ಕಲಬುರಗಿ ಮಹಾನಗರದ ಅಭಿವೃದ್ಧಿಗೆ ನೀಲಿ ನಕ್ಷೆಯನ್ನು ಸಿದ್ಧಪಡಿಸಿ ಅದಕ್ಕೆ ಪೂರಕವಾಗಿ ಕಾಲಮಿತಿಯ ಯೋಜನೆಗಳನ್ನು ಹಮ್ಮಿಕೊಳ್ಳಬೇಕು ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ವತಿಯಿಂದ ಆಗ್ರಹಿಸಿದರು.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿಯವರ ನೇತೃತ್ವದಲ್ಲಿ ಕಲಬುರಗಿ ದಕ್ಷಿಣ ಮತ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರ ನಿವಾಸಕ್ಕೆ ನಿಯೋಗದ ಮೂಲಕ ಭೇಟಿ ಮಾಡಿ ಕಲಬುರಗಿ ಮಹಾನಗರದ ಸರ್ವಾಂಗೀಣ ಅಭಿವೃದ್ಧಿಗೆ ಸಮಿತಿಯಿಂದ 21 ಮಹತ್ವದ ಅಂಶಗಳ ಪ್ರಸ್ತಾವನೆಯನ್ನು ಸಲ್ಲಿಸಿ ಚರ್ಚಿಸಿದರು.
“ಕಲಬುರಗಿ ಮಹಾನಗರದ ಎಲ್ಲ ಬಡಾವಣೆಗಳಿಗೆ ಮುಖ್ಯವಾಗಿ ಮೂಲಭೂತ ಸೌಕರ್ಯಗಳಾದ ಶುದ್ಧ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ರಸ್ತೆಗಳ ಅಗಲಿಕರಣ ಮತ್ತು ಹೊಸ ರಸ್ತೆಗಳ ನಿರ್ಮಾಣ, ವಿದ್ಯುತ್ ದೀಪಗಳ ವ್ಯವಸ್ಥೆ, ಉದ್ಯಾನವನಗಳ ನಿರ್ಮಾಣ, ಶೌಚಾಲಯಗಳ ನಿರ್ಮಾಣ, ಪಾದಚಾರಿ ಮಾರ್ಗ ನಿರ್ಮಾಣ ಸೇರಿದಂತೆ ಹಲವು ಯೋಜನೆ ಕೈಗೊಂಡು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು” ಎಂದು ಒತ್ತಾಯಿಸಿದರು.
“ಎಲ್ಲ ವಾರ್ಡುಗಳಿಗೆ ದಿನದ 24 ಗಂಟೆಯೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಕಾಲಮಿತಿಯಲ್ಲಿ ಕಾರ್ಯಾಚರಣೆಯ ಕ್ರಮ ಕೈಗೊಳ್ಳಬೇಕು. (2014ರಲ್ಲಿಯೇ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗಿದೆ). ಕಲಬುರಗಿ ಮಹಾನಗರ ಪಾಲಿಕೆ ಏಕಪಕ್ಷೀಯವಾಗಿ ಆಸ್ತಿ ಕರ ಹೆಚ್ಚಿಸಿರುವ ಬಗ್ಗೆ ಪುನ ಪರಿಶೀಲಿಸಿ ಕರವನ್ನು ಹಿಂದಿನ ದರಕ್ಕೆ ನಿಗದಿ ಮಾಡಬೇಕು. ಕರ ಹೆಚ್ಚಿಸುವಾಗ ವಾಡಿಕೆಯಂತೆ ಜನರಿಂದ ಮತ್ತು ಜನಪ್ರತಿನಿಧಿಗಳಿಂದ ಸಲಹೆ ಪಡೆದು ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
“ಕಲಬುರಗಿಯಲ್ಲಿ ಜನದಟ್ಟಣೆ ಕಡಿಮೆ ಮಾಡಲು ಉದ್ಯೋಗ ಸೃಷ್ಟಿಗೆ ಹಾಗೂ ಬಡ, ಮಧ್ಯಮ ವರ್ಗದವರಿಗೆ ಸ್ವಂತ ಮನೆ, ಸ್ವಂತ ಉದ್ಯೋಗಕ್ಕಾಗಿ ಕಲಬುರಗಿಯಲ್ಲಿ ನವನಗರ ನಿರ್ಮಾಣ ಮಾಡಬೇಕು. ಕಲಬುರಗಿ ಮಹಾನಗರದ ಕನಿಷ್ಟ ಐದು ಜನದಟ್ಟಣೆ ಪ್ರದೇಶಗಳಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಬೇಕು(ರಾಮಮಂದಿರ, ಬಸ್ ನಿಲ್ದಾಣ, ಹುಮನಾಬಾದ್ ಬೇಸ್, ಖರ್ಗೆ ಪೆಟ್ರೋಲ್ ಪಂಪ್ ಪಟೇಲ್ ವೃತ್ತ ಮುಂತಾದ ಕಡೆ) ಎಂದು ಒತ್ತಾಯಿಸಿದರು.
