ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆಗೆ ಒತ್ತಾಯಿಸಿ ದೇಶದಾದ್ಯಂತ ಪ್ರತಿಭಟನೆ ನಡೆಸಲು ಯುಎಫ್ಬಿಯು – ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯು ಕರೆ ನೀಡಿರುವ ಹಿನ್ನಲೆಯಲ್ಲಿ ದಾವಣಗೆರೆಯ ಸಿದ್ದವೀರಪ್ಪ ಬಡಾವಣೆಯ ಕೆನರಾ ಬ್ಯಾಂಕಿನ ಪ್ರಾದೇಶಿಕ ಕಛೇರಿ ಹಾಗೂ ದಾವಣಗೆರೆ ಪಿ.ಬಿ.ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ಕಛೇರಿಯ ಮುಂಭಾಗ ದಾವಣಗೆರೆ ಜಿಲ್ಲಾ ಘಟಕದ ವತಿಯಿಂದ ಬ್ಯಾಂಕ್ ನೌಕರರು ಪ್ರತಿಭಟನೆ ನಡೆಸಿದರು.
ಕೆನರಾ ಬ್ಯಾಂಕ್ ಬಳಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯ ಜಿಲ್ಲಾ ಸಂಚಾಲಕ ಹಾಗೂ ಕೆನರಾ ಬ್ಯಾಂಕ್ ನೌಕರರ ಯೂನಿಯನ್ನ ರಾಷ್ಟ್ರೀಯ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ,”ಬ್ಯಾಂಕುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಶೀಘ್ರ ನೇಮಕಾತಿ ಮಾಡಬೇಕು, ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ತರಬೇಕು, ತಾತ್ಕಾಲಿಕವಾಗಿ ಕೆಲಸ ಮಾಡುತ್ತಿರುವ ನೌಕರರನ್ನು ಖಾಯಂಗೊಳಿಸಬೇಕು” ಎಂದು ಸರ್ಕಾರವನ್ನು ಒತ್ತಾಯಿಸಿದರು.

ಕೆನರಾ ಬ್ಯಾಂಕ್ ಅಧಿಕಾರಿಗಳ ಸಂಘಟನೆಯ ಪ್ರಾದೇಶಿಕ ಕಾರ್ಯದರ್ಶಿ ಪ್ರದೀಪ್ ಪಾಟೀಲ್ ಮಾತನಾಡಿ, “ಬ್ಯಾಂಕುಗಳಲ್ಲಿ ಅಗತ್ಯ ಪ್ರಮಾಣದ ನೌಕರರ ನೇಮಕಾತಿ ಮಾಡುವ ಮೂಲಕ ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ಒದಗಿಸಬೇಕು ಹಾಗೂ ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ಬರಬೇಕು ಎನ್ನುವುದು ನಮ್ಮ ಹಲವಾರು ವರ್ಷಗಳ ಬೇಡಿಕೆಯಾಗಿದೆ. ಈ ಬಗ್ಗೆ ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ಹಾಗೂ ಕಾರ್ಮಿಕ ಸಂಘಟನೆಗಳ ನಡುವೆ ಈಗಾಗಲೇ ಒಪ್ಪಂದ ಆಗಿದ್ದರೂ ಸಹ ಕೇಂದ್ರ ಸರಕಾರ ಈ ಕುರಿತು ಮೌನ ತಾಳಿದೆ” ಎಂದು ಆರೋಪಿಸಿದರು.
ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಕಾರ್ಯದರ್ಶಿ ಹೆಚ್.ಎಸ್.ತಿಪ್ಪೇಸ್ವಾಮಿ ಮಾತನಾಡಿ “ಸರಕಾರವು ಈ ಕೂಡಲೇ ಮಧ್ಯಪ್ರವೇಶಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದರೆ ಮಾರ್ಚ್ 24 ಮತ್ತು 25 ರಂದು ಅಖಿಲ ಭಾರತ ಬ್ಯಾಂಕ್ ಮುಷ್ಕರ ನಡೆಯಲಿದೆ” ಎಂದು ಎಚ್ಚರಿಸಿದರು.
ಪಿಬಿ ರಸ್ತೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಂಬಾಗ ನೆಡೆಸಿದ ಪ್ರತಿಭಟನೆಯಲ್ಲಿ ಬ್ಯಾಂಕ್ ಅಧಿಕಾರಿಗಳ ಸಂಘಟನೆಯ ಪ್ರಾದೇಶಿಕ ಕಾರ್ಯದರ್ಶಿ ಸುನಿಲ್ ಎಸ್ ಮ್ಯಾಗೇರಿ ಮಾತನಾಡಿ,”ಬ್ಯಾಂಕುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡದಿರುವುದರಿಂದ ಒಂದೆಡೆ ಗ್ರಾಹಕರಿಗೆ ಸಮರ್ಪಕ ಸೇವೆ ನೀಡಲು ಸಾಧ್ಯವಾಗದೇ ಮತ್ತೊಂದೆಡೆ ಉದ್ಯೋಗಿಗಳು ತೀವ್ರ ಒತ್ತಡದಲ್ಲಿ ಕೆಲಸ ಮಾಡುವಂತಾಗಿದೆ. ಹಾಗಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸರಕಾರವು ಕೂಡಲೇ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಬೇಕು ಹಾಗೂ ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ಬರಬೇಕು” ಎಂದು ಒತ್ತಾಯಿಸಿದರು.

