ಹುಡುಕಾಟ | ರಾಜಕೀಯ ಎಂದರೇನು? ಸರಳೀಕರಿಸುವ ಒಂದು ಪ್ರಯತ್ನ

Date:

Advertisements

ಜಗತ್ತನ್ನು ಆಳಿದ ಅತಿ ದೊಡ್ಡ ವ್ಯವಸ್ಥೆ, ಚರ್ಚ್‌ ಎಂದು ಯಾರೋ ಹೇಳಿದ್ದರು. ಸತ್ಯವೂ ಕೂಡ. ಅದರಂತೆ ಜಗತ್ತಿನ ಎಲ್ಲ ಧರ್ಮಗಳೂ ಒಂದು ವ್ಯವಸ್ಥೆ ತರಲು ಪ್ರಯತ್ನಿಸಿದವು. ಭಾರತದಲ್ಲಿ ಅದು ಜಾತಿ ಎಂಬುದು ಇತರ ಎಲ್ಲಾ ವ್ಯವಸ್ಥೆಗಳನ್ನು ಡಾಮಿನೇಟ್‌ ಮಾಡಿತ್ತು ಎಂದು ಹೇಳಬಹುದು. ಆದರೆ ಈ ಎಲ್ಲ ವ್ಯವಸ್ಥೆಗಳೂ ತಮ್ಮಲ್ಲೇ ಅನ್ಯಾಯ ದಬ್ಬಾಳಿಕೆಗಳನ್ನೂ ಹೊತ್ತು ತಂದಿದ್ದವು. ಆಯಾ ಸಮಯದಲ್ಲಿ ಇವುಗಳ ವಿರುದ್ಧ ಹೋರಾಟಗಳೂ ನಡೆದಿವೆ, ಯಶಸ್ವಿಯೂ ಆಗಿವೆ. ಅಂಥ ಒಂದು ವ್ಯವಸ್ಥೆ ಪ್ರಜಾಪ್ರಭುತ್ವ.

ಒಂದು: ಇತ್ತೀಚಿಗೆ ದಶಕಕ್ಕಿಂತಲೂ ಹೆಚ್ಚು ಕಾಲ ಸಾಮಾಜಿಕ, ರಾಜಕೀಯ ಕಾರ್ಯಕರ್ತರಾಗಿ ಕೆಲಸ ಮಾಡಿದ ಸ್ನೇಹಿತರೊಬ್ಬರು ಒಂದು ಮದುವೆಗೆ ಹೋಗಿದ್ದರು. ಅಲ್ಲಿ, ತನ್ನ ಹಳೆಯ ಸ್ನೇಹಿತರನ್ನು, ದೂರದ ಸಂಬಂಧಿಕರನ್ನು ಭೇಟಿಯಾದರು. ಅವರೆಲ್ಲರೂ ತುಂಬಾ ಖುಷಿಯಿಂದಲೇ ಮಾತನಾಡಿದರು. ಅಂದು ಏನೋ ಮಿಸ್‌ ಹೊಡೀತಿದೆಯಲ್ಲಾ ಎಂದು ನನ್ನ ಸ್ನೇಹಿತರಿಗೆ ಅನಿಸಿತು. ಒಂದಿಷ್ಟು ಆತ್ಮಾವಲೋಕನ ಮಾಡಿಕೊಂಡ ನಂತರ ಅವರಿಗೆ ತಮ್ಮ ಬಗ್ಗೆ ಗೊತ್ತಾಗಿದ್ದು: ತನ್ನ ಹಳೆಯ ಸ್ನೇಹಿತರು, ಸಂಬಂಧಿಕರು ಎಲ್ಲರೂ ತಾನು ಒಬ್ಬ ಸಾಮಾಜಿಕ ಕಾರ್ಯಕರ್ತ ಎಂಬ ಕಾರಣಕ್ಕೆ ತನ್ನನ್ನು ಗೌರವಿಸಲಿ ಎಂದು ನಿರೀಕ್ಷಿಸುತ್ತಿದ್ದರು. ಆ ನಿರೀಕ್ಷೆ ಹುಸಿಯಾಗಿದ್ದಕ್ಕೆ ಎಲ್ಲೋ ಬೇಸರವಿತ್ತಾದರಿಂದ ಅವರಿಗೆ ʼಏನೋ ಮಿಸ್‌ ಹೊಡೆದʼ ಫೀಲಿಂಗ್‌ ಬಂದಿತ್ತು. ಇನ್ನಷ್ಟು ಅವಲೋಕನ ಬಾಕಿ ಇತ್ತು.

ಎರಡು: 80ರ ದಶಕದಲ್ಲಿ ಒಂದು ಸಿನೆಮಾ ಬಂದಿತ್ತು. ಅದರಲ್ಲಿ ಮಿಥುನ್‌ ಚಕ್ರವರ್ತಿ ಒಂದು ಬಡ ದಲಿತ ಕುಟುಂಬಕ್ಕೆ ಸೇರಿದವನು. ಆ ಚಿತ್ರದ ನಾಯಕ ತನ್ನ ಬಾಲ್ಯದಲ್ಲಿ ತಮ್ಮ ಮೇಲೆ ಆಗುತ್ತಿರುವ ಅನ್ಯಾಯದಿಂದ ಸಿಟ್ಟಾಗಿ ತನ್ನ ತಂದೆಗೆ ದೂರುತ್ತಾನೆ. ಆಗ ಆ ತಂದೆ, ಇದು ಹೀಗೆಯೇ, ಇದುವೆ ನಮ್ಮ ವ್ಯವಸ್ಥೆ, ʼಮೇಲ್ಜಾತಿʼಗಳ ಸೇವೆ ಮಾಡಲೆಂದೇ ನಾವು ಹುಟ್ಟಿದ್ದು, ಇದುವೇ ನಮ್ಮ ಕರ್ತವ್ಯ ಎಂಬಂತೆ ಹೇಳಿ, ಮಗನಿಗೆ ಸಮಾಧಾನಪಡಿಸಲು ಯತ್ನಿಸುತ್ತಾನೆ.

