ಅಲ್ಲದಿದ್ದರೂ, ಕೊಂಚ ಕಡಿಮೆಯೇ ಇತ್ತು. ಆದರೆ, ಕಳೆದ ಕೆಲವು ವರ್ಷಗಳಿಂದ ಹಾಗಿಲ್ಲ. ವೈದ್ಯರ ವೇತನ ಲಕ್ಷಗಳ ವರೆಗೆ ಏರಿಕೆಯಾಗಿದೆ. ವೈದ್ಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಸೇವೆ ಒದಗಿಸಬೇಕು ಎಂಬ ಕಾರಣದಿಂದಲೇ ಅವರ ವೇತನವನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ರೋಗಿಗಳಿಗೆ ತ್ವರಿತವಾಗಿ ಸೇವೆ ದೊರೆಯಬೇಕೆಂಬ ಕಾರಣಕ್ಕೆ ಅವರ ಕಾರ್ಯನಿರ್ವಹಣೆಯ ಅವಧಿಯನ್ನೂ 2 ಗಂಟೆ ಕಾಲ ವಿಸ್ತರಿಸಲಾಗಿದ್ದು, ಸಂಜೆ 4 ಗಂಟೆವರೆಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವಂತೆ ಕಾನೂನಿನಲ್ಲಿ ಮಾರ್ಪಾಡು ಮಾಡಲಾಗಿದೆ.
ಕೆಲಸದ ಅವಧಿ 2 ಗಂಟೆ ಮಾತ್ರವೇ ವಿಸ್ತರಣೆಯಾಗಿದ್ದರೂ, ವೇತನ ಮಾತ್ರ ಹಲವು ಪಟ್ಟುಗಳಷ್ಟು ಹೆಚ್ಚಾಗಿವೆ. ಇದೆಲ್ಲವೂ ಆಗಿದ್ದು ನಿನ್ನೆ-ಮೊನ್ನೆಯಲ್ಲ. ಹಲವಾರು ವರ್ಷಗಳೇ ಕಳೆದಿವೆ. ಆದರೆ, ಹೆಚ್ಚು ವೇತನ ಪಡೆದರೂ ವೈದ್ಯರು ಮಾತ್ರ ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸರ್ಕಾರಿ ಕೆಲಸದ ಅವಧಿಯಲ್ಲಿಯೂ ಅವರು ತಮ್ಮದೇ ಖಾಸಗಿ ಕ್ಲಿನಿಕ್ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿಯೇ ಹೆಚ್ಚಾಗಿ ಕೆಲಸ ಮಾಡುತ್ತಿದ್ದಾರೆ.
ಬಯೋಮೆಟ್ರಿಕ್ ವ್ಯವಸ್ಥೆ ಬರುವುದಕ್ಕೂ ಮುಂಚೆ, ವೈದ್ಯರಿಗೆ ಹೇಳುವವರು-ಕೇಳುವವರು ಯಾರೂ ಇಲ್ಲವೆಂಬ ಪರಿಸ್ಥಿತಿ ಇತ್ತು. ಸರ್ಕಾರಿ ವೈದ್ಯರು ವಾರಕ್ಕೆ ಒಮ್ಮೆ ಮಾತ್ರವೇ ಆಸ್ಪತ್ರೆಗೆ ಬಂದು, ಇಡೀ ವಾರದ ಹಾಜರಾತಿಯನ್ನು ಭರ್ತಿ ಮಾಡಿ, ನಾಪತ್ತೆಯಾಗಿಬಿಡುತ್ತಿದ್ದರು. ವಾರಪೂರ್ತಿ ಸರ್ಕಾರಿ ಆಸ್ಪತ್ರೆಗೆ ಬಾರದ ವೈದ್ಯರು ಖಾಸಗಿ ಆಸ್ಪತ್ರೆಗಳು/ಕ್ಲಿನಿಕ್‌ಗಳಲ್ಲಿ ಕೆಲಸ ಮಾಡಿಕೊಂಡು, ಹೆಚ್ಚು-ಹೆಚ್ಚು ಸಂಪಾದನೆ ಮಾಡುತ್ತಲೇ, ರೋಗಿಗಳಿಂದ ಸುಲಿಗೆ ಮಾಡುತ್ತಿದ್ದರು.
