ಶುಕ್ರವಾರ ಹೋಳಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಸಂಭಲ್‌ನಲ್ಲಿರುವ ಹತ್ತು ಮಸೀದಿಗಳನ್ನು ಟಾರ್ಪಾಲ್‌ನಿಂದ ಮುಚ್ಚಲು ಉತ್ತರ ಪ್ರದೇಶ (ಯುಪಿ) ಆಡಳಿತ ನಿರ್ಧರಿಸಿದೆ.
ಮಾರ್ಚ್ 14ರಂದು ಬಣ್ಣಗಳ ಹಬ್ಬವಾದ ಹೋಳಿ ಮತ್ತು ರಂಜಾನ್ ‘ಜುಮ್ಮಾ’ ಇದೆ. ಸುಮಾರು ಅರವತ್ತು ವರ್ಷಗಳಿಗೊಮ್ಮೆ ಎರಡೂ ಒಂದೇ ದಿನ ಬರುತ್ತದೆ ಎಂದು ಹೇಳಲಾಗಿದೆ. ಆದರೆ ಈ ವಿಚಾರದಲ್ಲಿ ಉತ್ತರ ಪ್ರದೇಶದಲ್ಲಿ ತೀವ್ರ ವಿವಾದ ಎದ್ದಿದೆ. ಹೋಳಿ ವರ್ಷಕ್ಕೊಮ್ಮೆ ಬರುವುದು, ಜುಮ್ಮಾ ಪ್ರತಿ ಶುಕ್ರವಾರವೂ ಬರುತ್ತದೆ. ಮುಸ್ಲಿಮರು ಈ ಒಂದು ದಿನ ಮನೆಯಲ್ಲಿಯೇ ಇರಿ ಎಂಬ ಅಸಮರ್ಥನೀಯ ಹೇಳಿಕೆಗಳನ್ನು ಬಿಜೆಪಿ ನಾಯಕರು ನೀಡಿದ್ದಾರೆ. ಇದನ್ನು ವಿರೋಧಿಸಿ ಎಲ್ಲಾ ಧರ್ಮಗಳನ್ನು ಒಂದೇ ತಕ್ಕಡಿಯಲ್ಲಿ ತೂಗಬೇಕಾದ ಸಿಎಂ ಯೋಗಿ ಆದಿತ್ಯನಾಥ್, ಈ ಖಂಡನಾರ್ಹ ಹೇಳಿಕೆಯನ್ನು ಹಾಡಿಹೊಗಳಿದ್ದಾರೆ.
ಇದನ್ನು ಓದಿದ್ದೀರಾ? ವಿಜಯಪುರ | ರಂಜಾನ್, ಹೋಳಿ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡಿ: ಪೊಲೀಸ್ ಸಿಪಿಐ ಮಹಮ್ಮದ್
ಇದೀಗ ಯುಪಿ ಆಡಳಿತದ ತಯಾರಿ ಬಗ್ಗೆ ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಸಂಭಲ್ ಎಸ್‌ಪಿ ಶ್ರೀಶ್ ಚಂದ್ರ, “ಕೋಮು ಸಾಮರಸ್ಯವನ್ನು ಕಾಪಾಡಿಕೊಳ್ಳಲು ಮತ್ತು ಎರಡೂ ಸಮುದಾಯಗಳು ತಮ್ಮ ತಮ್ಮ ಹಬ್ಬಗಳನ್ನು ಪೂರ್ಣ ಸಂತೋಷದಿಂದ ಆಚರಿಸಲು ಅನುಕೂಲವಾಗುವಂತೆ ನಾವು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ” ಎಂದು ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