ಮೂರು: ರಸ್ತೆಯಲ್ಲೊಂದು ಕೆಲವು ಹುಡುಗರು ಹೋಗುತ್ತಿದ್ದರು. ಸಂಜೆಯ ಸಮಯ. ಅದೇ ರಸ್ತೆಯಲ್ಲಿ ಒಬ್ಬ ಹುಡುಗಿಯೂ ನಡೆದುಕೊಂಡು ಹೋಗುತ್ತಿದ್ದಳು. ಈ ಹುಡುಗರಿಗೆ ಸುಮ್ಮನಿರಲಾಗದೇ ಶಿಳ್ಳೆ ಹಾಕುವುದು, ನಗುವುದು, ತಮ್ಮೊಳಗೇ ಮಾತನಾಡಿದರೂ, ಅವಳಿಗೆ ಕೇಳಿಸುವಂತೆ ಮಾತನಾಡಲು ಶುರು ಮಾಡಿದರು. ರಸ್ತೆಯೇನೂ ನಿರ್ಜನವಾಗಿರಲಿಲ್ಲ. ಆ ಹುಡುಗಿಯೂ ಇದೆಲ್ಲ ಇರುವುದೇ ಎಂಬಂತೆ ವೇಗವನ್ನು ಹೆಚ್ಚಿಸಿ ನಡೆಯಲಾರಂಭಿಸಿದಳು. ಆಗ ಒಬ್ಬ ಮಹಿಳೆಯೊಬ್ಬಳು ಅದನ್ನು ನೋಡಿ, ಆ ಹುಡುಗರನ್ನು ತರಾಟೆಗೆ ತೆಗೆದುಕೊಂಡಳು. ಆ ಹುಡುಗರು ತಾವೇನೂ ಮಾಡಿಲ್ಲ ಎಂದು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ ಆ ಮಹಿಳೆ ಪಟ್ಟುಬಿಡದೇ ನಿಂತಿದ್ದರಿಂದ ಸುಮ್ಮನಾಗಿ ಬೇರೆ ಕಡೆ ಹೊರಟು ಹೋದರು. ಅಥವಾ ಇದನ್ನು ರಸ್ತೆಯಲ್ಲಿ ಒಬ್ಬ ಬಡಪಾಯಿಯಿಂದ ದುಡ್ಡು ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದ ದುರುಳರನ್ನು ತಡೆಗಟ್ಟಿದ ಒಂದು ಪ್ರಸಂಗವೆಂದೂ ತೆಗೆದುಕೊಳ್ಳಬಹುದು.

496GasvHKEObwbgHd1nTiQ

ಈ ಮೂರೂ ಘಟನೆಗಳಿಗೆ ನೇರಾನೇರ ಸಂಬಂಧವಿಲ್ಲ. ಆದರೆ ಇವನ್ನೇಕೆ ಬರೆದೆ ಎಂಬುದನ್ನು ಅರಿತುಕೊಳ್ಳುವ ಪ್ರಯತ್ನ ಮಾಡುವೆ.

ಮಿಥುನ್‌ನ ಆ ಸಿನೆಮಾದಲ್ಲಿ ಆ ತಂದೆ ಸತ್ಯವನ್ನೇ ಹೇಳಿದ್ದ. ಅದುವೇ ವ್ಯವಸ್ಥೆ ಎಂದು. ನಮ್ಮ ಸಮಾಜ, ಮನುಷ್ಯರು ಸಮಾಜವಾಗಿ, ಸಾಮಾಜಿಕ ಘಟಕಗಳಾಗಿ ಬೆಳೆದುಕೊಂಡು ಬಂದಿದ್ದಕ್ಕೆ ದೀರ್ಘ ಇತಿಹಾಸವಿದೆ. ಸುಮಾರು ಹದಿಮೂರು ಸಾವಿರ ವರ್ಷಗಳ ಹಿಂದೆ ಕೃಷಿ ಕಂಡುಹಿಡಿದರು. ಆಗ ಸಮಾಜದ ರಚನೆಗಳು ಇನ್ನಷ್ಟು ಗಟ್ಟಿಯಾಗತೊಡಗಿದವು. ಜನರ ಗುಂಪುಗಳು ಒಂದು ಸ್ಥಳದಲ್ಲಿ ವಾಸಿಸುವ ರೂಢಿ ಕೃಷಿ ಆರಂಭವಾದ ನಂತರವೇ ಎನ್ನಬಹುದು. ಅದಕ್ಕಿಂತ ಮುನ್ನ ಹಂಟರ್‌ ಗ್ಯಾದರರ್‌ ಎಂದು ಸ್ಥೂಲವಾಗಿ ವರ್ಗೀಕರಿಸಬಹುದು. ಆಗಿನಿಂದಲೇ ಮನುಷ್ಯನ ನಡೆ ಹೇಗಿರಬೇಕು, ಇತರರೊಂದಿಗೆ ಹೇಗೆ ವ್ಯವಹರಿಸಬೇಕು, ತಮ್ಮ ತಮ್ಮ ತಳಿಯು ಯಶಸ್ವಿಯಾಗಿ ಮುಂದುವರೆಸಬೇಕಾದರೆ ಏನು ಮಾಡಬೇಕು ಎಂಬುದಕ್ಕೆ ಕೆಲವು ವ್ಯವಸ್ಥೆಗಳು ಹುಟ್ಟಿಕೊಂಡವು. ಆ ವ್ಯವಸ್ಥೆಗಳೇ ನಮ್ಮನ್ನು ಮನುಕುಲವನ್ನು ಆಳಿದವು ಅಥವಾ ಮುನ್ನಡೆಸಿದವು ಎನ್ನಬಹುದು(ಅದಕ್ಕೇ ಕೆಲವರು ತಮ್ಮನ್ನು ತಾವು ಆನರ್ಕಿಸ್ಟ್‌ ಎಂದು ಕರೆದುಕೊಂಡು, ಯಾವ ವ್ಯವಸ್ಥೆಯೂ ಇರಬಾರದು ಎಂದು ಪ್ರತಿಪಾದಿಸುತ್ತಾರೆ). ಆ ವ್ಯವಸ್ಥೆಗಳಲ್ಲಿ ಹಲವಾರು ನಿಯಮಗಳು ನ್ಯಾಯಯುತವಾಗಿಯೂ, ಇನ್ನು ಹಲವಾರು ನ್ಯಾಯಯುತವಾಗದೆಯೂ ಇದ್ದಿರಬಹುದು ಎಂದು ಅಂದಾಜಿಸುವುದು ಸುಲಭ. ಹಾಗೂ ಹಲವಾರು ನಿಯಮಗಳೂ ಇಂದು ಅತ್ಯಂತ ವಿಚಿತ್ರವೆಂದೂ ಅನ್ನಿಸಬಹುದು. ಹಾಗೂ ಒಂದೇ ಕಾಲಘಟ್ಟದಲ್ಲಿ ತದ್ವಿರುದ್ಧವಾದ ವ್ಯವಸ್ಥೆಗಳೂ ಇದ್ದಿರಬಹುದು.

