ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಮಂಗಳವಾರ ಜಿಲ್ಲೆಯ ಗುಬ್ಬಿ ಪಟ್ಟಣದ ಬೆಂಚಗೆರೆ ರೈಲ್ವೇ ಗೇಟ್ ಬಳಿ ನಿರ್ಮಾಣ ಮಾಡಲು ಉದ್ದೇಶಿಸಿರುವ ರೈಲ್ವೆ ಮೇಲ್ಸೇತುವೆ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.
ರೈಲು ಚಲಿಸುವಾಗ ರೈಲ್ವೆ ಗೇಟ್ ಮುಚ್ಚುವುದರಿಂದ ಸುಮಾರು 2 ಕಿ.ಮೀ.ನಷ್ಟು ವಾಹನ ದಟ್ಟಣೆ ಉಂಟಾಗಿ ವಾಹನ ಸಂಚಾರ ಸಮಸ್ಯೆ ಎದುರಾಗಿದೆ ಎಂದು ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ತ್ವರಿತವಾಗಿ ಸೇತುವೆ ನಿರ್ಮಾಣ ಪ್ರಾರಂಭವಾಗಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ಜನರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಉದ್ದೇಶದಿಂದ ಸೇತುವೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಸೇತುವೆ ನಿರ್ಮಾಣಕ್ಕಾಗಿ ಒಟ್ಟು 1.6 ಎಕರೆ ಭೂಸ್ವಾಧೀನ ಅಗತ್ಯವಿದ್ದು, ಆದಷ್ಟು ಬೇಗ ಭೂಸ್ವಾಧೀನಪಡಿಸಿಕೊಂಡು ಭೂಮಾಲೀಕರಿಗೆ ಪರಿಹಾರ ನೀಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶೀಘ್ರ ಭೂಸ್ವಾಧೀನ ಪ್ರಕ್ರಿಯೆ ಮುಗಿಸಿ, ಕಾಮಗಾರಿಗೆ ಅನುಮೋದನೆ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಥಳೀಯರಿಗೆ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿ ರೇಣುಕಾ ಪ್ರಸಾದ್ ಜಂಬಗಿ, ಭೂಮಾಪನ ಮೇಲ್ವಿಚಾರಕ ಕೃಷ್ಣ ಕುಮಾರ್, ಗುಬ್ಬಿ ತಾಲೂಕಿನ ತಹಶೀಲ್ದಾರ್ ಆರತಿ ಬಿ., ರೈಲ್ವೆ ಕಾರ್ಯನಿರ್ವಾಹಕ ಎಂಜಿನಿಯರ್ ಜಗದೀಶ್ ಸಾಯಿ ಸೇರಿದಂತೆ ಮತ್ತಿತರ ಅಧಿಕಾರಿಗಳು ಇದ್ದರು.