ನಟರಿಗೆ ರಾಜಕಾರಣದಲ್ಲಿ ಗೌರವ ಇರಲ್ಲ ಎಂದ ರಾಜಣ್ಣ
ವಿರೋಧ ಕಟ್ಟಿಕೊಳ್ಳಬೇಡಿ ಎಂದ ವಾಲ್ಮೀಕಿ ಸಮುದಾಯದ ನಾಯಕ
ಸ್ಯಾಂಡಲ್‌ವುಡ್‌ನ ಸ್ಟಾರ್ ನಟ ಕಿಚ್ಚ ಸುದೀಪ್ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿಯನ್ನು ಬೆಂಬಲಿಸಿದ್ದರು. ಆದರೆ, ಅವರ ಅಬ್ಬರದ ಪ್ರಚಾರದಿಂದ ಬಿಜೆಪಿಗೆ ಹೇಳಿಕೊಳ್ಳುವಂತಹ ಲಾಭ ಆಗಿರಲಿಲ್ಲ. ಕಿಚ್ಚ ರಾಜಕೀಯ ಪಕ್ಷವೊಂದನ್ನು ಬೆಂಬಲಿಸಿದ್ದಕ್ಕೆ ಅಭಿಮಾನಿಗಳು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಸಚಿವ, ವಾಲ್ಮಿಕಿ ಸಮುದಾಯದ ಮುಖಂಡ ಕೆ.ಎನ್ ರಾಜಣ್ಣ ಸುದೀಪ್ ಅವರಿಗೆ ಕಿವಿ ಮಾತು ಹೇಳಿದ್ದಾರೆ.
ಭಾನುವಾರ ಹರಿಹರ ತಾಲ್ಲೂಕಿನ ರಾಜನಹಳ್ಳಿ ವಾಲ್ಮಿಕಿ ಪೀಠಕ್ಕೆ ಭೇಟಿ ನೀಡಿದ್ದ ರಾಜಣ್ಣ ಸುದೀಪ್ ಕುರಿತು ಮಾಧ್ಯಮದವರಿಂದ ಎದುರಾದ ಪ್ರಶ್ನೆಗೆ ಉತ್ತಿರಿಸಿದ್ದು, “ರಾಜ್‌ಕುಮಾರ್ ಅವರು ಮನಸ್ಸು ಮಾಡಿದ್ದರೆ ರಾಜಕೀಯಕ್ಕೆ ಬಂದು ಏನು ಬೇಕಾದರೂ ಆಗಬಹುದಿತ್ತು. ಆದರೆ, ಅವರು ರಾಜಕಾರಣದಿಂದ ದೂರ ಉಳಿದಿದ್ದರಿಂದ ಎಲ್ಲ ಸಮುದಾಯದವರು ಅವರನ್ನು ದೇವತಾಮನುಷ್ಯ ಎಂದು ಗುರುತಿಸುತ್ತಾರೆ. ಸಿನಿಮಾ ನಟರು ರಾಜಕೀಯಕ್ಕೆ ಬರುವುದರಿಂದ ಜನರಿಗೆ ಅವರ ಮೇಲಿರುವ ಗೌರವ ಕಡಿಮೆಯಾಗುತ್ತದೆಯೇ ಹೊರತು ಹೆಚ್ಚುವುದಿಲ್ಲ. ಸುದೀಪ್ ನಮ್ಮ ಸಮಾಜದ ಮೇರು ನಟ. ಈ ಹಿನ್ನೆಲೆಯಲ್ಲಿ ನಾನು ಅವರಿಗೆ ಕಿವಿಮಾತು ಹೇಳುವುದೇನೆಂದರೆ, ನೀವು ಸಮುದಾಯದ ಅಭ್ಯರ್ಥಿಗಳ ಪರ ಅಥವಾ ವಿರೋಧವಾಗಿ ಗುರುತಿಸಿಕೊಂಡಾಗ ಸಮುದಾಯದವರಿಗೂ ಕೂಡ ನಿಮ್ಮ ಬಗ್ಗೆ ಪರ ಮತ್ತು ವಿರೋಧದ ಅಭಿಪ್ರಾಯಗಳು ಹುಟ್ಟುತ್ತವೆ ಎಂಬ ಎಚ್ಚರಿಕೆ ಇರಲಿ” ಎಂದಿದ್ದಾರೆ.
ಬೊಮ್ಮಾಯಿ ಮಾಮನ ಮೇಲಿರುವ ಪ್ರೀತಿಯಿಂದಾಗಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತಿದ್ದೇನೆ ಎಂದಿದ್ದ ಸುದೀಪ್, ಶ್ರೀರಾಮುಲು, ಬಿ.ಸಿ ಪಾಟೀಲ್, ವಿ.ಸೋಮಣ್ಣ, ಕೆ.ಸುಧಾಕರ್, ವಿಜಯೇಂದ್ರ ಸೇರಿದಂತೆ 40 ಹೆಚ್ಚು ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು. ಆದರೆ, ಆ ಪೈಕಿ 30ಕ್ಕೂ ಹೆಚ್ಚು ಮಂದಿ ಸೋಲನುಭವಿಸಿದ್ದರು. ಕೇವಲ 9 ಮಂದಿ ಮಾತ್ರ ಗೆಲುವು ಸಾಧಿಸಿದ್ದರು.
ಈ ಸುದ್ದಿ ಓದಿದ್ದೀರಾ? ಪಠ್ಯ ಪರಿಷ್ಕರಣೆ ಮಾಡುವುದು ತಪ್ಪೇ? ಗೀತಾ ಶಿವರಾಜ್‌ಕುಮಾರ್
ಸುದೀಪ್ ಬೆಂಬಲಿಸಿದ್ದ ಅಭ್ಯರ್ಥಿಗಳು ಹೀನಾಯವಾಗಿ ಸೋತ ಬೆನ್ನಲ್ಲೇ ನಟನ ತಾರ ವರ್ಚಸ್ಸು ಬಿಜೆಪಿಗೆ ಸಹಕಾರಿಯಾಗಲಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಅನುಭವಿಸುತ್ತಲೇ ಸೋಲಿನ ಹೊಣೆ ಹೊತ್ತುಕೊಂಡಿದ್ದ ಬಸವರಾಜ ಬೊಮ್ಮಾಯಿ, “ಸುದೀಪ್ ಸ್ನೇಹಪೂರ್ವಕವಾಗಿ ನಮ್ಮ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದರಷ್ಟೇ ಪಕ್ಷದ ಸೋಲಿಗೆ ಅವರು ಹೊಣೆಯಲ್ಲ” ಎಂದಿದ್ದರು.