ಗಂಗಾವತಿ ತಾಲೂಕಿನ ಆನೆಗೊಂದಿ ಮತ್ತು ಕೊಪ್ಪಳ ತಾಲೂಕಿನ ಬಸ್ಸಾಪುರ ಸುತ್ತಮುತ್ತಲಿರುವ ಹೋಂ ಸ್ಟೇ, ರೆಸಾರ್ಟ್ಗಳ ಮೇಲೆ ಸೋಮವಾರ ಜಿಲ್ಲಾ ಪೊಲೀಸ್ ಇಲಾಖೆ ದಾಳಿ ಮಾಡಿದೆ.
ಗಂಗಾವತಿ ತಾಲೂಕಿನ ಸಾಣಾಪುರ ಕೆರೆ ಬಳಿಯಿರುವ ತುಂಗಭದ್ರಾ ಎಡದಂಡೆ ಕಾಲುವೆ ಬಳಿ ವಿದೇಶಿ ಮಹಿಳೆ, ಹೋಂ ಸ್ಟೇ ಮಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಬೆನ್ನಲ್ಲೇ ಎಚ್ಚೆತ್ತ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಅರಸಿದ್ದಿ ನೇತೃತ್ವದಲ್ಲಿ ದಾಳಿ ಮಾಡಿದ್ದು, ಹೋಂ ಸ್ಟೇ, ರೆಸಾರ್ಟ್ಗಳು ವಿದೇಶಿಗರ ಬಗ್ಗೆ ಯಾವುದೇ ಮಾಹಿತಿ ನೀಡದ ಆರೋಪ ಮತ್ತು ಅಕ್ರಮ ಚಟುವಟಿಕೆ ನಡೆಯುತ್ತಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಹೋಂ ಸ್ಟೇ, ರೆಸಾರ್ಟ್‌ನಲ್ಲಿನ ರಿಜಿಸ್ಟರ್ ಪುಸ್ತಕ ಸೇರಿದಂತೆ ವಿವಿಧ ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಹೋಂ ಸ್ಟೇ, ರೆಸಾರ್ಟ್ನಲ್ಲಿ ಅಕ್ರಮ ದಂಧೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಂಪೂರ್ಣ ತಪಾಸಣೆ ನಡೆಸಿದರು. ಬಳಿಕ, ಹೋಂ ಸ್ಟೇ, ರೆಸಾರ್ಟ್ಗಳಲ್ಲಿ ಅಕ್ರಮ ಚಟುವಟಿಕೆ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಮಾಲೀಕರಿಗೆ ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ಶಿರಾಡಿ ಘಾಟ್ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ; ಮಾ.15ರಿಂದ ಏಕಮುಖ ಸಂಚಾರ
ಘಟನೆ ಬಳಿಕ ಎಸ್‌ಪಿ ಡಾ.ರಾಮ್ ಎಲ್ ಅರಸಿದ್ದಿ ಗಂಗಾವತಿಯಲ್ಲಿ ರೆಸಾರ್ಟ್ ಮಾಲೀಕರ ಜತೆ ಸೋಮವಾರ ಸಭೆ ನಡೆಸಿದ್ದರು.ಫಾರ್ಮ್ ಸಿಯನ್ನು ಕಡ್ಡಾಯವಾಗಿ ಭರ್ತಿ ಮಾಡಿ, ವಿದೇಶಿಗರ ಬಗ್ಗೆ ಮಾಹಿತಿ ನೀಡಬೇಕು. ಅನೈತಿಕ ಚಟುವಟಿಕೆಗಳನ್ನು ನಡೆಸಬಾರದೆಂದು ರೆಸಾರ್ಟ್ ಮಾಲೀಕರಿಗೆ ಖಡಕ್ ಸೂಚನೆ ನೀಡಿದ್ದಾರೆ.
ರೆಸಾರ್ಟ್ಗಳಲ್ಲಿ ಗಾಂಜಾ ಪೂರೈಕೆ ಸೇರಿದಂತೆ ಯಾವುದೇ ಅಕ್ರಮ ದಂಧೆ ನಡೆಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಎಚ್ಚರಿಕೆ ನೀಡಿದ್ದರು.