ಅಂತಹ ಒಂದು ದೊಡ್ಡ ವ್ಯವಸ್ಥೆ ಧರ್ಮ. ನಾನು ಬಹುತೇಕ ಧರ್ಮಗಳನ್ನು ಆ ನಿಟ್ಟಿನಲ್ಲಿಯೇ ನೋಡುತ್ತೇನೆ. ಸಾವಿರಾರು ಬುಡಕಟ್ಟುಗಳಲ್ಲಿ ಇರುವ ಸಾವಿರಾರು ವ್ಯವಸ್ಥೆಗಳನ್ನು ನೋಡಿ, ಆ ಬುಡಕಟ್ಟುಗಳು ಪರಸ್ಪರ ಕಚ್ಚಾಡುವುದನ್ನು ನೋಡಿ, ಅಲ್ಲಿ ಆಗುತ್ತಿರುವ ಅಮಾಯಕರ ಕೊಲೆಗಳನ್ನು ನೋಡಿ, ಹೊಸ ನಿಯಮಗಳನ್ನು, ಹೊಸದೊಂದು ವ್ಯವಸ್ಥೆಯನ್ನು ತರುವ ಹಲವಾರು ಪ್ರಯತ್ನಗಳು ಆಗಿರಬಹುದು ಎಂಬುದು ನನ್ನ ಊಹೆ. ಅದರೊಂದಿಗೆ ತಮ್ಮ ತಳಿಯನ್ನು ಮುಂದುವರೆಸಬೇಕು ಎಂಬ ಉದ್ದೇಶವೂ ಗಟ್ಟಿಯಾಗೇ ಇದ್ದಿರಬಹುದು. ಅದರಲ್ಲಿ ಯಶಸ್ಸು ಕಂಡ ವ್ಯವಸ್ಥೆಗಳೂ ಈಗಲೂ ಗಟ್ಟಿಯಾಗಿ ಉಳಿದುಕೊಂಡಿವೆ. ಅವುಗಳನ್ನೇ ನಾವು ರಿಲಿಜನ್‌ ಎಂದು ಕರೆಯುತ್ತೇವೆ. (ಕನ್ನಡದಲ್ಲಿ ರಿಲಿಜನ್‌ ಪದಕ್ಕೆ ಸೂಕ್ತ ಪದ ಸಿಗುತ್ತಿಲ್ಲವಾದುದರಿಂದ ಅದನ್ನೇ ಬಳಸುತ್ತಿದ್ದೇನೆ) ಜಗತ್ತನ್ನು ಆಳಿದ ಅತಿದೊಡ್ಡ ವ್ಯವಸ್ಥೆ, ಚರ್ಚ್‌ ಎಂದು ಯಾರೋ ಹೇಳಿದ್ದರು. ಸತ್ಯವೂ ಕೂಡ. ಅದರಂತೆ ಜಗತ್ತಿನ ಎಲ್ಲ ಧರ್ಮಗಳೂ ಒಂದು ವ್ಯವಸ್ಥೆ ತರಲು ಪ್ರಯತ್ನಿಸಿದವು. ಭಾರತದಲ್ಲಿ ಅದು ಜಾತಿ ಎಂಬುದು ಇತರ ಎಲ್ಲಾ ವ್ಯವಸ್ಥೆಗಳನ್ನು ಡಾಮಿನೇಟ್‌ ಮಾಡಿತ್ತು ಎಂದು ಹೇಳಬಹುದು.

