ಗೋರಖ್‍ಪುರದ ಗೀತಾ ಪ್ರೆಸ್‍ಗೆ 2021ನೇ ಸಾಲಿನ ಗಾಂಧಿ ಶಾಂತಿ ಪ್ರಶಸ್ತಿಯನ್ನು ನೀಡಲು ಮುಂದಾಗಿರುವ ಕೇಂದ್ರದ ನಿರ್ಧಾರವನ್ನು ಕಾಂಗ್ರೆಸ್ ಟೀಕಿಸಿದೆ.
ಈ ಬಗ್ಗೆ ಹಿರಿಯ ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್ ಟ್ವೀಟ್ ಮಾಡಿದ್ದು, 2021 ನೇ ಸಾಲಿನ ಗಾಂಧಿ ಶಾಂತಿ ಪ್ರಶಸ್ತಿಯನ್ನು ಗೀತಾ ಪ್ರೆಸ್‍ಗೆ ನೀಡುವುದು ಸಾವರ್ಕರ್ ಮತ್ತು ಗೋಡ್ಸೆಗೆ ಪ್ರಶಸ್ತಿ ನೀಡಿದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಈ ನಿರ್ಧಾರವು ನಿಜವಾಗಿಯೂ ಹಾಸ್ಯಾಸ್ಪದವಾಗಿದೆ. ಅಕ್ಷಯ ಮುಕುಲ್ ಬರೆದ ಗೀತಾ ಪ್ರೆಸ್ ಮತ್ತು ಹಿಂದೂ ಇಂಡಿಯಾದ ಮೇಕಿಂಗ್‍ನ ಕವರ್ ಪೇಜ್ ಅನ್ನು ಜೈರಾಂ ರಮೇಶ್ ಹಂಚಿಕೊಂಡಿದ್ದು, ಅಕ್ಷಯ ಮುಕುಲ್ ಅವರು ಮಹಾತ್ಮ ಗಾಂಧಿ ಕೈಗೊಂಡ ಸ್ವಾತಂತ್ರ್ಯ ಹೋರಾಟಗಳನ್ನು ಟೀಕಿಸಿದ್ದನ್ನು ಬಹಿರಂಗಪಡಿಸುತ್ತಾರೆಯೇ” ಎಂದು ಪ್ರಶ್ನಿಸಿದ್ದಾರೆ.
ಅಹಿಂಸಾತ್ಮಕ ಮತ್ತು ಗಾಂಧಿ ವಿಚಾರಧಾರೆಗಳ ಮೂಲಕ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪರಿವರ್ತನೆಗೆ ನೀಡಿದ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ ಗೀತಾ ಪ್ರೆಸ್‍ಗೆ ಪ್ರಶಸ್ತಿಯನ್ನು ನೀಡಲು ನಿರ್ಧರಿಸಲಾಗಿದೆ ಎಂದು ಕೇಂದ್ರದ ಪ್ರಕಟಣೆ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಹಲವು ರಾಜ್ಯಗಳಲ್ಲಿ ಮುಂಗಾರು ಜೋರು; ತಮಿಳುನಾಡಿನ ಹಲವೆಡೆ ಶಾಲೆಗಳಿಗೆ ರಜೆ, ರಾಜಸ್ಥಾನದಲ್ಲಿ 5 ಸಾವು
1995ರಲ್ಲಿ ಸರ್ಕಾರವು ಸ್ಥಾಪಿಸಿದ ಗಾಂಧಿ ಶಾಂತಿ ಪ್ರಶಸ್ತಿಯು ಮಹಾತ್ಮ ಗಾಂಧಿಯವರು ಪ್ರತಿಪಾದಿಸಿದ ಆದರ್ಶಗಳಿಗೆ ಗೌರವ ಸಲ್ಲಿಸುವ ವಾರ್ಷಿಕ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯು ರಾಷ್ಟ್ರೀಯತೆ, ಜನಾಂಗ, ಭಾಷೆ, ಜಾತಿ, ಮತ ಅಥವಾ ಲಿಂಗವನ್ನು ಲೆಕ್ಕಿಸದೆ ಎಲ್ಲ ವ್ಯಕ್ತಿಗಳಿಗೂ ನೀಡಿ ಗೌರವಿಸಲಾಗುತ್ತದೆ.
ಪ್ರಶಸ್ತಿಯು 1 ಕೋಟಿ ರೂ. ನಗದು ಬಹುಮಾನ, ಪ್ರಶಸ್ತಿ ಪತ್ರ, ಫಲಕ ಮತ್ತು ಸಾಂಪ್ರದಾಯಿಕ ಕರಕುಶಲ/ಕೈಮಗ್ಗ ವಸ್ತುವನ್ನು ಒಳಗೊಂಡಿದೆ. ಹಿಂದಿನ ಪ್ರಶಸ್ತಿ ಪುರಸ್ಕೃತರಲ್ಲಿ ಇಸ್ರೋ, ರಾಮಕೃಷ್ಣ ಮಿಷನ್‍ನಂತಹ ಸಂಸ್ಥೆಗಳು ಹಾಗೂ ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ ಹಾಗೂ ಬಾಂಗ್ಲಾದೇಶದ ಶೇಖ್ ಮುಜೀಬುರ್ ರೆಹಮಾನ್ ಕೂಡ ಸೇರಿದ್ದಾರೆ.
ವಿಶ್ವದ ಅತಿದೊಡ್ಡ ಪ್ರಕಾಶಕರಲ್ಲಿ ಒಂದಾದ ಗೀತಾ ಪ್ರೆಸ್ ಅನ್ನು 1923 ರಲ್ಲಿ ಸ್ಥಾಪಿಸಲಾಯಿತು. ಇದು 162 ಮಿಲಿಯನ್ ಶ್ರೀಮದ್ ಭಗವದ್ಗೀತೆ ಸೇರಿದಂತೆ 14 ಭಾಷೆಗಳಲ್ಲಿ 417 ಮಿಲಿಯನ್ ಪುಸ್ತಕಗಳನ್ನು ಪ್ರಕಟಿಸಿದೆ ಎಂದು ಕೇಂದ್ರ ಸಚಿವಾಲಯದ ಹೇಳಿಕೆ ನೀಡಿದೆ.
ಗೀತಾ ಪ್ರೆಸ್ಗೆ ಗಾಂಧಿ ಶಾಂತಿ ಪ್ರಶಸ್ತಿ ನೀಡಿರುವುದಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಭಿನಂದನೆ ಸಲ್ಲಿಸಿದ್ದರು.