ನಮ್ಮ ಸರ್ಕಾರವನ್ನು ಅಧಿಕಾರಕ್ಕೆ ತಂದಂತಹ ಪಕ್ಷದ ಕಾರ್ಯಕರ್ತರಿಗೆ ಸರ್ಕಾರದ ಕಾರ್ಯಕ್ರಮಗಳ ಮೂಲಕ ಅನುಕೂಲ ಮಾಡಿಕೊಡುವ ಹಾಗೂ ಹುದ್ದೆಗಳನ್ನು ಕೊಡುವ ಹಕ್ಕು ನಮಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡರು.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಶಾಸಕ ಎಂ.ಟಿ.ಕೃಷ್ಣಪ್ಪ ಅವರು, “ಗ್ಯಾರಂಟಿ ಅನುಷ್ಠಾನ ಸಮಿತಿಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಕೂರಿಸಲಾಗಿದೆ. ಅವರಿಗೆ ವೇತನ ನೀಡಲಾಗುತ್ತಿದೆ” ಎನ್ನುವ ಆಕ್ಷೇಪಕ್ಕೆ ಉತ್ತರ ನೀಡಿದರು.
“52 ಸಾವಿರ ಕೋಟಿ ರೂಪಾಯಿಯ ಬೃಹತ್ ಯೋಜನೆ ಜನರಿಗೆ ತಲುಪುತ್ತಿದೆಯೋ ಇಲ್ಲವೋ ಎಂಬುದನ್ನು ಮನೆ, ಮನೆಗೆ ತೆರಳಿ ಪರೀಕ್ಷೆ ಮಾಡಿ. ಜನರಿಗೆ ಉಪಯೋಗವಾಗುತ್ತಿದೆಯೋ ಇಲ್ಲವೋ ಎಂದು ತಿಳಿಯಲು ಕಾರ್ಯಕರ್ತರಿಗೆ ಅವಕಾಶ ಮಾಡಿಕೊಟ್ಟರೆ ಅದನ್ನು ನಿಮ್ಮ ಕೈಯಲ್ಲಿ ತಡೆದುಕೊಳ್ಳಲು ಆಗುತ್ತಿಲ್ಲವಲ್ಲ” ಎಂದು ಲೇವಡಿ ಮಾಡಿದರು.
ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, “187 ಕೋಟಿ ರೂಪಾಯಿ ಸರ್ಕಾರದ ಹಣವನ್ನು ಬಳ್ಳಾರಿಯಲ್ಲಿ ಹಂಚಿದ್ದಾರೆ, ಪಕ್ಷಕ್ಕೆ ಕಾರ್ಯಕರ್ತರಿಗೆ ಬಳಸಿಕೊಂಡಿದ್ದಾರೆ ಎಂದರು. ಈ ಮಾತಿಗೆ ಕೆರಳಿದ ಡಿಸಿಎಂ, “ಈ ವಿಚಾರವನ್ನು ಚರ್ಚೆಗೆ ತೆಗೆದುಕೊಳ್ಳಲಿ, ಇದಕ್ಕೆ ನಾವು ಉತ್ತರ ನೀಡುತ್ತೇವೆ. ಬಜೆಟ್ ಮೇಲೆ ಚರ್ಚೆ ಸಂದರ್ಭ ಈ ವಿಚಾರ ಮಾತನಾಡಿ” ಎಂದರು.
“ಈ ರಾಜ್ಯದ ಜನ ನಮಗೆ 138 ಸ್ಥಾನಗಳನ್ನು ನೀಡಿ ಶಕ್ತಿ ತುಂಬಿದ್ದಾರೆ. ವಿರೋಧ ಪಕ್ಷದ ನಾಯಕರು ಹಾಗೂ ಶಾಸಕರು ಬಂದು ನಮಗೂ ಸಮಿತಿಗಳಲ್ಲಿ ಅಧ್ಯಕ್ಷ, ಸದಸ್ಯ ಸ್ಥಾನ ನೀಡಿ ಎಂದು ಮನವಿ ಮಾಡಿದ್ದಾರೆ. ಇದು ನನ್ನೊಬ್ಬನ ನಿರ್ಧಾರವಲ್ಲ, ಈ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ನಾವು ಎಂದಿಗೂ ನಮ್ಮ ಕಾರ್ಯಕರ್ತರ ಜತೆ ಇದ್ದೇ ಇರುತ್ತೇವೆ” ಎಂದು ಹೇಳಿದರು.
