ಮಣಿಪುರದಲ್ಲಿ ಹಿಂಸಾಚಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಗಡಿ ರಾಜ್ಯದಲ್ಲಿ ಪರಿಸ್ಥಿತಿ ಅನಿಶ್ಚಿತವಾಗಿದೆ ಹಾಗೂ ಹೆಚ್ಚು ಆತಂಕಕಾರಿಯಾಗಿದೆ. ನಿಮ್ಮ ಮನ್ ಕಿ ಬಾತ್ ಮೊದಲು ಮಣಿಪುರದ ಬಾತ್ ಅನ್ನು ಸೇರಿಸಬೇಕಿತ್ತು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಹಿಂಸಾಚಾರ ದಿನೇ ದಿನೇ ಭುಗಿಲೇಳುತ್ತಿದೆ. ಆದರೆ ಪ್ರಧಾನಿ ಮೋದಿ ಅವರು ಮೌನಕ್ಕೆ ಶರಣಾಗಿದ್ದಾರೆ. ರಾಜ್ಯಕ್ಕೆ ಸರ್ವಪಕ್ಷ ನಿಯೋಗ ಭೇಟಿ ನೀಡಲು ಅವಕಾಶ ಕೂಡ ನೀಡಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ನಿಮ್ಮ ಸರ್ಕಾರವು ಮಣಿಪುರವನ್ನು ಭಾರತದ ಭಾಗವೆಂದು ಪರಿಗಣಿಸಿದಂತೆ ಕಾಣಿಸುತ್ತಿಲ್ಲ. ಇದು ಸ್ವೀಕಾರಾರ್ಹವಲ್ಲ. ಮಣಿಪುರ ರಾಜ್ಯ ಹೊತ್ತಿ ಉರಿಯುತ್ತಿರುವಾಗ ನಿಮ್ಮ ಸರ್ಕಾರ ನಿದ್ದೆ ಮಾಡುತ್ತಿದೆ. ಮಣಿಪುರದ ಬಾತ್ ಬಗ್ಗೆ ಒಂದೂ ಮಾತು ಹೇಳಿಲ್ಲ. ರಾಜಧರ್ಮವನ್ನು ಪಾಲಿಸಿ ಶಾಂತಿ ಕದಡುವ ಎಲ್ಲ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ” ಪ್ರಧಾನಿಗೆ ಖರ್ಗೆ ಆಗ್ರಹಿಸಿದ್ದಾರೆ.
ಮಣಿಪುರವು ಕಳೆದ 40 ಕ್ಕೂ ಹೆಚ್ಚು ದಿನಗಳಿಂದ ಮಣಿಪುರ ಕುಕಿ- ಮೈತೇಯಿ ಸಮುದಾಯಗಳ ಜನಾಂಗೀಯ ಸಂಘರ್ಷದಿಂದ ನಲುಗುತ್ತಿದೆ. ಸಾವು ನೋವುಗಳು ಹೆಚ್ಚಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ಖುಷ್ಬು ವಿರುದ್ಧ ‘ಹಳೆಯ ಪಾತ್ರೆ’ ಹೇಳಿಕೆ; ಡಿಎಂಕೆ ವಕ್ತಾರ ಉಚ್ಚಾಟನೆ
ಇತ್ತೀಚಿಗೆ ಕೇಂದ್ರ ಸಚಿವರೊಬ್ಬರ ಮನೆಗೆ ಗುಂಪೊಂದು ಬೆಂಕಿ ಹಚ್ಚಿದ್ದರಿಂದ ಪರಿಸ್ಥಿತಿ ಮತ್ತೆ ಹದೆಗೆಟ್ಟಿದೆ. ಹಲವು ಗುಂಪುಗಳು ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆಸುತ್ತಲೇ ಇವೆ. ಕೆಲವು ದಿನಗಳಿಂದ ಬಿಜೆಪಿ ನಾಯಕರ ಮನೆಗಳನ್ನು ಸುಡುವ ಪ್ರಯತ್ನಗಳು ಹೆಚ್ಚಾಗುತ್ತಿವೆ.
ಮೇಟಿ– ಕುಕಿಗಳ ಘರ್ಷಣೆ
ಮೇ 3 ರಂದು ಪರಿಶಿಷ್ಟ ಪಂಗಡದ (ಎಸ್‌ಟಿ) ಸ್ಥಾನಮಾನಕ್ಕಾಗಿ ಮೈತೇಯಿ ಸಮುದಾಯದ ಬೇಡಿಕೆಯನ್ನು ಪ್ರತಿಭಟಿಸಲು ಕಣಿವೆಯ ಜಿಲ್ಲೆಗಳಲ್ಲಿ ಆಯೋಜಿಸಲಾದ ‘ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ’ ನಂತರ ಘರ್ಷಣೆಗಳು ಪ್ರಾರಂಭವಾದವು. ಮಣಿಪುರದ ಜನಸಂಖ್ಯೆಯ ಶೇಕಡ 53 ರಷ್ಟಿರುವ ಮೈತೇಯಿಗಳು ಇಂಫಾಲ್ ಕಣಿವೆಯಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಬುಡಕಟ್ಟು ಜನಾಂಗದ ನಾಗಾಗಳು ಮತ್ತು ಕುಕಿಗಳು ಜನಸಂಖ್ಯೆಯ ಶೇಕಡಾ 40 ರಷ್ಟಿದ್ದಾರೆ ಮತ್ತು ಕಣಿವೆಯ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.
ಜನಾಂಗೀಯ ಹಿಂಸಾಚಾರದಲ್ಲಿ 100 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಪ್ರಸ್ತುತ, ಸುಮಾರು 30,000 ಕೇಂದ್ರ ಭದ್ರತಾ ಸಿಬ್ಬಂದಿಯನ್ನು ಮಣಿಪುರದಲ್ಲಿ ರಾಜ್ಯ ಪೊಲೀಸ್ ಪಡೆಗಳ ಜೊತೆಗೆ ಕಾನೂನು ಮತ್ತು ಸುವ್ಯವಸ್ಥೆ ಕರ್ತವ್ಯಗಳಿಗಾಗಿ ನಿಯೋಜಿಸಲಾಗಿದೆ. ರಾಜ್ಯದಲ್ಲಿ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿದೆ.