ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಇತ್ತೀಚೆಗೆ ನರೇಂದ್ರ ಮೋದಿ ಅವರನ್ನು ತಮ್ಮ ನೆಚ್ಚಿನ ನಟ ಎಂದು ಹೇಳಿಕೊಂಡಿದ್ದಾರೆ. ರಾಜಸ್ಥಾನ ಸಿಎಂ ಹೇಳಿಕೆಯು ಈಗಾಗಲೇ ‘ಪ್ರಧಾನಿ ನಟ’ ಎಂದು ಟೀಕಿಸುತ್ತಿರುವ ವಿಪಕ್ಷಗಳಿಗೆ ಉತ್ತಮ ದಾಳದಂತಾಗಿದೆ. ಭಜನ್ ಲಾಲ್ ಹೇಳಿಕೆ ಬಳಿಕ ವಿರೋಧ ಪಕ್ಷಗಳು ಪ್ರಧಾನಿ ಮತ್ತು ಬಿಜೆಪಿಯನ್ನು ಗೇಲಿ ಮಾಡುತ್ತಿದೆ.
ಭಾನುವಾರ ರಾತ್ರಿ ಜೈಪುರದಲ್ಲಿ ನಡೆದ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ (ಐಐಎಫ್‌ಎ) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿಎಂ ಶರ್ಮಾ ಪತ್ರಕರ್ತರೊಂದಿಗೆ ಸಂವಾದ ನಡೆಸಿದ್ದಾರೆ. ಈ ವೇಳೆ ಪತ್ರಕರ್ತರು, “ನಿಮ್ಮ ನೆಚ್ಚಿನ ನಟ ಯಾರು” ಎಂದು ಭಜನ್ ಲಾಲ್ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಲಾಲ್, “ನರೇಂದ್ರ ಮೋದಿ ಅವರು” ಎಂದು ಹೇಳಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ವಿಶ್ವದಲ್ಲೇ ಅತಿ ಹೆಚ್ಚು ಶಸ್ತ್ರಾಸ್ತ್ರ ಆಮದು: ಪ್ರಧಾನಿ ಮೋದಿಗೆ ಯುದ್ಧ ದಾಹವೇ?
ಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ರಾಜಸ್ಥಾನದ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋತಾಸ್ರಾ, “ಮೋದಿ ಅವರು ನಾಯಕರಲ್ಲ, ಅವರು ನಟ ಎಂದು ನಾವು ಬಹಳ ಸಮಯದಿಂದ ಹೇಳುತ್ತಿದ್ದೇವೆ. ತಡವಾಗಿಯಾದರೂ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳ ಅರಿವಿಗೆ ಅದು ಬಂದಿದೆ. ಅವರೂ ಕೂಡಾ ಮೋದಿ ಅವರು ನಾಯಕರಲ್ಲ, ಅವರು ನಟರು ಎಂದು ಹೇಳಲು ಪ್ರಾರಂಭಿಸಿದ್ದಾರೆ. ಅವರು ಕ್ಯಾಮೆರಾದ ಮುಂದೆ ನಟಿಸುವುದರಲ್ಲಿ, ಟೆಲಿಪ್ರಾಂಪ್ಟರ್ ಬಳಸಿ ಮಾತನಾಡುವುದರಲ್ಲಿ, ವೇಷಭೂಷಣಗಳನ್ನು ಧರಿಸುವು ವಿಚಾರದಲ್ಲಿ ಉತ್ತಮ ಕೌಶಲ್ಯವನ್ನು ಮೋದಿ ಹೊಂದಿದ್ದಾರೆ” ಎಂದು ಗೇಲಿ ಮಾಡಿದ್ದಾರೆ.
ಇನ್ನು ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು ಭಜನ್ ಲಾಲ್ ಅವರನ್ನು ಟ್ಯಾಗ್ ಮಾಡಿದ್ದು, “ನೀವು ಹೇಳಿದ್ದು ಸರಿ ಭಜನ್ ಲಾಲ್ ಅವರೇ, ಪ್ರಧಾನಿ ನರೇಂದ್ರ ಮೋದಿ ಉತ್ತಮ ನಟರಾಗಿದ್ದಾರೆ. ಆದರೆ ಅವರು ತುಂಬಾ ಅತಿಯಾಗಿ ನಟಿಸಲು ಪ್ರಾರಂಭಿಸಿದ್ದಾರೆ ಎಂದು ನಿಮಗೆ ಅನಿಸುವುದಿಲ್ಲವೇ?” ಎಂದು ಕುಟುಕಿದ್ದಾರೆ.