ಈ ವೇಳೆ ವಿಪಕ್ಷಗಳ ಶಾಸಕರು ಗದ್ದಲ ಎಬ್ಬಿಸಿದಾಗ ಶಿವಕುಮಾರ್ ಅವರು,
“ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ
ಗದ್ದಲವ ತುಂಬಿ ಪ್ರಸಿದ್ದನಾಗುತಿಹೆ
ಉದ್ಧರಿಸುವೆನು ಜಗವನೆನ್ನುತಿಹ ಸಖನೆ,
ನಿನ್ನುದ್ಧಾರವೆಷ್ಟಾಯ್ತೊ? – ಮಂಕುತಿಮ್ಮ” ಎಂದು ಡಿವಿಜಿಯವರ ಕವನ ಹೇಳುವ ಮೂಲಕ ತಿರುಗೇಟು ನೀಡಿದರು.
“ನಾವು ಗ್ಯಾರಂಟಿಗಳನ್ನು ವಿರೋಧ ಮಾಡಿಲ್ಲ” ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಹೇಳಿದಾಗ, “ಪ್ರಾರಂಭದಲ್ಲಿ ಗ್ಯಾರಂಟಿಗಳಿಗೆ ವಿರೋಧ ಮಾಡಿದರು. ಆದರೂ ನಾವು ಜಾರಿಗೆ ತಂದೆವು. ಅದು ಜನರಿಗೆ ತಲುಪಿತು. ಪ್ರಧಾನಮಂತ್ರಿಗಳಿಂದ ಹಿಡಿದು ಪ್ರತಿಪಕ್ಷದ ಪ್ರತಿಯೊಬ್ಬರೂ ಗ್ಯಾರಂಟಿ ಯೋಜನೆಗಳಿಗೆ ಟೀಕೆ ಮಾಡಿರುವವರೇ” ಎಂದರು.
ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವ ತನಕ ಗ್ಯಾರಂಟಿ ನಿಲ್ಲಿಸಲ್ಲ
“ನಾವು ಈ ರಾಜ್ಯದ ಬಡಜನತೆಗೆ, ಮಹಿಳೆಯರಿಗೆ ಅನುಕೂಲವಾಗಲಿ ಎಂದು ಗ್ಯಾರಂಟಿ ಮೂಲಕ ಅನುಕೂಲ ಮಾಡಿಕೊಟ್ಟಿದ್ದೇವೆ. ಹೆಣ್ಣು ಕುಟುಂಬದ ಕಣ್ಣು ಎಂದು ಅವರಿಗೆ ಸಹಾಯ ಮಾಡಿದ್ದೇವೆ. ಒಂದು ಸಮಯದಲ್ಲಿ ವಿಪಕ್ಷಗಳು ನಮ್ಮನ್ನು ಹೆದರಿಸಲು ಪ್ರಯತ್ನಪಟ್ಟವು. ಈ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿಇರುವ ತನಕ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲ. ಇದು ನಮ್ಮ ಬದ್ಧತೆ” ಎಂದು ತಿಳಿಸಿದರು.