Advertisements
frieden 1600

ಆದರೆ ಈ ಎಲ್ಲ ವ್ಯವಸ್ಥೆಗಳೂ ತಮ್ಮಲ್ಲೇ ಅನ್ಯಾಯ ದಬ್ಬಾಳಿಕೆಗಳನ್ನೂ ಹೊತ್ತುತಂದಿದ್ದವು. ಆಯಾ ಸಮಯದಲ್ಲಿ ಇವುಗಳ ವಿರುದ್ಧ ಹೋರಾಟಗಳೂ ನಡೆದಿವೆ, ಯಶಸ್ವಿಯೂ ಆಗಿವೆ. ಅಂಥ ಒಂದು ವ್ಯವಸ್ಥೆ ಪ್ರಜಾಪ್ರಭುತ್ವ. ಕೆಲವೇ ಕೆಲವು ಶತಕಗಳ ಹಿಂದೆ ಊಹಿಸಲೂ ಆಗದಂತಹ ಈ ವ್ಯವಸ್ಥೆಯು ತನ್ನ ಎಲ್ಲ ದೌರ್ಬಲ್ಯಗಳ, ಇತಿಮಿತಿಗಳ ಹೊರತಾಗಿಯೂ ವಿಶ್ವದೆಲ್ಲೆಡೆ ವ್ಯಾಪಿಸಿದೆ. ಹಾಗೂ ಈ ʼಸುಂದರʼವಾದ ವ್ಯವಸ್ಥೆಯನ್ನು ಕಿತ್ತೆಸೆಯಲು ಹಲವು ಶಕ್ತಿಗಳು ಸತತವಾಗಿ ಪ್ರಯತ್ನಿಸುತ್ತಲೇ ಇವೆ. ಹಾಗೂ ಅದು ಅತ್ಯಂತ ಸ್ವಾಭಾವಿಕವೂ ಕೂಡ. ಪ್ರತಿಯೊಂದು ಗುಂಪು, ಪಂಗಡ, ಜನಾಂಗ, ವರ್ಗ ಮುಂತಾದವು ಈ ವ್ಯವಸ್ಥೆಯ ಮೇಲೆ ಪ್ರಾಬಲ್ಯ ಸಾಧಿಸುವ ಪ್ರಯತ್ನ ಮಾಡಬಾರದು ಎಂದು ನಿರೀಕ್ಷಿಸುವುದೇ ಅಮಾಯಕತನ ಆಗುವುದು. ಹಸುಗೂಸುಗಳು ಸಾಯಲಿ, ತನಗೆ ಹುಟ್ಟಿದ ಮಕ್ಕಳನ್ನೇ ಕೊಲ್ಲಬೇಕಾಗಿ ಬರಲಿ, ಆಸ್ಪತ್ರೆಗಳನ್ನೇ ಧ್ವಂಸಮಾಡಬೇಕಾಗಿ ಬರಲಿ, ಇಡೀ ಒಂದು ವರ್ಗ ಹಸಿವಿನಿಂದ ಸಾಯುವಂತಾಗಲೀ, ಏನೇ ಆಗಲಿ ನಮ್ಮ ಪ್ರಾಬಲ್ಯ ಇರಲೇಬೇಕು ಎಂದು ಈ ಶಕ್ತಿಗಳು ಮಂದುವರೆಯುತ್ತವೆ.

ರಸ್ತೆಯಲ್ಲಿ ಹೋಗುತ್ತಿದ್ದ ಆ ಹೆಣ್ಣುಮಗಳನ್ನು ʼಚುಡಾಯಿಸುವುದುʼ ಅಂತಹ ಒಂದು ಪ್ರಾಬಲ್ಯದ ಮುಂದುವರಿಕೆ, ಅದನ್ನು ಪ್ರತಿಭಟಿಸುವ ವ್ಯಕ್ತಿ ಆ ವ್ಯವಸ್ಥೆಯನ್ನು ಮುರಿಯುವ ಪ್ರಯತ್ನದಲ್ಲಿದ್ದಾಳೆ. ಅದುವೇ ರಾಜಕೀಯ.

ಮಿಥುನ್‌ನ ಸಿನೆಮಾದಲ್ಲಿ ಆ ತಂದೆ ಸೋಲನ್ನೊಪ್ಪಿದ್ದಾನೆ, ಇದುವೇ ನಮ್ಮ ವ್ಯವಸ್ಥೆ, ಹಿಂದಿನ ಜನ್ಮದಲ್ಲಿ ಮಾಡಿದ್ದ ಪಾಪಕ್ಕಾಗಿ ಇದನ್ನು ಅನುಭವಿಸಬೇಕು ಎಂದು ನಂಬಿದ್ದಾನೆ/ನಂಬಿಸಲಾಗಿದೆ. ಆದರೆ, ಮಿಥುನ್‌ ಸೋಲೊಪ್ಪುವುದಿಲ್ಲ, ಅವನು ಪ್ರತಿಭಟಿಸುತ್ತಾನೆ. ಅದುವೇ ರಾಜಕೀಯ.