ಎನ್ಸಿಬಿಇ ಸಂಘಟನೆಯ ಮುಖಂಡ ಎಂ.ಸಿ.ವಾಗೀಶ್ ಮಾತನಾಡಿ, “ಬ್ಯಾಂಕಿಂಗ್ ಕಾಯಿದೆಗೆ ಸುಧಾರಣೆ ಹೆಸರಿನಲ್ಲಿ ತಿದ್ದುಪಡಿ ತರುವ ಮೂಲಕ ಬ್ಯಾಂಕ್ ಉದ್ಯೋಗಿಗಳ ಉದ್ಯೋಗ ಭದ್ರತೆಯ ಮೇಲೆ ದಾಳಿ ಮಾಡಲಾಗುತ್ತಿದೆ. ಇದು ನಿಲ್ಲಬೇಕು ಹಾಗೂ ಸರಕಾರವು ಬ್ಯಾಂಕ್ ಕಾರ್ಮಿಕ ವಿರೋಧಿ ನೀತಿಯನ್ನು ಕೈಬಿಡಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನೌಕರರು ಮತ್ತು ಅಧಿಕಾರಿಗಳು ಮಾರ್ಚ್ 24 ಮತ್ತು 25 ರಂದು ನಡೆಯುವ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಬೆಂಬಲ ನೀಡಿ ಪ್ರತಿಭಟನೆ ನಡೆಸಲು ನಿರ್ಧರಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಪ್ರಾಮಾಣಿಕ ಅಧಿಕಾರಿಗಳಿಂದ ಡಿಜಿಟಲ್ ಅಳತೆ, ಸರ್ಕಾರಿ ಒತ್ತುವರಿ ತೆರವುಗೊಳಿಸಿ; ಕಬ್ಬೂರು ಗ್ರಾಮಸ್ಥರ ಆಗ್ರಹ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಂಬಾಗದ ಪ್ರತಿಭಟನೆಯಲ್ಲಿ ಎಂ.ಪಿ.ಕಿರಣ್ಕುಮಾರ್, ಸಿದ್ಧಾರ್ಥ್, ಎಂ.ಡಿ.ವಿದ್ಯಾಸಾಗರ್, ಎಸ್.ಪ್ರಶಾಂತ್, ಅಣ್ಣಪ್ಪ ನಂದಾ, ದುರ್ಗಪ್ಪ, ಶಶಿಧರ ಹೆಗಡೆ, ಮೋಹನ್ ಕುಮಾರ್ ದೊಡ್ಡಮನಿ, ಶ್ರೀನಿವಾಸ್, ಮಧುಸ್ವಿನಿ ದೇಸಾಯಿ, ದುಶ್ಯಂತ್ಕುಮಾರ್ ಆರ್ ಮತ್ತಿತರರು ಹಾಗೂ ಕೆನರಾ ಬ್ಯಾಂಕ್ ಮುಂಬಾಗ ನೆಡೆಸಿದ ಪ್ರತಿಭಟನೆಯಲ್ಲಿ ಹೆಚ್.ಸುಗುರಪ್ಪ, ಅನುರಾಧಾ ಸಂಪನ್ನ ಮುತಾಲಿಕ್, ಪರಶುರಾಮ, ಕೆ.ಗಂಗಾಧರ್, ವಿನೋದ್ ವರ್ಣೇಕರ್, ಸಿದ್ದಲಿಂಗೇಶ್ ಕೋರಿ, ಎಸ್.ಪ್ರಶಾಂತ್, ಡಿ.ಹರ್ಷದ್, ಎಲ್.ಗೋಪಾಲಕೃಷ್ಣ, ವಿ.ಆರ್.ಹರೀಶ್, ಅನಿಲ್ ಟಿ.ಎಸ್. ಗೋಪಾಲಕೃಷ್ಣ, ಬಿ.ಎ.ಸುರೇಶ್, ರಶ್ಮಿ ನಾಗರಾಜ್, ಕೆ.ಜಯಲಕ್ಷ್ಮಿ, ವಿಶ್ವಚೇತನ್, ಆಶಾ ವಿದ್ಯಾಸಾಗರ್, ಸುಷ್ಮ ಜೋಷಿ, ರೋಹಿಣಿ ಮಂಡ್ರೆ, ಎಲ್.ಲತಾ, ನಾಗರತ್ನಮ್ಮ, ರೇಣುಕಮ್ಮ ಮತ್ತಿತರರು ಪಾಲ್ಗೊಂಡಿದ್ದರು.