ಗಿರವಿ ಇಟ್ಟಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನವನ್ನು ಬ್ಯಾಂಕ್‌ನ ಹೌಸ್ ಕೀಪರ್ ಕದ್ದು ಪರಾರಿಯಾಗಿರುವ ಘಟನೆ ಜಿಲ್ಲೆಯ ಅರಕಲಗೂಡು ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ನಡೆದಿದೆ.
ಬೆಳವಾಡಿ ಗ್ರಾಮದ ಎಸ್‌ಬಿಐ ಬ್ಯಾಂಕ್‌ನಲ್ಲಿ ಲವ ಬಿ ಎನ್ ಎಂಬಾತ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ. ಅಸಲಿ ಚಿನ್ನದ ಜಾಗದಲ್ಲಿ ನಕಲಿ ಚಿನ್ನ ಇಟ್ಟು, ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಲಪಟಾಯಿಸಿ ಪರಾರಿಯಾಗಿದ್ದಾನೆ. ಆರೋಪಿಯನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.
ಹೊರಗುತ್ತಿಗೆ ನೌಕರ ಲವ ಬಿ ಎನ್ ಎಂಬಾತನ ವಿರುದ್ಧ ಬ್ಯಾಂಕ್ ದೂರು ದಾಖಲಿಸಿದೆ. ಈತನ ವಿರುದ್ಧ ಒಂದು ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನ ಕಳ್ಳತನ ಮಾಡಲಾದ ಆರೋಪ ಇದೆ. ಮೇ 5ರಂದು ಬ್ಯಾಂಕಿನ ಗಿರವಿ ವಿಭಾಗದ ಚಿನ್ನ ಪರಿಶೀಲನೆ ವೇಳೆ ಸಿಬ್ಬಂದಿಯ ವಂಚನೆ ಬಯಲಾಗಿದೆ.

ಬ್ಯಾಂಕ್ ಲಾಕರ್‌ನಲ್ಲಿ ಚಿನ್ನ ಇರುವ 30 ಪ್ಯಾಕೆಟ್‌ಗಳಲ್ಲಿ 18 ಪ್ಯಾಕೆಟ್ ಇದ್ದ ಚಿನ್ನವನ್ನು ಎಗರಿಸಿ, ಅವುಗಳಲ್ಲಿ ನಕಲಿ ಚಿನ್ನವನ್ನು ಇಟ್ಟ ಕಾರಣ ವಂಚನೆಯು ತಡವಾಗಿ ಬೆಳಕಿಗೆ ಬಂದಿದೆ. 2013ರಿಂದಲೂ ಬ್ಯಾಂಕ್ ಹೌಸ್ ಕೀಪರ್ ಆಗಿ ಲವ ಕೆಲಸ ಮಾಡುತ್ತಿದ್ದ. ಬ್ಯಾಂಕ್ ಅಧಿಕಾರಿಗಳ ವಿಶ್ವಾಸ ಗಳಿಸಿದ್ದ ಈತ ಚಿನ್ನದ ಸಾಲದ ದಸ್ತಾವೇಜು ಉಸ್ತುವಾರಿಯನ್ನೂ ವಹಿಸಿದ್ದ. ಆದರೀಗ ಚಿನ್ನದ ದಸ್ತಾವೇಜು ಮಾಡುವ ಬದಲು ಆತನೇ ಚಿನ್ನ ಕದ್ದು ಪರಾರಿಯಾಗಿದ್ದಾನೆ.
ಈ ಸುದ್ದಿ ಓದಿದ್ದೀರಾ? ಹೊರಗುತ್ತಿಗೆ ನೌಕರರಿಗೂ ನೇರಪಾವತಿ ಖಚಿತ; ಪೌರಾಡಳಿತ ಸಚಿವ ರಹೀಂಖಾನ್ ಭರವಸೆ
ಕೊಣನೂರು ಪೊಲೀಸ್ ಠಾಣೆಯಲ್ಲಿ ಎಸ್‌ಬಿಐ ಅನುರಾಧಾ ಅವರು ದೂರು ದಾಖಲಿಸಿದ್ದಾರೆ. ಎರಡು ಪ್ಯಾಕೆಟ್ ಚಿನ್ನವನ್ನು ಸಂಪೂರ್ಣವಾಗಿ ಎಗರಿಸಿ, 10 ಪ್ಯಾಕೆಟ್‌ಗಳಲ್ಲಿ ನಕಲಿ ಚಿನ್ನವನ್ನು ತುಂಬಿದ್ದಾನೆ. ಎರಡು ಪ್ಯಾಕೆಟ್ ಚಿನ್ನದ ಕೊರತೆ ಕಂಡಿದ್ದನ್ನು ನೋಡಿ ಪರಿಶೀಲನೆ ನಡೆಸಿದಾಗ ಕಳ್ಳತನ ಬಯಲಾಗಿದೆ. ಇದರಿಂದಾಗಿ ಸುತ್ತಮುತ್ತಲಿನ ಗ್ರಾಮಸ್ಥರು ಬ್ಯಾಂಕ್‌ನಲ್ಲಿ ಚಿನ್ನವನ್ನು ಗಿರವಿ ಇಡಲು ಭಯಪಡುವಂತಾಗಿದೆ ಎಂದು ತಿಳಿದುಬಂದಿದೆ.