ರಾಜಸ್ಥಾನ ಸಿಎಂ ಹೇಳಿಕೆ ವಿಚಾರದಲ್ಲಿ ಬಿಜೆಪಿ ಮತ್ತು ಮೋದಿ ಅವರನ್ನು ಗೇಲಿ ಮಾಡುವ ಅವಕಾಶವನ್ನು ಆಮ್ ಆದ್ಮಿ ಪಕ್ಷವೂ ಬಿಟ್ಟಿಲ್ಲ. ಈ ಬಗ್ಗೆ ತನ್ನ ಎಕ್ಸ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಎಎಪಿ, “ಈ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಗಿಂತ ದೊಡ್ಡ ನಟ ಎಂದಿಗೂ ಇರಲಿಲ್ಲ ಮತ್ತು ಎಂದಿಗೂ ಇರುವುದಿಲ್ಲ ಎಂದು ಬಿಜೆಪಿಯ ಮುಖ್ಯಮಂತ್ರಿಗಳು ಮತ್ತು ನಾಯಕರು ಸ್ವತಃ ನಂಬುತ್ತಾರೆ” ಎಂದು ಬರೆದುಕೊಂಡಿದೆ.
ಇದನ್ನು ಓದಿದ್ದೀರಾ? ಹಿಂದುತ್ವ-ಮುಸ್ಲಿಂ ದ್ವೇಷಕ್ಕೆ ದಂಡಿಸಿದ ಫಲಿತಾಂಶ; ಅಬ್ಬರಿಸಿ ಮುಗ್ಗರಿಸಿದ ಮೋದಿ
ಆದರೆ ಬಿಜೆಪಿ ವಕ್ತಾರ ಲಕ್ಷ್ಮಿಕಾಂತ್ ಭಾರದ್ವಾಜ್ ಮುಖ್ಯಮಂತ್ರಿ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. “ಸಿಎಂಗೆ ನಿಮ್ಮ ನೆಚ್ಚಿನ ಹಿರೋ (ನಾಯಕ) ಯಾರು ಎಂದು ಕೇಳಲಾಗಿತ್ತು. ಆದ್ದರಿಂದ ಸಿಎಂ ಮೋದಿ ಎಂದು ತಿಳಿಸಿದ್ದಾರೆ” ಎಂದು ಹೇಳಿಕೊಂಡಿದ್ದಾರೆ.
ಅಲ್ಪಸಂಖ್ಯಾತ ಪ್ರಾಬಲ್ಯವಿರುವ ಪ್ರದೇಶದಲ್ಲಿ ಚುನಾವಣೆ ಪ್ರಚಾರಕ್ಕೆ ಹೋದಾಗ ಮುಸ್ಲಿಮರನ್ನು, ಪ್ರವಾದಿಗಳನ್ನು ಹಾಡಿಹೊಗಳುವ ಪ್ರಧಾನಿ ನರೇಂದ್ರ ಮೋದಿ, ಹಿಂದೂಗಳು ಹೆಚ್ಚಾಗಿರುವ ಪ್ರದೇಶಕ್ಕೆ ಬಂದಾಗ ತಮ್ಮ ವರಸೆ ಬದಲಾಯಿಸುತ್ತಾರೆ. ಸಿನಿಮಾದಲ್ಲಿ ನಟಿಸುವ ನಟರು ಪಾತ್ರಕ್ಕೆ ತಕ್ಕುದಾಗಿ ತನ್ನ ನಟನೆ, ಡೈಲಾಗ್‌ಗಳನ್ನು ಹೇಗೆ ಬದಲಾಯಿಸಿಕೊಳ್ಳುತ್ತಾರೋ ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ಬೆಳಿಗ್ಗೆಯೊಂದು ಹೇಳಿಕೆ, ಮಧ್ಯಾಹ್ನವೊಂದು ಹೇಳಿಕೆ ನೀಡುತ್ತಾ ಬಂದಿದ್ದಾರೆ. ಈ ಮೂಲಕವೇ ವಿಪಕ್ಷಗಳಿಂದ ‘ನಟ’ ಎಂದು ಮೋದಿ ಕರೆಸಿಕೊಂಡಿದ್ದಾರೆ.