ಆದರೂ, ರಾಜಕೀಯವೆಂದರೆ ಯಾಕೆ ಮೂಗು ಮುರಿಯುತ್ತಾರೆ, ‘I abhor politics’ ಎಂದು ಯಾಕೆ ಹೇಳುತ್ತಾರೆ (ಕಳೆದ ವಾರವೇ ನನಗೆ ಒಬ್ಬರು ಹೇಳಿದ್ದು) ಎಂಬುದನ್ನು ಕೇಳಿಕೊಂಡರೆ, ಕೆಲವು ಸರಳವಾದ ಉತ್ತರಗಳನ್ನು ಕಂಡುಕೊಳ್ಳುತ್ತೇವೆ; ರಾಜಕೀಯದಲ್ಲಿ ಕೆಟ್ಟ ವ್ಯಕ್ತಿಗಳು ನುಸುಳಿರುವುದರಿಂದ, ರಾಜಕಾರಿಣಿಗಳು ಭ್ರಷ್ಟಾಚಾರದಲ್ಲಿ ತೊಡಗಿರುವುದರಿಂದ ಅದರ ಒಟ್ಟಾರೆ ಚಿತ್ರಣವೇ ಕೆಟ್ಟದು ಎಂದು ಬಿಂಬಿಸಲಾಗಿರುವುದರಿಂದ ಆ ಅಭಿಪ್ರಾಯ ಮೂಡಿದೆ ಎಂದು ಹೇಳಬಹುದು. ಇದರಲ್ಲಿ ಚೂರು ಸತ್ಯಾಂಶವೂ ಇರಬಹುದು. ಆದರೆ, ಇದಕ್ಕೆ ಇನ್ನೂ ಹಲವಾರು ಕಾರಣಗಳಿವೆ. ಒಂದು ಮುಖ್ಯ ಕಾರಣ, ʼತಾನು ಏನೂ ಮಾಡಲು ಸಾಧ್ಯವಿಲ್ಲʼ ಎಂದು ಅನ್‌ಕಾನ್ಷಿಯಸ್‌ ಆಗಿ ಒಪ್ಪಿಕೊಂಡಿರುವುದರಿಂದ ಅಥವಾ ಈ ರೀತಿ ಅವರಿಗೆ ಮನವರಿಕೆ ಮಾಡಿಸಿರುವುದರಿಂದ ಈ ಅಭಿಪ್ರಾಯಕ್ಕೆ ಬರುವುದು ಅತ್ಯಂತ ಸರಳವಾಗಿರುತ್ತೆ. ಹಾಗೂ ಈ ಪಾಲಿಟಿಕ್ಸ್‌ ವಿರೋಧಿಗಳಿಗೆ ಇಂದಿನ ರಾಜಕೀಯವು ಅನುಕೂಲ ಮಾಡುತ್ತಿರುವುದರಿಂದ, ಇವರೇ ರಾಜಕೀಯದ ಅತ್ಯಂತ ದೊಡ್ಡ ಫಲಾನುಭವಿಗಳು ಆಗಿರುವುದರಿಂದಲೂ ಇದನ್ನು ಹೇಳುವುದು ಅತ್ಯಂತ ಸುಲಭ. ಇದನ್ನು ಅವರು ಬಹುಶಃ ಕಾನ್ಷಿಯಸ್‌ ಆಗಿ ಹೇಳದೇ ಇರಬಹುದು, ಆದರೆ ಅವರು ವಾಸಿಸುವ ವಾತಾವರಣವು ತನ್ನನ್ನು ತಾನು ರಕ್ಷಿಸುವ, ತನಗೆ ಸಿಕ್ಕಿರುವ ಸೌಲಭ್ಯಗಳನ್ನು, ತನ್ನ ಪ್ರಿವಿಲೆಜ್‌ಅನ್ನು ಬಿಟ್ಟುಕೊಡಲು ಸಿದ್ಧವಿರುವುದಿಲ್ಲ. ಅದೇ ಎಕೊಸಿಸ್ಟಂ ಆಸ್ಪತ್ರೆಗಳ ಮೇಲೆ ಬಾಂಬ್‌ ಹಾಕಿಸುತ್ತದೆ, ಲಕ್ಷಾಂತರ ಜನರ ಹಸಿವಿಗೆ ಕಾರಣವಾಗುತ್ತದೆ, ಲಕ್ಷಾಂತರ ಜನರ ಘನತೆಯಿಂದ ಬದುಕುವ ಹಕ್ಕನ್ನು ಕಸಿದುಕೊಳ್ಳುತ್ತದೆ.

ಆದರೆ, ಎಲ್ಲರೂ ಕೆಟ್ಟವರಲ್ಲ, ಕೆಟ್ಟದ್ದನ್ನು ಬಯಸುವುದೂ ಇಲ್ಲ. ಹಾಗಾದರೆ ಏಕಿಷ್ಟು ದ್ವೇಷ? ರಾಜಕೀಯವೆಂದರೆ ಏಕಿಷ್ಟು ಅಸಡ್ಡೆ? ಏಕೆಂದರೆ ಈ ಪ್ರಾಬಲ್ಯ ಸಾಧಿಸುವ ಯುದ್ಧ ಕೇವಲ ಶಸ್ತ್ರಾಸ್ತ್ರಗಳಿಂದ ಮಾಡುವ ಯುದ್ಧವಲ್ಲ, ಇದೊಂದು ಆಳವಾದ ಮನಃಶಾಸ್ತ್ರದ ಯುದ್ಧವೂ ಹೌದು. ಹಾಗೂ ನಮ್ಮೆಲ್ಲರಿಗೂ ನಾವು ಸುರಕ್ಷಿತವಾಗಿರಬೇಕು ಎಂಬ ಬಯಕೆ ಇದ್ದೇ ಇರುತ್ತದೆ. ನಮ್ಮೆಲ್ಲರಿಗೂ ನಾವು (ಕೆಲವೊಮ್ಮೆ ನಾವು ಮಾತ್ರ) ಚೆನ್ನಾಗಿ ಬಾಳಬೇಕು ಎಂಬ ಬಯಕೆಯೂ ಸಹಜವಾಗಿ ಇರುತ್ತದೆ. ಈ ಸುಪ್ತ ಹಾಗೂ ಅಷ್ಟೊಂದು ಸುಪ್ತವಲ್ಲದ ಬಯಕೆಯನ್ನು ಬಳಸಿಕೊಂಡು ಈ ಶಕ್ತಿಗಳನ್ನು ನಮ್ಮನ್ನಾಳುವ ಪ್ರಯತ್ನ ಮಾಡುತ್ತವೆ. ವ್ಯವಸ್ಥೆಯನ್ನು ಅಲುಗಾಡಿಸಿದರೆ ಅಪಾಯ ಎಂಬ ಎಚ್ಚರಿಕೆಯನ್ನು ಆಗಾಗ್ಗೆ ನೀಡುತ್ತಲೇ ಇರುತ್ತವೆ. ಶಾಲೆಯಲ್ಲಿ ಚೆನ್ನಾಗಿ ಓದುತ್ತಾನೆ ಎಂಬ ಕಾರಣಕ್ಕೇ ದಲಿತ ಹುಡುಗನನ್ನು ಹೊಡೆದು ಸಾಯಿಸುವುದರಿಂದ ಫುಟ್‌ಪಾತಿನಲ್ಲಿ ವಾಹನಗಳನ್ನು ಓಡಿಸಿದಾಗ ನಿಲ್ಲಿಸುವ, ಪ್ರತಿಭಟಿಸುವ ವ್ಯಕ್ತಿಗೆ ʼನಿನಗ್ಯಾಕೆ ಬೇಕುʼ ಎಂದು, ಈ ಬಲಿಷ್ಠರ ʼವ್ಯವಸ್ಥೆʼಗೆ ಚೂರು ಧಕ್ಕೆ ತರುವ ವ್ಯಕ್ತಿಯನ್ನು ಹುಚ್ಚ ಎಂದು ಕರೆಯುವುದನ್ನೂ ಒಳಗೊಂಡಂತೆ ಸಾವಿರಾರು ಅಸ್ತ್ರಗಳನ್ನು ಬತ್ತಳಿಕೆಯಲ್ಲಿಟ್ಟುಕೊಂಡಿರಲಾಗುತ್ತದೆ.