ಅಂತಹದೊಂದು ಪ್ರಕರಣಕ್ಕೆ ಉದಾಹರಣೆ ಎಂಬಂತೆ, 2008ರಲ್ಲಿ ಮಂಡ್ಯದ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ಶಸ್ತ್ರಚಿಕಿತ್ಸೆ ನಡೆದಿತ್ತು. ಅವರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದ ವೈದ್ಯ ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿಯೂ ಕೆಲಸ ಮಾಡುತ್ತಿದ್ದರು. ಶಸ್ತ್ರಚಿಕಿತ್ಸೆ ಮಾಡಿದ ಕೂಡಲೇ ಆ ವೈದ್ಯ ಬೆಂಗಳೂರಿಗೆ ಎಸ್ಕೇಪ್ ಆಗಿದ್ದರು. ಆದರೆ, ಸರಿಯಾದ ಆರೈಕೆ ಸಿಗದೆ ರೋಗಿಯ ಪರಿಸ್ಥಿತಿ ಹೆದಗೆಟ್ಟಿತ್ತು. ನಾಲ್ಕು ದಿನಗಳ ಬಳಿಕ ಮತ್ತೆ ಆಸ್ಪತ್ರೆಗೆ ಬಂದ ವೈದ್ಯ ಮತ್ತೊಂದು ಶಸ್ತ್ರಚಿಕಿತ್ಸೆ ಮಾಡಿ, ಬೆಂಗಳೂರಿಗೆ ಹೋಗಿದ್ದರು. ಸರಿಯಾದ ನಿಗಾ, ಆರೈಕೆ ಸಿಗದೆ ಆ ರೋಗಿ ಸಾವನ್ನಪ್ಪಿದ್ದರು.
ಈ ವರದಿ ಓದಿದ್ದೀರಾ?: ಕೇಂದ್ರದ ಕಾಯ್ದೆ ಒಪ್ಪದವರನ್ನು ಅನಾಗರಿಕರು ಎನ್ನುವುದು ಎಷ್ಟು ಸರಿ?
2006ರಲ್ಲಿ ವೈದ್ಯಕೀಯ ಕಾಲೇಜು ಆಗಿ ಮೇಲ್ದರ್ಜೆಗೆ ಏರಿದ್ದ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ, 2008ರ ವೇಳೆಗೆ ಸುಮಾರು 60ಕ್ಕೂ ಹೆಚ್ಚು ವೈದ್ಯರಿದ್ದರು. ವೈದ್ಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾಗಿ ಕೆಲಸ ಮಾಡದೆ, ರೋಗಿಗಳ ಆರೋಗ್ಯ, ಜೀವದೊಂದಿಗೆ ಚೆಲ್ಲಾಟ ಆಡುತ್ತಿರುವುದರ ವಿರುದ್ಧ ಮಂಡ್ಯದಲ್ಲಿ ‘ಕರ್ನಾಟಕ ಜನಶಕ್ತಿ’ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆದಿದ್ದವು. ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡದೆ, ಹಾಜರಾತಿ ಹಾಕಲು ಮಾತ್ರವೇ ಬರುತ್ತಿದ್ದ ವೈದ್ಯರಿಗೆ ‘ಗುಲಾಬಿ ಹೂವು’ ಕೊಟ್ಟು ಸ್ವಾಗತಿಸಿ, ತರಾಟೆಗೆ ತೆಗೆದುಕೊಂಡು ‘ಕರ್ನಾಟಕ ಜನಶಕ್ತಿ’ ಹೋರಾಟ ರೂಪಿಸಿತ್ತು. ಆಗ, ಸುಮಾರು 19 ವೈದ್ಯರು ಸಂಜೆ ಹಾಜರಾತಿಯನ್ನೇ ಹಾಕದೆ, ಕಾಂಪೌಂಡ್ ಹಾರಿ ಓಡಿಹೋಗಿದ್ದರು.
ಈ ರೀತಿಯಲ್ಲಿ ವೈದ್ಯರು ಕೆಲಸಗಳಿಂದ ತಪ್ಪಿಸಿಕೊಂಡು ಖಾಸಗಿ ಆಸ್ಪತ್ರೆಯಲ್ಲಿ ದುಡಿಯುತ್ತಿದ್ದರು. ವೈದ್ಯರ ಕೆಲಸಗಳ್ಳತನದ ಹಾವಳಿಯನ್ನು ತಪ್ಪಿಸಲು ಬಯೋಮೆಟ್ರಿಕ್ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಆದರೆ, ಅದರಲ್ಲೂ ಕೆಲಸದಿಂದ ತಪ್ಪಿಸಿಕೊಳ್ಳುವ ಮಾರ್ಗವನ್ನು ವೈದ್ಯರು ಹುಡುಕಿಕೊಂಡಿದ್ದರು. ಕೆಲವು ವೈದ್ಯರು ತಮ್ಮ ಬದಲಿಗೆ ತಮ್ಮ ಹೆಸರಿನಲ್ಲಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಕ್ಲರ್ಕ್‌ಗಳ ಹಸ್ತ ಮುದ್ರೆಯನ್ನು ಬಯೋಮೆಟ್ರಿಕ್‌ಗೆ ಕೊಡಿಸಿ, ಅವರು ಬೆಳಗ್ಗೆ ಮತ್ತು ಸಂಜೆ ‘ಹಸ್ತ ಮುದ್ರೆ’ ಒತ್ತಿ ಹೋಗುವಂತೆ ಮಾಡಿಕೊಂಡರೆ, ಇನ್ನು ಕೆಲವರು ಬೆಳಗ್ಗೆ ಬಂದು ‘ಹಸ್ತ ಮುದ್ರೆ’ ಕೊಟ್ಟು ಹತ್ತಿರದ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಕೆಲಸ ಮಾಡುತ್ತಿದ್ದರು. ಮತ್ತೆ ಸಂಜೆ ಬಂದು ‘ಹಸ್ತ ಮುದ್ರೆ’ ಕೊಟ್ಟು ಹೋಗುತ್ತಿದ್ದರು.