“ಚೌಪಾಯಿ ಮೆರವಣಿಗೆ ನಡೆಯುವ ಮಾರ್ಗದಲ್ಲಿರುವ ಹತ್ತು ಮಸೀದಿಗಳನ್ನು ಗುರುತಿಸಲಾಗಿದೆ. ಎರಡು ಸಮುದಾಯಗಳ ನಡುವೆ ಯಾವುದೇ ಅಡಚಣೆ ಅಥವಾ ಉದ್ವಿಗ್ನತೆ ಉಂಟಾಗದಂತೆ ನೋಡಿಕೊಳ್ಳಲು ಅವೆಲ್ಲವನ್ನೂ ಮುಚ್ಚಲಾಗುವುದು” ಎಂದು ಹೇಳಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಹೋಳಿಯಂದು ಮುಸ್ಲಿಮರು ಮನೆಯೊಳಗಿರಿ: ಬಿಹಾರ ಬಿಜೆಪಿ ಶಾಸಕರ ಹೇಳಿಕೆಗೆ ತೇಜಸ್ವಿ ತಿರುಗೇಟು
ಚೌಪಾಯಿ ಎಂದರೆ ಹೋಳಿ ಸಮಯದಲ್ಲಿ ನಡೆಸಲಾಗುವ ಒಂದು ಸಾಂಪ್ರಾದಾಯಿಕ ಪದ್ಧತಿಯಾಗಿದೆ. ಹೋಳಿ ಆಡುತ್ತಾ ಮೆರವಣಿಗೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಹಾದುಹೋಗುವ ಆ ಮಸೀದಿಗಳನ್ನು ಮುಚ್ಚಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿ ಕೈಬಿಡಲಾಗದು ಎಂದು ಹೇಳಿಕೊಂಡಿದ್ದಾರೆ.
ಇನ್ನು ಚೌಪಾಯಿ ಮೆರವಣಿಗೆ ಮತ್ತು ಶುಕ್ರವಾರದ ಪ್ರಾರ್ಥನೆಯನ್ನು ನಡೆಸುವ ಸಮಯವನ್ನು ಬದಲಾಯಿಸಲು ಉಭಯ ನಾಯಕರುಗಳು ಒಪ್ಪಂದ ಮಾಡಿಕೊಂಡಿದ್ದಾರೆ. ಇದರಿಂದಾಗಿ ಯಾವುದೇ ಸಮಸ್ಯೆ ಉಂಟಾಗದು ಎಂದು ವರದಿಯಾಗಿದೆ.
ಕಳೆದ ವರ್ಷ ನವೆಂಬರ್ 24ರಂದು ಉತ್ತರ ಪ್ರದೇಶದ ಸಂಭಲ್‌ನಲ್ಲಿ ಶಾಹಿ ಜಾಮಾ ಮಸೀದಿಯ ಸಮೀಕ್ಷೆ ವೇಳೆ ಹಿಂಸಾಚಾರ ನಡೆದಿದ್ದು, ನಾಲ್ವರು ಮೃತಪಟ್ಟಿದ್ದಾರೆ, ಹಲವು ಮಂದಿ ಗಾಯಗೊಂಡಿದ್ದಾರೆ. ಹಿಂಸಾಚಾರದ ಬಳಿಕ ಹಲವು ಮಂದಿ ತಮ್ಮ ಆತಂಕದಲ್ಲಿ ತಮ್ಮ ಮನೆ ತೊರೆದಿದ್ದಾರೆ. ಈ ಕುರಿತು ಸಂಭಲ್ ಪೊಲೀಸ್ ವರಿಷ್ಠಾಧಿಕಾರಿ ಕ್ರಿಶನ್ ಕುಮಾರ್ ಪ್ರತಿಕ್ರಿಯಿಸಿ, ಹಿಂಸಾತ್ಮಕ ಪ್ರತಿಭಟನೆ ನಡೆದಿದ್ದ ಪ್ರದೇಶದಲ್ಲಿ ಸುಮಾರು 1,000 ಮನೆಗಳಿಗೆ ಬೀಗ ಹಾಕಲಾಗಿದೆ ಎಂದು ತಿಳಿಸಿದ್ದರು. ಇದೀಗ ಹೋಳಿ ಮತ್ತು ಜುಮ್ಮಾ ಸಂದರ್ಭದಲ್ಲಿ ಘರ್ಷಣೆ ನಡೆಯುವ ಆತಂಕ ಎದುರಾಗಿದೆ.