“ಸ್ಮಾರ್ಟ್ ಸಿಟಿಗೆ ಕೈಗೊಳ್ಳಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಂಡು ಸ್ಮಾರ್ಟ ಸಿಟಿ ದರ್ಜೆಗೆ ತರಬೇಕು ಎಂಬುದು ಸೇರಿದಂತೆ ಒಟ್ಟು 21 ಅಂಶಗಳ ಪ್ರಸ್ತಾವನೆಯನ್ನು ಪರಿಶೀಲಿಸಿ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು. ಈ ಅಂಶಗಳನ್ನು ಕಾಲಮಿತಿಯಲ್ಲಿ ಈಡೇರಿಸುವ ಬಗ್ಗೆ ತಾವು ಮುತುವರ್ಜಿ ವಹಿಸಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಆಸ್ಪತ್ರೆಗಳಲ್ಲಿ ಸೌಲಭ್ಯಗಳ ಕೊರತೆ; ಅಧಿಕಾರಿಗಳಿಗೆ ಲೋಕಾಯುಕ್ತ ತರಾಟೆ
“ಕಲಬುರಗಿ ಮಹಾನಗರದ ರಚನಾತ್ಮಕ ಪ್ರಗತಿಗೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಲ್ಲಿಸಿದ ಮಹತ್ವದ ಅಂಶಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆರವರ ಜೊತೆ ಸಮಿತಿಯ ಮುಖಂಡರ ಉಪಸ್ಥಿತಿಯಲ್ಲಿ ಚರ್ಚಿಸಿ ಈ ಮಹತ್ವದ ಅಂಶಗಳ ಅನುಷ್ಠಾನದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು” ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಅವರು ಸಮಿತಿಯ ನಿಯೋಗಕ್ಕೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಮಿತಿಯ ಮುಖಂಡರು ಡಾ.ಮಾಜಿದ್ ದಾಗಿ ಜ್ಞಾನಮಿತ್ರ ಸಾಮವೆಲ್, ಕಲ್ಯಾಣರಾವ ಪಾಟೀಲ, ಅಬ್ದುಲ ರಹೀಮ್ ಭೀಮರಾಯ ಕಂದಳ್ಳಿ, ಅಸ್ಲಂ ಚೌಂಗೆ, ಶಿವಾನಂದ ಬಿರಾದಾರ, ಮಲ್ಲಿನಾಥ ಸಂಗಶೆಟ್ಟಿ, ಸಾಲೋಮನ್ ದಿವಾಕರ್, ಸಾಬಿರ್ ಅಲಿ, ಮಲ್ಲಿಕಾರ್ಜುನ ಭೂಸನೂರ, ಸಾಜಿದ್ ಅಲಿ ರಂಜೋಳಿ, ಬೀಮಶೆಟ್ಟಿ ಮುಕ್ಕಾ, ಶಿವಾನಂದ ಕಾಂದೆ, ಶರಣಬಸಪ್ಪಾ ಕುರಿಕೋಟಾ, ಗೌತಮ್ ಕಾಂಬಳೆ, ಮೈತಾಬ್ ಸಾಬ್, ಮಹ್ಮದ್ ಗೌಸ್, ಮಹ್ಮದ್ ಪಾಶಾಮಿಯಾ, ಜಿಲಾನಿ ಖಾದ್ರಿ ಸೇರಿದಂತೆ ಸಮಿತಿಯ ಬಹತೇಕರು ಇದ್ದರು.