“ನಮ್ಮ ಜನ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದರು. ಪ್ರತಿಯೊಂದು ಪದಾರ್ಥಗಳ ಬೆಲೆಯೂ ಹೆಚ್ಚಾಗಿತ್ತು. ಆದ ಕಾರಣಕ್ಕೆ ನಮ್ಮ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿತು. ಈ ಯೋಜನೆಗಳಿಗೆ ನೂರಾರು ಟೀಕೆ- ಟಿಪ್ಪಣಿಗಳು ಬಂದವು. ಒಂದು ಕಾಳು ಕಡಿಮೆ ಕೊಟ್ಟರೂ ಸಹ ಸುಮ್ಮನಿರುವುದಿಲ್ಲ ಎಂದು ಯಡಿಯೂರಪ್ಪ ಅವರು ಹೇಳಿದರು. ಇದು ಕಾಂಗ್ರೆಸ್ ಸರ್ಕಾರದಿಂದ ಸಾಧ್ಯವೇ ಎಂದರು. ನಾವು ಅಧಿಕಾರಕ್ಕೆ ಬಂದ ಮೊದಲನೇ ದಿನವೇ ಐದು ಗ್ಯಾರಂಟಿಗಳಿಗೆ ಒಪ್ಪಿಗೆ ಕೊಟ್ಟು ಆದೇಶ ಹೊರಡಿಸಿದೆವು” ಎಂದು ಹೇಳಿದರು.
“ಒಂದು ರಾಜ್ಯದ ಶೇ 20 ರಷ್ಟು ಬಜೆಟ್ ಅಂದರೆ 50 ಸಾವಿರ ಕೋಟಿಯಷ್ಟು ಹಣ ಮೀಸಲು ಇಡಲು ಎಷ್ಟು ಸಮಸ್ಯೆಯಿದೆ ಎನ್ನುವ ಅರಿವು ನಮಗಿದೆ. ಆದರೆ ನಮಗೆ ಜನರ ಕಲ್ಯಾಣ ಮುಖ್ಯ. ಜೀವ ಇದ್ದರೆ ಜೀವನ. ಒಂದು ಗ್ಯಾಸ್ ಸಿಲಿಂಡರ್ ಬೆಲೆ ರೂ. 1,100, ಅಡುಗೆ ಎಣ್ಣೆ ಬೆಲೆ ರೂ.200 ಸೇರಿದಂತೆ, ಸಿಮೆಂಟ್, ಪೆಟ್ರೋಲ್, ಡಿಸೇಲ್ ಬೆಲೆ ಎಲ್ಲವೂ ಗಗನಕ್ಕೆ ಹೋಗಿತ್ತು. ಹೀಗಾಗಿ ಗ್ಯಾರಂಟಿ ಯೋಜನೆ ನೀಡಿದೆವು. ಈ ಗ್ಯಾರಂಟಿಗಳಿಗೆ ಅಂದು ಟೀಕೆ ಮಾಡಿದ ಬಿಜೆಪಿ, ಇಂದು ತನ್ನ ಆಡಳಿತವಿರುವ ದೆಹಲಿ, ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯಗಳು ಸೇರಿದಂತೆ ಅನೇಕ ರಾಜ್ಯಗಳ ಸರ್ಕಾರಗಳು ಗ್ಯಾರಂಟಿಗಳನ್ನು ಜಾರಿಗೊಳಿಸಿವೆ” ಎಂದು ಹೇಳಿದರು.
ಮನೆಹಾಳು ಪದ ಕಡತದಲ್ಲಿ ಇರಲಿ
ಗ್ಯಾರಂಟಿ ಅನುಷ್ಟಾನ ಸಮಿತಿ ಮೂಲಕ ಕಾರ್ಯಕರ್ತರಿಗೆ ವೇತನ ನೀಡಿ ಕಾಂಗ್ರೆಸ್ ʼಮನೆಹಾಳುʼ ಮಾಡುತ್ತಿದೆ ಎನ್ನುವ ಆರ್. ಅಶೋಕ್ ಮಾತಿಗೆ ತಿರುಗೇಟು ನೀಡಿದ ಶಿವಕುಮಾರ್ ಅವರು, “ಆರ್.ಅಶೋಕ್ ಬಳಸಿರುವ ಮನೆಹಾಳು ಪದ ಕಡತಲ್ಲಿಯೇ ಉಳಿಯಲಿ. ನಾವು ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಮನೆ ಕಟ್ಟುತ್ತಿದ್ದೇವೆ. ಆದರೂ ಮನೆಹಾಳು ಪದ ಪ್ರಯೋಗಿಸಿದ್ದಾರೆ” ಎಂದು ಶಿವಕುಮಾರ್ ಅವರು ತಿವಿದರು.