ಆದರೆ, ಸಾಮಾಜಿಕ ಕಾರ್ಯಕರ್ತನನ್ನು ಆತನ ಸ್ನೇಹಿತರು, ಸಂಬಂಧಿಕರು ಏಕೆ ಗೌರವಿಸಲಿಲ್ಲ? ಆತ ಮಾಡುತ್ತಿದ್ದೆಲ್ಲವೂ ಅವರಂಥ ವ್ಯಕ್ತಿಗಳಿಗೇ ಆಗಿದ್ದರೂ ಅದನ್ನು ಏಕೆ ನೋಡಲಿಲ್ಲ? ಏಕೆಂದರೆ, ಅವರಿಗೆ ಅದು ಕಾಣುವುದಿಲ್ಲ. ಕೆಲವೊಮ್ಮೆ ನಮ್ಮ ನೋವುಗಳೇ ನಮಗೆ ಕಾಣಿಸದ ಹಾಗೇ ಮರೆಸಿಬಿಡುತ್ತವೆ. ಈ ಶಕ್ತಿಗಳು ಹಾಗೂ ಅದರ ವಿರುದ್ಧ ಹೋರಾಡಬಹುದು. ನಿಜಕ್ಕೂ ಹೋರಾಡುತ್ತಿದ್ದಾರೆ ಎಂಬುದೇ ಆ ಸ್ನೇಹಿತರಿಗೆ ಗೊತ್ತಿರಲಿಕ್ಕಿಲ್ಲ. ಕಾರ್ಯಕರ್ತರೆಲ್ಲರೂ ಒಂದೋ ತಮ್ಮ ಲಾಭಕ್ಕಾಗಿ ಏನೋ ಮಾಡಿಕೊಂಡಿದ್ದಾರೆಂದೋ ಅಥವಾ ʼಚೂರು ಹುಚ್ಚʼರೆಂದೋ ಅರ್ಥೈಸಿಕೊಳ್ಳಲು ಮಾತ್ರ ಸಾಧ್ಯವಾಗುವಂತಹ ವಾತಾವರಣವನ್ನೂ ಅನ್‌ಕಾನ್ಷಿಯಸ್‌ ಆಗಿಯೇ ನಿರ್ಮಿಸಲಾಗಿರುತ್ತದೆ.