ಕೆಲವರಂತೂ ತಾವು ಬೆಳಗ್ಗೆ ವಾಕಿಂಗ್ ಹೋಗುವಾಗ ಆಸ್ಪತ್ರೆಗೆ ಬಂದು ಬಯೋಮೆಟ್ರಿಕ್‌ನಲ್ಲಿ ತಮ್ಮ ಹಾಜರಾತಿ ದಾಖಲಿಸಿ ಹೋಗಿಬಿಡುತ್ತಿದ್ದರು.
ಇದೆಲ್ಲವೂ ಆರೋಗ್ಯ ಇಲಾಖೆಯನ್ನು ಒತ್ತಡಕ್ಕೆ ಸಿಲುಕಿಸಿದೆ. ಅಂದಹಾಗೆ, ಈಗ ಸದನದಲ್ಲಿ ಸರ್ಕಾರಿ ವೈದ್ಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡದೇ ಇರುವುದರ ಬಗ್ಗೆ, ನಾಲ್ಕು ಬಾರಿ ಬಯೋಮೆಟ್ರಿಕ್ ಹಾಜರಾತಿ ಬಗ್ಗೆ ಮಾತನಾಡಿರುವುದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಲ್ಲ, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್. ಅಂದರೆ, ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ವೈದ್ಯರು ಹೆಚ್ಚಾಗಿ ಆಸ್ಪತ್ರೆಯಲ್ಲಿರದೆ, ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳಿಗೆ ಓಡುತ್ತಿದ್ದಾರೆ ಎಂಬುದು ಗಮನಾರ್ಹ.
ಒಂದು ಆಸ್ಪತ್ರೆ, ವೈದ್ಯಕೀಯ ಕಾಲೇಜು ಆಗಿ ಮೇಲ್ದರ್ಜೆಗೆ ಏರಿದರೆ, ಅಲ್ಲಿನ ವೈದ್ಯರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತದೆ. ಮಾತ್ರವಲ್ಲ, ಅವರ ವೇತನವೂ ದುಪ್ಪಟ್ಟಾಗುತ್ತದೆ. ಹೀಗಾಗಿ, ವೈದ್ಯರು ಉತ್ತಮ ಸೇವೆ ಒದಗಿಸಬೇಕೆಂದು ರೋಗಿಗಳು, ಸರ್ಕಾರ ಬಯಸುತ್ತದೆ. ಆದರೆ, ವೈದ್ಯರ ಕಳ್ಳಾಟದಿಂದ ವೈದ್ಯಕೀಯ ಆಸ್ಪತ್ರೆಗಳಲ್ಲಿಯೂ ಸರಿಯಾದ ಆರೋಗ್ಯ ಸೌಲಭ್ಯ ದೊರೆಯದಂತಾಗಿದೆ.
ಸದ್ಯ, ಸರ್ಕಾರ, ವೈದ್ಯರು ತಮ್ಮ 7 ಗಂಟೆಯ ಕೆಲಸದ ಅವಧಿಯಲ್ಲಿ ನಾಲ್ಕು ಬಾರಿ ಬಯೋಮೆಟ್ರಿಕ್ ಹಾಜರಾತಿ ದಾಖಲಿಸಬೇಕು ಎಂಬುದನ್ನು ಕಡ್ಡಾಯಗೊಳಿಸಿದೆ. ಇನ್ನುಮುಂದೆಯಾದರೂ, ವೈದ್ಯರು ತಮ್ಮ ಸೇವಾ ಅವಧಿಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಇರುತ್ತಾರೆಯೇ? ಉತ್ತಮ ಸೇವೆ ಒದಗಿಸುತ್ತಾರೆಯೇ? ಅಥವಾ ಮತ್ತೊಂದು ಕಳ್ಳ ಮಾರ್ಗ ಹುಡುಕಿಕೊಂಡು ಮತ್ತೆ ಖಾಸಗಿ ಆಸ್ಪತ್ರೆಯಲ್ಲಿ ಹಣ ಸಂಪಾದನೆಗೆ ಓಡುತ್ತಾರೆಯೇ? ಮುಂದೆ ಯಾವ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಬಹುದು, ಕಾದುನೋಡಬೇಕಷ್ಟೇ…!
Nwkrtc ಯಲ್ಲಿ 8 ಬಾರಿ ಇದೆ ಸರ್