1675413574697bertolt brecht
ಬರ್ಟೋಲ್ಟ್ ಬ್ರೆಕ್ಟ್‌

ಅವೆಲ್ಲ ಆಗುವುದು ಪ್ರಾಬಲ್ಯ ಸಾಧಿಸುವ ಶಕ್ತಿಗಳು ನಮ್ಮಲ್ಲಿಯ ಹೆಚ್ಚಿನ ಜನರನ್ನು ಪ್ರಭಾವಿಸಿದಾಗ. ಅವೇ ಶಕ್ತಿಗಳು ಈಗ ಆಳುತ್ತಿರುವುದು. ಹಿಂದೆ ಎಂದಾದರೂ ಅವುಗಳು ಪ್ರಾಬಲ್ಯ ಸಾಧಿಸದೇ ಇದ್ದ ಸಮಯವೂ ಇತ್ತಾ, ಇದ್ದವಾ? ಖಂಡಿತವಾಗಿಯೂ ಇದ್ದವು. ಆದರೆ, ಏನೂ ಒಳ್ಳೆಯದಾಗಲ್ಲ, ಮನುಕುಲ ಕೆಟ್ಟುಹೋಗುತ್ತಿದೆ ಎಂಬ ಕಥನಗಳು ಸದಾಕಾಲ ಚಾಲ್ತಿಯಲ್ಲಿರುತ್ತವೆ. ಇದನ್ನು ಹೇಳುವವರು ಎಂದೂ ಅಂಕಿಅಂಶಗಳನ್ನು ನೋಡುವುದಿಲ್ಲ. ಎಷ್ಟೊಂದು ಜನರಿಗೆ ನ್ಯಾಯ ಸಿಕ್ಕಿದೆ, ಯುದ್ಧಗಳ ಸಂಖ್ಯೆ ಕಡಿಮೆಯಾಗಿದೆ, ಸಾವುಗಳ ಸಂಖ್ಯೆ ಕಡಿಮೆಯಾಗಿದೆ ಅಥವಾ ಯಾವುದೇ ಫ್ಯಾಕ್ಟ್‌ಗಳ ಅವಲೋಕನ ಮಾಡುವುದಿಲ್ಲ. ಇದೂ ಕೂಡ ಪ್ರಾಬಲ್ಯ ಸಾಧಿಸುವವರ ಹಾಕಿದ ಟ್ರ್ಯಾಪ್‌ಗೆ ಬೀಳುವ ಕೆಲಸವೇ ಆಗಿದೆ. ಮತ್ತೇ ಮೂಲಕ್ಕೆ ಬರುವ ರಾಜಕೀಯ ಎಂಬುದು ಕೆಟ್ಟದ್ದು ಹೇಗೆ ಆಗುತ್ತೆ? ರಾಜಕೀಯವೇ ಈ ದೇಶಕ್ಕೆ ಸ್ವಾತಂತ್ರ ತಂದುಕೊಟ್ಟಿದ್ದು, ರಾಜಕೀಯ ನೀತಿಗಳೇ ದಮನಿತರಿಗೆ ಧ್ವನಿ ಕೊಟ್ಟವು. ರಾಜಕೀಯದಲ್ಲಿರುವವರು ಕೆಟ್ಟ ನೀತಿಗಳು ಮಾಡಿದ್ದರಿಂದಲೇ ಪರಿಸರ ಹಾಳಗಿರುವುದು. ʼಯಾರು ರಾಜಕೀಯದ ಬಗ್ಗೆ ತಲೆಕೆಡಿಸಿಕೊಳ್ಳುದಿಲ್ಲವೋ ಅವರು ನಿರಕ್ಷರಸ್ಥರಲ್ಲೇ ಅತ್ಯಂತ ನಿಕೃಷ್ಟ ನಿರಕ್ಷರಸ್ಥರುʼ ಎಂದು ಬರ್ಟೋಲ್ಟ್ ಬ್ರೆಕ್ಟ್‌ ನೂರು ವರ್ಷ್‌ ಹಿಂದೆಯೇ ಹೇಳಿದ್ದಾರೆ. ರಾಜಕೀಯವು ನಮ್ಮ ಜೀವನದ ಯಾವೆಲ್ಲ ಅಂಶಗಳ ಮೇಲೆ ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ಮತ್ತೆ ಮತ್ತೆ ಹೇಳುವ ಅವಶ್ಯಕತೆ ಇಲ್ಲ. ಕಿಚನ್‌ನಲ್ಲಿ ಯಾವ ಅಡುಗೆ ಬೇಯುವುದು ಎಂಬುದರಿಂದ ನಾವು ಯಾರೊಂದಿಗೆ ಜೀವಿಸಬಹುದು ಎಂಬುದರ ತನಕ ಎಲ್ಲಾ ಅಂಶಗಳ ಮೇಲೂ ಪರಿಣಾಮ ಬೀರುತ್ತೆ ಎಂಬುದು ಗೊತ್ತಿರುವಾಗಲೂ ಯಾಕೀ ಅಸಡ್ಡೆ?

ಏಕೆಂದರೆ, ಸಮಾನತೆ ಎಂಬುದು ಹೊಸ ಪರಿಕಲ್ಪನೆ. ಎಲ್ಲರಿಗೂ ಸಮಾನ ವೇತನ ಮುಂತಾದವು ದೊರಕಬೇಕು ಎಂತಿಲ್ಲದಿದ್ದರೂ, ಎಲ್ಲರಿಗೂ ಸಮಾನ ಅವಕಾಶ ಇರಬೇಕು, ಆ ಒಂದು ಸಾಧ್ಯತೆ ಇರಬೇಕು ಎಂಬುದು ನಮ್ಮಲ್ಲಿ ಅನೇಕರಿಗೆ ಅರಿಗಿಸಿಕೊಳ್ಳಲು ಆಗುವುದಿಲ್ಲ. ಸಮಾಜವನ್ನು ಆಳಿದ ವ್ಯಕ್ತಿಗಳ ಗುಂಪು, ಸಂಸ್ಥೆಗಳು, ವರ್ಗಗಳು, ಜಾತಿಗಳು ಮುಂತಾದವೆಲ್ಲ, ಇದನ್ನು ಮೂಲಭೂತವಾಗಿ ವಿರೋಧಿಸುತ್ತಲೇ ಬರುತ್ತವೆ. ರಾಜಕೀಯವೆಂಬುದು ತಮ್ಮ ಶಕ್ತಿ ಕಸಿದುಕೊಳ್ಳುವ ಹತಾರ ಹಾಗಾಗಿ ರಾಜಕೀಯವನ್ನೇ ಕೆಟ್ಟದ್ದು ಎಂದು ಬಿಂಬಿಸಿಬಿಟ್ಟರೆ, ಅಲ್ಲಿಗೆ ಅವರ ಅರ್ಧ ಕೆಲಸವೇ ಮುಗೀತು.

ಹುಡುಕಾಟ | ಮಾರ್ಕ್ ಟಲಿಯ ಪುಸ್ತಕ ಮತ್ತು ಅದರ ಪರ್ಫೆಕ್ಟ್ ಓದುಗ…

ಇದುವೇ ಈಗ ಆಗುತ್ತಿರುವುದು, ಆಗಿದ್ದು. ಹೊರಬರಲು ದಾರಿ ಇದೆಯೇ? ಖಂಡಿತವಾಗಿಯೂ ಇದೆ. ಆದರೆ ಅದು ಇತಿಹಾಸವಾಗುವುದಿಲ್ಲ. ಕೆಲವೇ ಕೆಲವು ಜನರು ಆಯಾ ದೇಶಗಳ, ಹಲವಾರು ದೇಶಗಳ ಮೇಲೆ ಪ್ರಾಬಲ್ಯ ಸಾಧಿಸುವುದರ ವಿರುದ್ಧ ವಿಶ್ವದಾದ್ಯಂತ ಅನೇಕರು ದುಡಿಯುತ್ತಲೇ ಇದ್ದಾರೆ. ನೆನಪಿಡಿ, ಪ್ರಜಾಪ್ರಭುತ್ವ ಎಂಬುದು ಕೇವಲ ಶೋಷಿತರಿಗೆ, ದಮನಿತರಿಗೆ, ಬಡವರಿಗೆ ಮಾತ್ರ ಲಾಭದಾಯಕವಾಗಿರುವುದಿಲ್ಲ, ಅದು ದೀರ್ಘಾವಧಿಯಲ್ಲಿ ಸಮಾಜವನ್ನು ಹಿಡಿತದಲ್ಲಿಟ್ಟುಕೊಳ್ಳಲು ಹಾತೊರೆಯುವ ಗುಂಪುಗಳಿಗೂ ಲಾಭದಾಯಕವಾಗಿಯೇ ಇರುತ್ತದೆ. ಹಾಗೂ ಹೆಚ್ಚಿನ ಜನರ ಒಳಿತಿಗಾಗಿ ತಮ್ಮ ಪ್ರಾಬಲ್ಯವನ್ನು ಕೈಬಿಟ್ಟ ಉದಾಹರಣೆಗಳೂ ಇತಿಹಾಸದಲ್ಲಿ ದಾಖಲಾಗಿವೆ. ಅದನ್ನು ಅವರು ಆ ದೃಷ್ಟಿಯಲ್ಲಿ ನೋಡಬೇಕಷ್ಟೆ. ಹಾಗೂ ಶೋಷಿತರು ರಾಜಕೀಯವನ್ನು ನಕಾರಾತ್ಮಕವಾಗಿ, ಬದಲಾವಣೆಯನ್ನು ವಿರೋಧಿಸುವವರಾಗಿ ನೋಡಿದ ಉದಾಹರಣೆಗಳೂ ಇವೆ. ಎಲ್ಲರೂ ಈ ರಾಜಕೀಯವೆಂಬ ಅದ್ಭುತ ವಿದ್ಯಮಾನವನ್ನು ಸಕಾರಾತ್ಮಕ ದೃಷ್ಟಿಯಲ್ಲಿ ನೋಡುವಂತೆ ಮಾಡುವುದೇ ನಮ್ಮ ಪರಮ ಕರ್ತವ್ಯ.

WhatsApp Image 2023 05 02 at 1.02.32 PM
ರಾಜಶೇಖರ್‌ ಅಕ್ಕಿ
+ posts

ಸಾಮಾಜಿಕ ಕಾರ್ಯಕರ್ತ. ನಾಟಕ ಮತ್ತು ಸಿನೆಮಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ʼಜಾಗೃತ ಕರ್ನಾಟಕʼದ ಸಕ್ರಿಯ ಸದಸ್ಯ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ರಾಜಶೇಖರ್‌ ಅಕ್ಕಿ
ರಾಜಶೇಖರ್‌ ಅಕ್ಕಿ
ಸಾಮಾಜಿಕ ಕಾರ್ಯಕರ್ತ. ನಾಟಕ ಮತ್ತು ಸಿನೆಮಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ʼಜಾಗೃತ ಕರ್ನಾಟಕʼದ ಸಕ್ರಿಯ ಸದಸ್ಯ.

2 COMMENTS

  1. ಒಂದು ಅರ್ಥಪೂರ್ಣವಾದ ಸಾಮಾಜೋ- ರಾಜಕೀಯ ಚಿಂತನೆಯ ಬರಹವಿದು. ಇಡೀ ನಮ್ಮ ಬದುಕೇ ಒಂದಲ್ಲ ಒಂದು ರೀತಿ ರಾಜಕಾರಣದಿಂದ ಕೂಡಿರುತ್ತದೆ. ವ್ಯವಸ್ಥೆಯನ್ನು ಒಪ್ಪಿಕೊಂಡು ಹೋಗುವುದು ಮತ್ತು ವಿರೋಧಿಸುವುದು ಎರಡು ಕೂಡ ಸಾಮಾಜೋ ರಾಜಕೀಯ ವ್ಯವಸ್ಥೆಯ ಫಲಗಳು. ಆದರೆ ಪ್ರತಿರೋಧ ಮುಖ್ಯವೆಂಬ ಅಕ್ಕಿಯವರ ಆಶಯ ಮಹತ್ವದ್ದು. ಭಿನ್ನ ಒಳನೋಟಗಳುಳ್ಳ ಅದ್ಭುತ ಚಿಂತಕರು ‘ಜಾಗೃತ ಕರ್ನಾಟಕ’ದ ರಾಜಶೇಖರ ಅಕ್ಕಿಯವರು. ಮುಂದುವರಿಸಿ ಸರ್.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನಯಾನ | ಸನಾತನ ಧರ್ಮವು ಶರಣ ಧರ್ಮಕ್ಕೆ ಶರಣಾಗತವಾಗಿದೆ

ಶರಣರು ಸನಾತನ ಬ್ರಾಹ್ಮಣ ಧರ್ಮದ ಷಡ್ದರ್ಶನ ಪರಿಕಲ್ಪನೆಯನ್ನು ಹಾಗೂ ಸಮಯಾದಿ ಶೈವಗಳೆಲ್ಲವನ್ನು...

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

Download Eedina App Android / iOS

X